Advertisement

ಗ್ರಾಮೀಣ ಅಭ್ಯರ್ಥಿಗಳಲ್ಲಿ ಸಂತಸ; ಡಿಪ್ಲೊಮಾ ಅರ್ಹತೆ ಪಿಯುಸಿಗೆ ತತ್ಸಮಾನವೆಂದು ಪರಿಗಣನೆ

01:59 AM Oct 02, 2021 | Team Udayavani |

ಕಾರ್ಕಳ: ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೊಮಾ ವಿದ್ಯಾರ್ಹತೆಯನ್ನು ಪಿಯುಸಿಗೆ ತತ್ಸಮಾನವೆಂದು ರಾಜ್ಯ ಸರಕಾರ ಪರಿಗಣಿಸಿರುವುದರಿಂದ ರಾಜ್ಯದ ಲಕ್ಷಾಂತರ ಯುವಜನರ ಸರಕಾರಿ ಹುದ್ದೆ ಪಡೆಯುವ ಕನಸು ನನಸಾಗಲಿದೆ.

Advertisement

ಹಿಂದಿನ ನಿಯಮಾವಳಿ ಪ್ರಕಾರ ಎಸೆಸೆಲ್ಸಿ ಬಳಿಕ ನೇರವಾಗಿ ಡಿಪ್ಲೊಮಾ ಅಥವಾ ಐಟಿಐ ಕಲಿತವರಿಗೆ ರಾಜ್ಯ ಸರಕಾರ ನಡೆಸುವ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ಇರಲಿಲ್ಲ. ಅವರು ಎನ್‌ಐಒಎಸ್‌ (National Institute of Open Schooling)ಪರೀಕ್ಷೆ ಬರೆದರೆ ಮಾತ್ರ ಐಟಿಐ / ಡಿಪ್ಲೊಮಾವನ್ನು ದ್ವಿತೀಯ ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಿ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿತ್ತು. ಹೊಸ ಆದೇಶದ ಪ್ರಕಾರ ಅವರು ಕೆಪಿಎಸ್‌ಸಿಯಿಂದ ನಡೆಸುವ ಇಲಾಖಾ ಪರೀಕ್ಷೆಗಳ ಜತೆಗೆ ಕನ್ನಡ ಭಾಷಾ ಪರೀಕ್ಷೆಯನ್ನು ತೇರ್ಗಡೆ ಹೊಂದಿದರೆ ಸಾಕು. ಇನ್ನು ಮುಂದೆ ಕೆಪಿಎಸ್‌ಸಿ ದ್ವಿತೀಯ ದರ್ಜೆ ಸಹಾಯಕ ಹುದ್ದೆ, ಅರಣ್ಯ ಇಲಾಖೆ ಸಹಿತ ಇತರ ವಲಯಗಳ ಹುದ್ದೆಗಳಿಗೆ ಡಿಪ್ಲೊಮಾ ಮಾಡಿದವರೂ ಅರ್ಜಿ ಸಲ್ಲಿಸಬಹುದಾಗಿದೆ.

ಪರದಾಟದಿಂದ ಮುಕ್ತಿ
ಈ ಮೊದಲು ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಆಸಕ್ತರಾಗಿದ್ದ ಗ್ರಾಮೀಣ ಪ್ರದೇಶಗಳ ಡಿಪ್ಲೊಮಾ/ಐಟಿಐ ಕಲಿತವರು ಸರಕಾರ ಹೇಳಿರುವ ಎನ್‌ಐಒಎಸ್‌ ಪರೀಕ್ಷೆಯ ಬಗ್ಗೆ ಸೂಕ್ತ ಮಾಹಿತಿ ಲಭಿಸದೆ ಪರದಾಡುತ್ತಿದ್ದರು. ಎನ್‌ಐಒಎಸ್‌ ಕಚೇರಿ ಬೆಂಗಳೂರಿನಲ್ಲಿದ್ದು, ಶಿಕ್ಷಕರ ಬಳಿಯಲ್ಲೂ ಆ ಕುರಿತು ಹೆಚ್ಚಿನ ಮಾಹಿತಿ ದೊರಕುತ್ತಿರಲಿಲ್ಲ. ಕೊನೆಗೆ ಯುವಜನರು ಕೆಪಿಎಸ್‌ಸಿ ಉದ್ಯೋಗದ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದು ಅವಕಾಶ ವಂಚಿತರಾಗುತ್ತಿದ್ದರು.

ವರದಿ ಮಾಡಿದ್ದ ಉದಯವಾಣಿ
ರಾಜ್ಯ ಸರಕಾರ ಇತ್ತೀಚೆಗಷ್ಟೇ ಪೊಲೀಸ್‌ ಇಲಾಖೆಯಲ್ಲಿ ಸಿವಿಲ್‌ ಪೊಲೀಸ್‌ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಯ ನೊಟಿಫಿಕೇಶನ್‌ನಲ್ಲಿ ವಿದ್ಯಾರ್ಹತೆಯಲ್ಲಿ ಎನ್‌ಐಒಎಸ್‌ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಉಲ್ಲೇಖೀಸಿದ್ದರಿಂದ ರಾಜ್ಯದ ಲಕ್ಷಕ್ಕೂ ಮಿಕ್ಕಿದ ಅಭ್ಯರ್ಥಿಗಳು ವಂಚಿತರಾಗಿದ್ದರು. ಪ.ಪೂ. ಶಿಕ್ಷಣ ಮಂಡಳಿ ನಡೆಸುವ ಪಿಯುಸಿ ಅಥವಾ ತತ್ಸಮಾನ ಅರ್ಹತೆಗೆ ಅನುಗುಣವಾಗಿ ಪಿಸಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಪಿಯುಸಿ, ಸಿಬಿಎಸ್‌ಸಿ, ಐಸಿಎಸ್‌ಇಯಲ್ಲಿ 12ನೇ ತರಗತಿ ಕಲಿತವರಿಗೆ ಸಮಸ್ಯೆಯಾಗುತ್ತಿರಲಿಲ್ಲ. ಐಟಿಐ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಮಾತ್ರ ಸಮಸ್ಯೆಯಾಗಿತ್ತು. ಅಂಥವರು ಎನ್‌ಐಒಎಸ್‌ ನಡೆಸುವ ಒಂದು ಭಾಷಾ ಕೋರ್ಸ್‌ ಮತ್ತೂಂದು ಶೈಕ್ಷಣಿಕ ವಿಷಯದಲ್ಲಿ ಉತ್ತೀರ್ಣರಾದರೆ ಪೊಲೀಸ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಈ ನಿಯಮದಿಂದ ಡಿಪ್ಲೊಮಾ ಅಭ್ಯರ್ಥಿಗಳಿಗೆ ಸರಕಾರ ಹುದ್ದೆಗಳು ಗಗನ ಕುಸುಮವಾಗಿರುವ ಬಗ್ಗೆ ಜು. 5ರಂದು ಉದಯವಾಣಿ ವರದಿ ಪ್ರಕಟಿಸಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next