Advertisement

ರೇಖಾ ಕದಿರೇಶ್‌ ಕೊಲೆಗೆ ಹಳೇ ದ್ವೇಷವೇ ಕಾರಣ?

02:56 PM Jun 27, 2021 | Team Udayavani |

ಬೆಂಗಳೂರು: ಬಿಬಿಎಂಪಿ ಛಲವಾದಿ ವಾರ್ಡ್‌ ನ ಮಾಜಿ ಕಾರ್ಪೊರೇಟರ್‌ ರೇಖಾ ಕದಿರೇಶ್‌ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ.

Advertisement

ಛಲವಾದಿ ಪಾಳ್ಯದ ಸ್ಟೀಫ‌ನ್‌, ಪುರುಷೋತ್ತಮ್‌, ಅಜಯ್‌ ಎಂಬವರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಈ ಮಧ್ಯೆ ಇತರೆ ಆರೋಪಿಗಳಾಗಿ ಪಶ್ಚಿಮ ವಿಭಾಗ ಪೊಲೀಸರ ಮೂರು ತಂಡಗಳು ನಗರದ ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

ಕೃತ್ಯದ ಕೆಲ ಗಂಟೆಗಳ ಮೊದಲು ಪುರುಷೋತ್ತಮ್‌ ಮತ್ತು ಪೀಟರ್‌ ಜತೆ ಸೇರಿಕೊಂಡು ಸಿಸಿಕ್ಯಾಮೆರಾಗಳ ದಿಕ್ಕು ಬದಲಿಸಿದ್ದಾನೆ. ಪೀಟರ್‌ ಮತ್ತು ಸೂರ್ಯ ರೇಖಾ ಕದಿರೇಶ್‌ ಅವರನ್ನು ಇರಿಯುತ್ತಿದ್ದರೆ, ಸ್ಟೀಫ‌ನ್‌ ಮತ್ತು ಅಜಯ್‌ ಕೊಲೆಗೈಯುವ ಸಂದರ್ಭದಲ್ಲಿ ತಡೆಯಲು ಬಂದವರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದರು.

ಇದುವರೆಗಿನ ವಿಚಾರಣೆಯಲ್ಲಿ ರೇಖಾ ಕದಿರೇಶ್‌ ಹತ್ಯೆಗೆ ಕೌಟುಂಬಿಕ, ರಾಜಕೀಯ ಮತ್ತು ವಾರ್ಡ್‌ ಅನ್ನು ಹಿಡಿತ ಸಾಧಿಸಲು ಎಂಬುದು ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದೇ ವೇಳೆ ಪ್ರಕರಣದಲ್ಲಿ ಆರೋಪಿಗಳ ಸಂಚು ಬಗೆದಷ್ಟು ಹೊರಬರುತ್ತಿದೆ.

ಇದನ್ನೂ ಓದಿ:ಫೇಸ್ ಬುಕ್ ಪ್ರೀತಿ: 17 ವರ್ಷದ ಬಾಲಕನೊಂದಿಗೆ 20 ವರ್ಷದ ಯುವತಿಯ ಮದುವೆ! ಪ್ರಕರಣ ದಾಖಲು

Advertisement

2018ರಲ್ಲಿ ಕದಿರೇಶ್‌ ಕೊಲೆಯಾದ ಬಳಿಕ ರೇಖಾ ಜತೆಯೇ ಇದ್ದ ಪೀಟರ್‌ಗೆ ಯಾವುದೇ ಹಣಕಾಸು ನೆರವು ನೀಡುತ್ತಿರಲಿಲ್ಲ. ಪೀಟರ್‌ಗೆ, ಕದಿರೇಶ್‌ ಮಾಡಿಕೊಟ್ಟಿದ್ದ ಗಾರ್ಬೆಜ್‌ ಟೆಂಡರ್‌ ಅನ್ನು ರೇಖಾ ತಡೆದಿದ್ದರು. ಜತೆಗೆ ಆತನಿಗೆ ಐವರು ಮಕ್ಕಳಿದ್ದಾರೆ. ಯಾವುದೇ ಆದಾಯವಿಲ್ಲ. ಅದರಿಂದ ಪೀಟರ್‌ ಆಕ್ರೋಶಗೊಂಡಿದ್ದ. ಇನ್ನು ಸೂರ್ಯನ ತಂದೆಗೆ ರೇಖಾ ಒಮ್ಮೆ ಅವಮಾನ ಮಾಡಿದ್ದರಂತೆ. ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು. ಅದರಿಂದ ಆತ ಕೂಡ ಈಕೆಯ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ಇದೇ ವೇಳೆ ಕದಿರೇಶ್‌ ಸೋದರಿ ಮಾಲಾ ತನ್ನ ಸೊಸೆ ಅಥವಾ ಮಗಳನ್ನು ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ನಿಲ್ಲಿಸಲು ಮುಂದಾಗಿದ್ದಳು. ಈ ಎಲ್ಲ ವಿಚಾರಗಳಿಗೆ ಕೊಲೆಯಾಗಿದೆ ಎನ್ನಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಲಾ ಕುಟುಂಬಸ್ಥರ ವಿಚಾರಣೆ: ಪ್ರಕರಣ ಸಂಬಂಧ ಕದಿರೇಶ್‌ ಸಹೋದರಿ ಮಾಲಾ ಮತ್ತು ಆಕೆಯ ಸೊಸೆಯನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದಲ್ಲಿ ಮಾಲಾ ಪಾತ್ರದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು

ರೇಖಾ ಕೊಲೆಗೆ ಕದಿರೇಶ್‌ ಕೊಲೆ ನಂಟು?: ರೇಖಾ ಅವರ ಕೊಲೆಗೆ ಮೂರು ವರ್ಷಗಳ ಹಿಂದೆ ನಡೆದ ಕದಿರೇಶ್‌ ಕೊಲೆ ನಂಟಿದೆ ಎಂದು ಹೇಳಲಾಗಿದೆ. ವೈಯಕ್ತಿಕ ವಿಚಾರಕ್ಕೆ ರೇಖಾ, 2018ರಲ್ಲಿ ಪತಿ ಕದಿರೇಶ್‌ ಹತ್ಯೆಗೈದ ಶೋಭನ್‌ ಗ್ಯಾಂಗ್‌ಗೆ ಸಾಥ್‌ ನೀಡಿದ್ದರು ಎಂದು ಹೇಳಲಾಗಿದೆ. ಪೀಟರ್‌, ಸೂರ್ಯನ ಪ್ರಾಥಮಿಕ ವಿಚಾರಣೆಯಲ್ಲಿ ಆತ ರೇಖಾ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಎರಡು ವರ್ಷಗಳ ಹಿಂದೆ ಈ ವಿಚಾರ ಗೊತ್ತಾಗಿತ್ತು. ಜತೆಗೆ ಆಕೆ ತಮಗೆ ಯಾವುದೇ ನೆರವು ನೀಡುತ್ತಿರಲಿಲ್ಲ.ಈ ಎಲ್ಲ ವಿಚಾರಗಳಿಂದ ಆಕ್ರೋಶಗೊಂಡ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾನೆ ಎಂದು ಹೇಳಲಾಗಿದೆ. ಆದರೆ, ಪೀಟರ್‌, ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಂದ ಹೇಳಿಕೆ ಪಡೆದಿಲ್ಲ. ಆದರೆ, ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next