ಬೆಂಗಳೂರು: ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಲಕ್ಷ ಪೊಲೀಸರ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸದ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದಲ್ಲಿ 84 ಕೈದಿಗಳ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಪಿಎಸ್ ಐ ಅಕ್ರಮದ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಯಾವ ಒತ್ತಡವೂ ಇಲ್ಲ. ಸಿಐಡಿಗೆ ಫ್ರೀ ಹ್ಯಾಂಡ್ ನೀಡಿದ್ದೇವೆ. ಇದರಲ್ಲಿ ರಾಜಕೀಯ ಮಾಡಬಾರದು. ವಿರೋಧ ಪಕ್ಷದ ನಾಯಕರು ಹಿರಿಯ ರಾಜಕಾರಣಿಗಳು. ಅವರ ಆಡಳಿತ ಅವಧಿಯಲ್ಲಿ ಎಷ್ಟು ದುರ್ನಾತ ಆಡುತ್ತಿತ್ತು ಎಂಬ ಬಗ್ಗೆ ದಾಖಲೆ ನೀಡಬಲ್ಲೆ ಎಂದು ತಿರುಗೇಟು ನೀಡಿದರು.
ಚಂದ್ರು ಹತ್ಯೆ ಪ್ರಕರಣ ಚಾರ್ಜ್ ಶೀಟ್ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚಂದ್ರು ಹತ್ಯೆಗೆ ಭಾಷೆಯೂ ಒಂದು ಕಾರಣವಾಗಿದೆ. ಚಾರ್ಜ್ ಶೀಟ್ ಬಗ್ಗೆ ನಾನು ಓದಿದ್ದೇನೆ. ಆದ್ರೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿಲ್ಲ. ಚಂದ್ರು ಹತ್ಯೆಗೆ ಭಾಷೆಯೂ ಒಂದು ಕಾರಣ ಎನ್ನುವುದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳಿಗೆ ನಿಂದಿಸಿ, ವಾಹನ ಜಖಂ
ಜೈಲುಗಳಲ್ಲಿ ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮ ಕೈಗೊಂಡಿದ್ದಾರೆ. ಮುರುಗನ್ ಸಮಿತಿ ವರದಿ ಆಧಾರದಲ್ಲಿ ಪರಪ್ಪನ ಅಗ್ರಹಾರದಲ್ಲಿ 15 ಸಿಬ್ಬಂದಿ ಅಮಾನತು ಮಾಡಲಾಗಿದೆ. 30 ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಈಗ ಬಹುತೇಕ ಹೊಸ ಸಿಬ್ಬಂದಿಗಳಿದ್ದಾರೆ. ಜೈಲು ಸಿಬ್ಬಂದಿ ಎಚ್ಚರದಿಂದ ಇದ್ದಾರೆ. ಫೋನ್, ನಿಷೇಧಿತ ವಸ್ತು ಬಳಕೆ ಮಾಡಿದರೆ ಎಫ್ ಐಆರ್ ದಾಖಲಾಗುತ್ತಿದೆ. ಕೈದಿಗಳ ಶಿಕ್ಷೆ ಪ್ರಮಾಣ ಮುಗಿದ ಬಳಿಕ ಐದು ವರ್ಷ ಶಿಕ್ಷೆ ವಿಧಿಸುವ ಅವಕಾಶವಿದೆ. ಸಿಬ್ಬಂದಿಯ ವಿರುದ್ಧವೂ ಎಫ್ ಐಆರ್ ದಾಖಲು ಮಾಡಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.