Advertisement

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

11:49 PM May 10, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿರುವುದರಿಂದ ನೀತಿ ಸಂಹಿತೆಗೆ ವಿನಾಯಿತಿ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ)ಮನೋಜ್‌ ಕುಮಾರ್‌ ಮೀನಾ ಅವರಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಪತ್ರ ಬರೆದಿದ್ದಾರೆ.

Advertisement

ಈ ಪತ್ರವನ್ನು ಕೇಂದ್ರ ಚುನಾವಣ ಆಯೋಗಕ್ಕೆ ಕಳುಹಿಸಿಕೊಟ್ಟಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ನೀತಿ ಸಂಹಿತೆ ಸಡಿಲಗೊಳಿಸುವ ನಿರ್ಣಯವನ್ನು ಕೇಂದ್ರ ಚುನಾವಣ ಆಯೋಗದ ಅಂಗಳಕ್ಕೆ ರವಾನಿಸಿದೆ.

ಒಂದೆಡೆ ರಾಜ್ಯದ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿರುವ ಸರಕಾರ, ಮತ್ತೊಂದೆಡೆ ಬಜೆಟ್‌ ಅನುಷ್ಠಾನವನ್ನೂ ಮಾಡಬೇಕಿದೆ. ಬಜೆಟ್‌ಗೆ ಅನುಮೋದನೆ ದೊರೆತ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ್ದರಿಂದ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಅಂದಿನಿಂದ ಈವರೆಗೆ ಬಜೆಟ್‌ನಲ್ಲಿ ಘೋಷಿಸಿರುವ ಯಾವುದೇ ಕಾಮಗಾರಿಗಳು ಅನುಷ್ಠಾನಕ್ಕೆ ಬಂದಿಲ್ಲ.

ಟೆಂಡರ್‌ ಪ್ರಕ್ರಿಯೆಯನ್ನಾಗಲೀ, ಕಾರ್ಯಾದೇಶ ನೀಡುವಿಕೆ ಪ್ರಕ್ರಿಯೆಯನ್ನಾಗಲೀ ನಡೆಸಲಾಗಿಲ್ಲ.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಸಿಇಒಗೆ ಪತ್ರ ಬರೆದು ನೀತಿ ಸಂಹಿತೆ ಸಡಿಲಕ್ಕೆ ಮನವಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಲಹೆ ನೀಡಿದ್ದರು. ಅದರಂತೆ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

ಸಚಿವ ಪ್ರಿಯಾಂಕ್‌ರಿಂದಲೂ ಪತ್ರ
ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಎಲ್ಲ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ವಾಗಿರುವ ಕಾರಣ ಬರ ಹಾಗೂ ಕುಡಿಯುವ ನೀರು ನಿರ್ವ ಹಣೆ ಕುರಿತು ಸಭೆ ನಡೆಸಲು ಹಾಗೂ ಹಾಗೂ ಸಭೆಯ ನಿರ್ಧಾರಗಳಿಗೆ ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡಬೇಕೆಂದು ಅನುಮತಿ ಕೋರಿ ರಾಜ್ಯ ಮುಖ್ಯ ಚುನಾ ವಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಪತ್ರ ಬರೆದಿದ್ದಾರೆ.

Advertisement

ವಿನಾಯಿತಿ ಅನುಮಾನ?
ತಮಿಳನಾಡಿನಲ್ಲಿ ಲೋಕಸಭೆ ಚುನಾವಣೆ ಮುಗಿದ ಕೂಡಲೇ ನೀತಿ ಸಂಹಿತೆ ಸಡಿಲಗೊಳಿಸುವಂತೆ ಅಲ್ಲಿನ ಸರಕಾರ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಚುನಾವಣ ಆಯೋಗಕ್ಕೆ ತಿರಸ್ಕರಿಸಿತ್ತು. ಇದರಿಂದ ಎಚ್ಚೆತ್ತಿರುವ ಕರ್ನಾಟಕ ಸರಕಾರ, ಕೆಲವು ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಿ, ನೀತಿ ಸಂಹಿತೆಗೆ ವಿನಾಯಿತಿ ಕೇಳಿದೆ. ಆದರೆ, ಕರ್ನಾಟಕ ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ರಾಜ್ಯವ್ಯಾಪಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಲೋಕಸಭೆ ಚುನಾವಣೆ ಮುಗಿದಿದ್ದರೂ ಮೇಲ್ಮನೆ ಚುನಾವಣೆಯ ವೇಳಾಪಟ್ಟಿ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿನಾಯಿತಿ ನೀಡುವ ಸಂಭವ ಕಡಿಮೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next