ಕಿರುತೆರೆ ಖ್ಯಾತಿಯ ಸೌರಭ್ ಕುಲಕರ್ಣಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ “ಸಿರಿ ಲಂಬೋದರ ವಿವಾಹ’. ಎಸ್.ಎಲ್.ವಿ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಇದೇ ಫೆ 17ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಬಿಡುಗಡೆಯ ಹೊಸ್ತಿಲಿನಲ್ಲಿರುವ ಚಿತ್ರತಂಡ ಇತ್ತೀಚೆಗೆ ತನ್ನ ಚಿತ್ರದ ಟ್ರೇಲರ್ ರಿಲೀಸ್ ಮಾಡಿದೆ. ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ವಿಭಿನ್ನ ಯೋಜನೆಗಳೊಂದಿಗೆ ದುಬೈ, ಅಬುದಾಬಿ, ಮಸ್ಕತ್, ಸೊಹಾಗ್ ನಲ್ಲಿ ಪ್ರಿಮೀಯರ್ ಶೋಗಳ ಮೂಲಕ ಅನಿವಾಸಿ ಕನ್ನಡಿಗರನ್ನು ತಲುಪಿದೆ. ಕಿರುತೆರೆ ಹಿರಿತೆರೆಯ ಮೂಲಕ ಜನರಿಗೆ ಹತ್ತಿರವಾದ ಸೆಲೆಬ್ರಿಟಿಗಳನ್ನು ಬಳಸಿ, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಮೂಲಕ ಹಾಗೂ ಮನೆಗೆ ಮನೆಗೆ ತಲುಪುವಲ್ಲಿ ಹೊಸ ಯೋಜನೆಗಳನ್ನು ಚಿತ್ರತಂಡ ರೂಪಿಸಿ, ಚಿತ್ರದ ಪ್ರಚಾರವನ್ನು ಕೈಗೊಳ್ಳುತ್ತಿದೆ.
ನಿರ್ದೇಶಕ ಸೌರಭ್ ಕುಲಕರ್ಣಿ ಮಾತನಾಡಿ, “ಚಿತ್ರದ ಕನಸು ಹೊತ್ತಾಗ ಮೊದಲು ನಾನೊಬ್ಬ ಪ್ರೇಕ್ಷಕನಾಗಿ ಯಾವ ರೀತಿಯ ಚಿತ್ರಗಳು ನೋಡ ಬಯಸಿದ್ದೆ. ಯಾವ ರೀತಿ ಚಿತ್ರ ಇದ್ದರೆ ಪ್ರೇಕ್ಷಕ ನೋಡುತ್ತಾನೆ ಎಂಬುದರ ಕುರಿತು ಮೊದಲು ಆಲೋಚನೆ ಮಾಡಿದೆ. ಜನರಿಗೆ ಕಾಮಿಡಿ ಇಷ್ಟ . ಹಾಗಾಗಿ ಕಾಮಿಡಿ ಕಥೆ ಬೇಕು, ಜೊತೆಯಲ್ಲಿ ಫೈಟ್ ಇರಬೇಕು, ಕಥೆಗೆ ಒಂದೊಳ್ಳೆ ರೋಚಕತೆಯೂ ಇರಬೇಕು. ಇವೆಲ್ಲವನ್ನೂ ಗಮನದಲ್ಲಿ ಇಟ್ಟ ಚಿತ್ರ ಮಾಡಿದ್ದೇನೆ. ಈಗಾಗಲೇ ಚಿತ್ರ ದುಬೈ, ಮಸ್ಕತ್ ಸೇರಿದಂತೆ 4 ದೇಶಗಳಲ್ಲಿ ಪ್ರೀಮಿಯರ್ ಶೋ ನಡೆಸಿದ್ದೇವೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.
ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿರುವ ರಾಜೇಶ್ ನಟರಂಗ ಮಾತನಾಡಿ, “ಎಸ್.ಎಲ್‌ವಿ ಕೂಡಾ ಒಂದು ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಚಿತ್ರ. ವಿದೇಶದಲ್ಲಿ ಚಿತ್ರವನ್ನು ಜನ ಮೆಚ್ಚಿದ ರೀತಿ ಕನ್ನಡನಾಡಿನಲ್ಲಿ ಜನ ಇಷ್ಟಪಡುವಂತಾಗಬೇಕು ಎಂದರು.
ಚಿತ್ರದ ನಾಯಕ, ನಾಯಕಿ ಸೇರಿದಂತೆ ಕಲಾವಿದರು, ತಂತ್ರಜ್ಞರು, ಸಹ ನಿರ್ಮಾಪಕರು ಚಿತ್ರದ ಕುರಿತು ಮಾತನಾಡಿದರು. ಚಿತ್ರದಲ್ಲಿ ಕಿರುತೆರೆ ನಟ ಅಂಜನ್ ಭಾರದ್ವಾಜ್ ನಾಯಕನಾಗಿ ಕಾಣಿಸಿಕೊಂಡಿದ್ದು. ನಟ ಮಂಡ್ಯ ರಮೇಶ್ ಮಗಳು ದಿಶಾ ರಮೇಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ, ಸುಂದರ್ ವೀಣಾ, ಬಲ ರಾಜವಾಡಿ, ರೋಹಿತ್ ನಾಗೇಶ್, ಪಿ ಡಿ ಸತೀಶ್ಚಂದ್ರ, ಕಾಮಿಡಿ ಕಿಲಾಡಿ ಸದಾನಂದ ಕಾಳೆ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಶಿವು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವರ್ಸ್ಯಾಟೋ ವೆಂಚರ್ಸ್, ಪವಮಾನ ಕ್ರಿಯೇಷನ್ಸ್ ಫೋರೆಸ್ ನೆಟ್ವರ್ಕ್ ಸಲ್ಯೂಷನ್ಸ್ ಹಾಗೂ ಧೂಪದ ದೃಶ್ಯ ಬ್ಯಾನರ್‌ಗಳ ಅಡಿಯಲ್ಲಿ ತಯಾರಾದ ಈ ಚಿತ್ರಕ್ಕೆ ಸುಮಾರು 20ಕ್ಕೂ ಹೆಚ್ಚು ಸಹ ನಿರ್ಮಾಪಕರ ಬಂಡವಾಳ ಹೂಡಿ ಚಿತ್ರ ನಿರ್ಮಿಸಿದ್ದಾರೆ.