Advertisement

ಎರಡ್ಮೂರು ದಿನದಲ್ಲಿ ಕೇಂದ್ರದ ನೆರೆ ಅನುದಾನ ಬಿಡುಗಡೆ

09:34 PM Aug 29, 2019 | Team Udayavani |

ಮೈಸೂರು: ರಾಜ್ಯದ ನೆರೆ ಪರಿಹಾರ ಕಾರ್ಯಕ್ಕೆ ಕೇಂದ್ರ ಸರ್ಕಾರ ಮೂರ್‍ನಾಲ್ಕು ದಿನಗಳಲ್ಲಿ ಅನುದಾನ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಗುರುವಾರ ಮೈಸೂರಿಗೆ ಆಗಮಿಸಿದ ಅವರು, ನಗರದ ಲಲಿತಮಹಲ್‌ ಹೆಲಿಪ್ಯಾಡ್‌ನ‌ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಪರಿಹಾರ: ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾಗಿರುವವರಿಗೆ ತತಕ್ಷಣದ ಪರಿಹಾರವಾಗಿ ರಾಜ್ಯ ಸರ್ಕಾರ ಹತ್ತು ಸಾವಿರ ರೂ.ಗಳನ್ನು ನೀಡಿದೆ. ಭಾರೀ ಮಳೆ ಮತ್ತು ನೆರೆಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದಲೇ ಹೊಸ ಮನೆ ಕಟ್ಟಿಸಿಕೊಡಲಾಗುವುದು, ಇಲ್ಲವೇ ಹೊಸ ಮನೆ ಕಟ್ಟಿಕೊಳ್ಳಲು ನೆರವು ನೀಡಲಾಗುವುದು ಎಂದರು. ಮೂವರು ಉಪ ಮುಖ್ಯಮಂತ್ರಿಗಳ ನೇಮಕದ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರಾಕರಿಸಿದರು.

ಚಾಮುಂಡೇಶ್ವರಿಗೆ ಪೂಜೆ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ದೇವಸ್ಥಾನದ ಅರ್ಚಕರು ವೇದ-ಮಂತ್ರ ಘೋಷಗಳೊಂದಿಗೆ ಬರಮಾಡಿಕೊಂಡರು. ಕಂದಾಯ ಸಚಿವ ಆರ್‌.ಅಶೋಕ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಅವರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ಅವರು ಯಡಿಯೂರಪ್ಪ ಅವರ ಹೆಸರಿನಲ್ಲಿ ಅರ್ಚನೆ ಮಾಡಿ,ಶಾಲು ಹೊದಿಸಿ ಸನ್ಮಾನಿಸಿ ಫ‌ಲ-ತಾಂಬೂಲ, ಪ್ರಸಾದ ನೀಡಿ ಗೌರವಿಸಿದರು.

ಜಿಟಿಡಿ ಸ್ವಾಗತ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುವ ಮುನ್ನವೇ ದೇವಸ್ಥಾನಕ್ಕೆ ಆಗಮಿಸಿ ಕಾದಿದ್ದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಯಡಿಯೂರಪ್ಪ ಅವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.

ರಾಮದಾಸ್‌ ಉಪಸ್ಥಿತಿ: ಜಿಲ್ಲಾ ಉಸ್ತುವಾರಿ ಸಚಿವರು ಕರೆದಿದ್ದ ದಸರಾ ಸಭೆಯಿಂದ ದೂರ ಉಳಿದಿದ್ದ ಶಾಸಕ ಎಸ್‌.ಎ.ರಾಮದಾಸ್‌, ಯಡಿಯೂರಪ್ಪ ಅವರ ಆಗಮನದ ಹಿನ್ನೆಲೆಯಲ್ಲಿ ಹೆಲಿಪ್ಯಾಡ್‌ ಮತ್ತು ಚಾಮುಂಡಿಬೆಟ್ಟದಲ್ಲಿ ಜತೆಯಾಗಿದ್ದರು. ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಜಿಲ್ಲಾಡಳಿತದಿಂದ ಸ್ವಾಗತ ಕೋರಲಾಯಿತು.

Advertisement

ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಯಡಿಯೂರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಸಂಸದ ಪ್ರತಾಪ್‌ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಶಾಸಕರಾದ ಎಸ್‌.ಎ.ರಾಮದಾಸ್‌,ಎಲ್‌.ನಾಗೇಂದ್ರ ಪುಷ್ಪ ಗುತ್ಛ ನೀಡಿ ಸ್ವಾಗತಿಸಿದರು.

ಬಳಿಕ ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ,ದಕ್ಷಿಣ ವಲಯ ಐಜಿಪಿ ವಿಪುಲ್‌ಕುಮಾರ್‌ರೊಡನೆ ತೆರಳಿ ಪೊಲೀಸ್‌ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ವಿಧಾನಪರಿಷತ್‌ ಮಾಜಿ ಸದಸ್ಯ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಮೈಸೂರು ನಗರಾಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌ ಪಕ್ಷದ ಹಲವರು ಮುಖಂಡರು ಹಾಜರಿದ್ದರು.

ಸೆ.7ಕ್ಕೆ ರಾಜ್ಯಕ್ಕೆ ಮೋದಿ ಭೇಟಿ: ಸೆ.7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಜ್ಯದಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಅವರಿಗೆ ಅಂದು ಮನವರಿಕೆ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಕೇಂದ್ರದ ಅಧ್ಯಯನ ತಂಡ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಅದರ ಆಧಾರದ ಮೇಲೆ ಮೂರ್‍ನಾಲ್ಕು ದಿನಗಳಲ್ಲಿ ಪರಿಹಾರದ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next