ಬಲ್ಮಠ: ಸಂಘ-ಸಂಸ್ಥೆಗಳು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಳ್ಳುವುದು ಸಾಮಾನ್ಯ. ಆದರೆ ಪತ್ರಿಕೆ ಮತ್ತು ಸಾಹಿತ್ಯ ಕೃತಿಗಳ ಪ್ರಕಟನೆಯಿಂದ ಅವು ಶಾಶ್ವತ ನೆಲೆ ಕಂಡುಕೊಳ್ಳು ತ್ತವೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು. ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ಕುಡ್ಲ ಪೆವಿಲಿ ಯನ್ ಸಭಾಂಗಣದಲ್ಲಿ ‘ಸದಾಶಯ’
ತ್ತೈಮಾಸಿಕದ ಬಿಸು ಸಂಚಿಕೆಯನ್ನು ಅವರು ಬಿಡುಗಡೆಗೊಳಿಸಿದರು.
ಸಮಾಜದಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸೂಕ್ತ ವೇದಿಕೆ ಒದಗಿಸುವುದರೊಂದಿಗೆ ವರ್ಷದಲ್ಲಿ ಒಂದೆರಡು ಮೌಲಿಕ ಗ್ರಂಥಗಳನ್ನು ಹೊರತರುವ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದು ಸಂಘಟನೆಗಳ ಗುರಿಯಾಗಬೇಕು ಎಂದರು. ಪುತ್ತೂರು ಮಹಿಳಾ ಸರಕಾರಿ ಮಹಾ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲ ಮಾತನಾಡಿ, ಈ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ತುಳುವರ ಆಚರಣೆಯ ಮೂಲಕ ನಮ್ಮ ಮುಂದಿನ ಜನಾಂಗದಲ್ಲಿ ನಿಸರ್ಗದ ಜತೆಗಿನ ಒಡನಾಟದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಮೈನಾ ಎ. ಶೆಟ್ಟಿ ಉದ್ಘಾಟಿಸಿದರು. ಸದಾಶಯದ ಪ್ರಧಾನ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನ ಭಾಷಣ ಮಾಡಿದರು. ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್, ಉದ್ಯಮಿ ಲಕ್ಷ್ಮೀಶ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿ ಚರಣ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕವಿಗೋಷ್ಠಿ ನಡೆಯಿತು. ಕುದ್ರೆಪ್ಪಾಡಿ ಜಗನ್ನಾಥ ಆಳ್ವ, ನಾರಾಯಣ ರೈ ಕುಕ್ಕುವಳ್ಳಿ, ಅಂಡಾಲ ಗಂಗಾಧರ ಶೆಟ್ಟಿ, ಹ.ಸು. ಒಡ್ಡಂಬೆಟ್ಟು, ಹರೀಶ್ ಶೆಟ್ಟಿ ಸೂಡ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಶಾರದಾ ಶೆಟ್ಟಿ ಕಾವೂರು, ವಿಜಯಾ ಶೆಟ್ಟಿ ಸಾಲೆತ್ತೂರು, ದೇವಿಕಾ ನಾಗೇಶ್, ಅಕ್ಷಯ ಆರ್. ಶೆಟ್ಟಿ ಪೆರಾರ, ಮಾಲತಿ ಶೆಟ್ಟಿ ಮಾಣೂರು, ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ಆಶಾ ದಿಲೀಪ್ ರೈ ಸುಳ್ಯಮೆ, ವಿಜಯಲಕ್ಷ್ಮೀ ಪಿ. ರೈ ಕಲ್ಲಿಮಾರ್, ಮಲ್ಲಿಕಾ ಜೆ. ರೈ ಗುಂಡ್ಯಡ್ಕ, ರಾಜಶ್ರೀ ತಾರಾನಾಥ ರೈ, ವಿದ್ಯಾಶ್ರೀ ಎಸ್. ಶೆಟ್ಟಿ, ಸನ್ನಿಧಿ ಟಿ. ಶೆಟ್ಟಿ ಪೆರ್ಲ, ಭಾಸ್ಕರ ರೈ ಕುಕ್ಕುವಳ್ಳಿ ಕವಿತೆಗಳನ್ನು ವಾಚಿಸಿದರು.
ಸಂಘಟನ ಕಾರ್ಯದರ್ಶಿ ರಾಜಗೋಪಾಲ್ ರೈ ಸ್ವಾಗತಿಸಿದರು. ಸಂಪಾದಕ ಬಳಗದ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ವಂದಿಸಿದರು. ಪ್ರ. ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿ ನಿರೂಪಿಸಿದರು. ಬಳಿಕ ‘ಬಿಸು ಪದರಂಗಿತ’ ಜರಗಿತು.
ಸಮ್ಮಾನ
ಮೇಯರ್ ಭಾಸ್ಕರ ಕೆ., ವಸಂತ ಶೆಟ್ಟಿ ಬೆಳ್ಳಾರೆ ಅವರನ್ನು ‘ಬಿಸು-ತುಳುವರ ಯುಗಾದಿ’ ವಿಶೇಷ ಗೌರವದೊಂದಿಗೆ ಸಮ್ಮಾನಿಸಲಾಯಿತು.