ಜೀವನ ಏರಿಳಿತಗಳ ಹಾದಿ. ಆ ದಾರಿಯಲ್ಲಿ ನಡೆಯುವಾಗ ಹೂವಿನ ಹಾಸಿಗೆಯನ್ನೇ ಅಲ್ಲ, ಕಲ್ಲು ಮುಳ್ಳುಗ ಳನ್ನೂ ತುಳಿಯಬೇಕಾ ಗುತ್ತದೆ. ಕಷ್ಟಗಳು ಎದುರಾಗುತ್ತವೆ, ನೋವು ಅನುಭವಿಸಬೇಕಾಗುತ್ತದೆ. ಬದುಕ ಬೇಕು ಎಂಬ ಛಲ, ಈಸಿ ಜಯಿಸುವುದು ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಜೀವನ ಪಥದಲ್ಲಿ ಸಂಗಾತಿಗಳಾಗಿದ್ದರೆ ಗುರಿ ಸೇರಲು ಸಾಧ್ಯ.
ಈ ಬದುಕಿನಲ್ಲಿ ನೂರಾರು ಸಂಬಂಧ ಗಳನ್ನು ನಿಭಾಯಿಸಬೇಕಾ ಗುತ್ತದೆ. ಸತ್ಯಪರ ವಾಗಿರುವುದು ಒಂದು ಮೌಲ್ಯ. ಆದರೆ ಸತ್ಯವು ಯಾದೃ ಚ್ಛಿಕವಾಗಿರುತ್ತದೆ, ಸತ್ಯವು ಬದಲಾಗಬಹುದು ಮತ್ತು ಅಪ್ರಿಯ ವಾದ ಸತ್ಯವನ್ನು ಹೇಳಬಾರದು ಎಂಬುದು ಸಂಬಂಧಗಳ ನಿರ್ವಹಣೆ ಮತ್ತು ನಿಭಾವಣೆಯ ಸಂದರ್ಭದಲ್ಲಿ ನಮ್ಮ ಗಮನ ದಲ್ಲಿ ಇದ್ದರೆ ಬದುಕು ಸುಂದರವಾ ಗುತ್ತದೆ. ಅಪ್ರಿಯವಾದ ಸತ್ಯವು ನಮ್ಮ ಹೃದಯಕ್ಕೆ ಮಾತ್ರ ಗೊತ್ತಿರಬೇಕು, ಅದನ್ನು ಕಾಲ ಕೂಡಿ ಬಂದಾಗ ಮಾತ್ರ ಹೇಳಬೇಕು. ಪ್ರೀತಿ- ಒಲುಮೆಗಳು ಹೂರಣವಾ ಗಿಲ್ಲದಿದ್ದರೆ ಸತ್ಯವೂ ತೊಂದರೆಯನ್ನು ಉಂಟು ಮಾಡಬಲ್ಲುದು ಎನ್ನುತ್ತಾರೆ ತಿಳಿದವರು.
ಸೂಫಿ ಕಥೆಯೊಂದಿದೆ. ಒಂದಾ ನೊಂದು ಕಾಲದಲ್ಲಿ ಇದ್ದ ಪತಿ- ಪತ್ನಿಯರ ಕಥೆಯಿದು. ಅವರದು ಅನುರೂಪ ದಾಂಪತ್ಯ. ಅರೆ ಕ್ಷಣವೂ ಪರಸ್ಪರ ಬಿಟ್ಟಿರ ಲಾರರು, ಹಾಲು- ಜೇನು ಬೆರತಂಥ ಸರಸ- ಸಮರಸದ ಜೋಡಿ. ದಿನಗಳು ಹೀಗೆ ಸುಖವಾಗಿ ಸಾಗುತ್ತಿದ್ದವು.
ಒಂದು ದಿನ ಗಂಡ ಕೆಲಸದಿಂದ ಮರಳುವಾಗ ಗಾಯಗೊಂಡ ಒಂದು ಕೋಗಿಲೆ ಸಿಕ್ಕಿತು. ಅದನ್ನಾತ ಮನೆಗೆ ತಂದು ಪಂಜರ ದಲ್ಲಿ ಇರಿಸಿದ. ಅಂದು ರಾತ್ರಿ ಮಲಗುವ ಮುನ್ನ ಅದಕ್ಕೆ ಕಾಳು – ನೀರು ಇರಿಸಿ ಶುಭರಾತ್ರಿ ಹೇಳಿದ. ಮರುದಿನ ಬೆಳಗ್ಗೆ ಎದ್ದವನೇ ಕೋಗಿಲೆಯ ಯೋಗಕ್ಷೇಮ ವಿಚಾರಿ ಸಿದ. ಹೆಂಡತಿಗೆ ಸ್ವಲ್ಪ ಬೇಜಾರಾ ಯಿತು. ಅಂದು ಇರುಳು ಆಕೆ ಪತಿಯ ಹಸ್ತಕ್ಕೆ ತನ್ನ ಹಸ್ತವನ್ನು ಕೋಸಿ ಮಲಗಲಿಲ್ಲ. ಎರಡು ದಿನಗಳು ಹೀಗೆಯೇ ಕಳೆದವು. ಪತಿ ಕೋಗಿಲೆಯ ಆರೈಕೆ ಮಾಡುವುದು ಹೆಚ್ಚಿತು, ಪತ್ನಿಯ ಅಸಮಾಧಾನವೂ ವೃದ್ಧಿಸಿತು. ಮನೆ ಯೊಳಗೆ ಮೌನ ಸಾಮ್ರಾಜ್ಯ ಆರಂಭ ವಾಯಿತು. ಆತ ಬೇರೆ ಕೋಣೆಯಲ್ಲಿ ಮಲಗಲಾರಂಭಿಸಿದ. ಆಕೆ ಪತಿಯತ್ತ ಕಣ್ಣೆತ್ತಿ ನೋಡುತ್ತಿರಲಿಲ್ಲ. ಕೊನೆಗೊಂದು ದಿನ ಆಕೆ ತಡೆಯಲಾಗದೆ ಪತಿಯ ಬಳಿ ಹೇಳಿದಳು, “ಆ ದರಿದ್ರ ಕಾಗೆಯನ್ನು ಎಲ್ಲಾದರೂ ಒಯ್ದು ಬಿಡಿ. ಅದು ಮನೆಯೊಳಗೆ ಗಲೀಜು ಮಾಡುತ್ತಿದೆ’. ಪತಿ ಥಟ್ಟನೆ ಉತ್ತರಿಸಿದ, “ಅದು ಕಾಗೆಯಲ್ಲ ಕೋಗಿಲೆ. ಅದನ್ನು ಬಿಟ್ಟುಬಿಡಲು ಸಾಧ್ಯವೇ ಇಲ್ಲ’.
ಬಿರುಕು ಹೀಗೆ ಮುಂದುವ ರಿಯಿತು. ಆಕೆ ಪಕ್ಷಿಯನ್ನು ಕಾಗೆ ಎನ್ನುವುದೂ ಆತ ಅದು ಕೋಗಿಲೆಯೇ ಎಂದು ಸಾಧಿಸುವುದೂ ಹೆಚ್ಚಿತು.
ಒಂದು ದಿನ ಪತಿ ಕೆಲಸ ದಿಂದ ಹಿಂದಿರುಗಿ ಬಂದಾಗ ಪಂಜರದಲ್ಲಿ ಪಕ್ಷಿ ಇರಲಿಲ್ಲ. ಕೇಳಿದಾಗ, “ಆ ಕೆಟ್ಟ ಕಾಗೆಯನ್ನು ನಾನೇ ಹೊರಗೆ ಹಾರಿಬಿಟ್ಟೆ’ ಎಂದಳು ಪತ್ನಿ.
ಮತ್ತೆರಡು ದಿನಗಳು ಕಳೆದ ಬಳಿಕ ಒಂದು ಶುಭ ಮುಂಜಾನೆ ಆಕೆ ತನ್ನ ಪತಿಯ ಬಳಿ ಬಂದು ಹೇಳಿದಳು, “ನಿಜಕ್ಕೂ ಅದು ಕೋಗಿಲೆಯೇ ಆಗಿತ್ತು. ನಾನು ತಪ್ಪು ಮಾಡಿಬಿಟ್ಟೆ, ಕ್ಷಮಿಸಿ…’ ಪತಿ ಉತ್ತರಿಸಿದ, “ನಿನ್ನದೇನೂ ತಪ್ಪಿಲ್ಲ ಬಿಡು, ಅದು ಕೆಟ್ಟ ಕಾಗೆಯೇ ಆಗಿತ್ತು…’ ಆ ಕ್ಷಣ ದಿಂದ ಅವರ ಸಂಸಾರ ಹಿಂದಿನಂತಾಯಿತು.
“ಸತ್ಯಂ ಭ್ರೂಯಾತ್ ಪ್ರಿಯಂ ಭ್ರೂಯಾತ್, ನ ಭ್ರೂಯಾತ್ ಸತ್ಯಂ ಅಪ್ರಿಯಂ’ ಎನ್ನುತ್ತದೆ ಒಂದು ಸಂಸ್ಕೃತ ಶ್ಲೋಕ. ಅದರ ಮುಂದಿನ ಭಾಗದಲ್ಲಿ ಇತರರಿಗೆ ಪ್ರಿಯವಾಗುತ್ತದೆ ಎಂಬುದ ಕ್ಕಾಗಿ ಸುಳ್ಳನ್ನು ಹೇಳಬಾರದು ಎಂದೂ ಇದೆ. ಸಂಬಂಧಗಳನ್ನು ಯೋಗ್ಯವಾಗಿ ನಿರ್ವಹಿಸುತ್ತ ಬದುಕನ್ನು ಚೆಲುವಾ ಗಿಸಲು ದಾರಿದೀಪ ಇದು.
( ಸಾರ ಸಂಗ್ರಹ)