ಗುಳೇದಗುಡ್ಡ: ಸಮಾಜ ಸೇವೆಯಲ್ಲಿ ತೊಡಗಿ ಭಾವೈಕ್ಯತೆಯಿಂದ ಕಾರ್ಯನಿರ್ವಹಿಸಿ, ಸಮರ್ಥ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಡಾ.ಶಾಂತಾ ಕರಡಿಗುಡ್ಡ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂದು ಗುರುಸಿದ್ಧೇಶ್ವರ ಬ್ರಹನ್ಮಠದ ಜಗದ್ಗುರು ಬಸವರಾಜ ಶ್ರೀಗಳು ಹೇಳಿದರು. ಸ್ಥಳೀಯ ಡಾ.ಶಾಂತಾ ಕರಡಿಗುಡ್ಡ ಅವರ ಶಿಷ್ಯಬಳಗ, ಅಭಿಮಾನಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸಾರ್ಥಕ ಬದುಕು ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಮನುಷ್ಯ ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗಬಾರದು, ನಾವು ಸಂಪೂರ್ಣ ಅಸಮರ್ಥತೆ, ಅಶಕ್ತತೆಯಾದಾಗ ಮಾತ್ರ ನಾವು ನಿವೃತ್ತಿಯಾಗಬೇಕು. ಡಾ.ಶಾಂತಾ ಕರಡಿಗುಡ್ಡ ಅವರ ಆದರ್ಶ ಬದುಕು ಇಂದಿನ ಶಿಕ್ಷಕ ಸಮುದಾಯದವರಿಗೆ ಮಾದರಿಯಾಗಬೇಕು ಎಂದರು.
ಖ್ಯಾತ ಕಥೆಗಾರ ಅಬ್ಟಾಸ ಮೇಲಿನಮನಿ ಮಾತನಾಡಿ. ನಿವೃತ್ತಿ ಬದುಕನ್ನು ಜೀವನದ ಹೊಸ ಆರಂಭ ಎಂದು ತಿಳಿದುಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಯಾರು ಮನುಷ್ಯರನ್ನು ರೂಪಿಸುತ್ತಾರೋ ಅವರೇ ನಿಜವಾದ
ಶಿಕ್ಷಕರಾಗುತ್ತಾರೆ. ನಲವತ್ತು ವರ್ಷಗಳವರೆಗೆ ಶಿಕ್ಷಕಿಯಾಗಿ ಸೇವೆಸಲ್ಲಿಸಿದ ಡಾ. ಶಾಂತಾ ಕರಡಿಗುಡ್ಡ ಅವರು ಶಿಕ್ಷಕಿಯಾಗಿ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿ, ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಮರಡಿಮಠದ ಕಾಶೀನಾಥ ಸ್ವಾಮಿಗಳು, ಸುಮಡ್ಡಿ ಸಿಎಸ್‌ಐ ಚರ್ಚನ ವೈ.ಜೆ.ಹದ್ದನ್ನವರ, ಸಿ.ಎಸ್.ಹೂಲಗೇರಿ, ಬಸೀರ್ ಅಹಮದ್ ಮುಪ್ತಿ, ಜಯವಂತ ಹಿರೇಕೋಡಿ ಸಾನ್ನಿಧ್ಯ ವಹಿಸಿದ್ದರು. ಡಾ. ಪ್ರಕಾಶ ನರಗುಂದ, ಪತ್ರಕರ್ತ ಸುರೇಶ ವಗ್ಗಾ ಅವರ ಸಂಪಾದನೆಯ ಸಾರ್ಥಕ ಬದುಕು ಗ್ರಂಥ ಹಾಗೂ ವಸಂತ ಕರಡಿಗುಡ್ಡ ಅವರ ಕಂದನ ಕರೆಯೋಲೆ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.
ಮಾಜಿ ಶಾಸಕ ರಾಜಶೇಖರ ಶೀಲವಂತ, ಮಹೇಶ ಹೊಸಗೌಡರ, ಮಹಾಂತೇಶ ಮಮದಾಪುರ, ಪುರಸಭೆ ಅಧ್ಯಕ್ಷ ಶಿವಕುಮಾರ ಹಾದಿಮನಿ, ಮುಖಂಡ ಹೊಳಬಸು ಶೆಟ್ಟರ, ಸಾಹಿತಿ ಬಸವರಾಜ ಗವಿಮಠ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ. ಮಾಗಿ, ಪುರಸಭೆ ಸದಸ್ಯೆ ಅಮೀನಾಬಿ ಮುಜಾಹಿದ್, ವೈ.ಜಿ. ಬ್ಯಾಡಗಿ, ಎಂ.ಎಂ.ಜಮಖಾನಿ, ವಸಂತ ಕರಡಿಗುಡ್ಡ, ಶಾಂತವೀರ ಕರಡಿಗುಡ್ಡ, ಈಶ್ವರ ಕಂಠಿ, ಮಹಾದೇವ ಜಗತಾಪ, ಎನ್.ಬಿ. ಪೂಜಾರ, ಗೀತಾ ಕರಡಿಗುಡ್ಡ, ಈರಣ್ಣ ತಾವರಗೇರಿ ಸೇರಿದಂತೆ ಶಿಷ್ಯರು, ಅಭಿಮಾನಿಗಳು ಭಾಗವಹಿಸಿದ್ದರು.