Advertisement

ಸದ್ದಾಂ ಹುಸೇನ್‌ಗೆ ಹೆಸರೇ ಪ್ರಾಬ್ಲಮ್!

10:29 AM Mar 20, 2017 | Team Udayavani |

ರಾಂಚಿ: ‘ಹೆಸರಲ್ಲೇನಿದೆ’ ಎಂದು ನೀವು ಕೇಳಬಹುದು. ಆದರೆ, ಹೆಸರಲ್ಲಿ ಬಹಳಷ್ಟಿದೆ ಎಂಬುದು ಈತನಿಗೆ ಅರಿವಾಗಿದೆ. ಹಾಗಾಗಿಯೇ ತನ್ನ ಹೆಸರು ಬದಲಿಸಲು ಹರಸಾಹಸ ಪಟ್ಟು, ಇದೀಗ ಇದೇ ವಿಚಾರಕ್ಕಾಗಿ ಕೋರ್ಟ್‌ ಮೆಟ್ಟಿಲನ್ನೂ ಏರಿದ್ದಾನೆ! ಬೆಳೆದು ದೊಡ್ಡವನಾದ ಮೇಲೆ ಒಳ್ಳೆಯ ವ್ಯಕ್ತಿಯಾಗಿ ಸಮಾಜಕ್ಕೆ ಕೊಡುಗೆ ನೀಡಲಿ ಎಂಬ ಉದ್ದೇಶದಿಂದ ಅಜ್ಜ ಇವನಿಗೆ ಪ್ರೀತಿಯಿಂದ ‘ಸದ್ದಾಂ ಹುಸೇನ್‌’ ಎಂದು ಹೆಸರಿಟ್ಟರಂತೆ. ಈತನೇನೋ ಅಂದುಕೊಂಡಂತೆಯೇ ಚೆನ್ನಾಗಿ ಕಲಿತು ನೌಕಾ ಎಂಜಿನಿಯರ್‌ ಆದ. ಆದರೆ, ಇವನ ಹೆಸರು ಮಾತ್ರ ಇವನನ್ನು ಅನುಮಾನದ ದೃಷ್ಟಿಯಿಂದಲೇ ನೋಡುವಂತೆ ಮಾಡಿತು.

Advertisement

ಝಾರ್ಖಂಡ್‌ನ‌ ಜಮ್ಶೆಡ್‌ಪುರದ ಎಂಜಿನಿಯರ್‌ ಸದ್ದಾಂ ಹುಸೇನ್‌ನ ಕಥೆಯಿದು. ಇರಾಕ್‌ನ ಮಾಜಿ ಅಧ್ಯಕ್ಷ ದಿ.ಸದ್ದಾಂ ಹುಸೇನ್‌ ಎಂಬ ಕಾರಣಕ್ಕಾಗಿ ಈ ಯುವಕನಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಹಲವು ಶಿಪ್ಪಿಂಗ್‌ ಕಂಪೆ‌ನಿಗಳಲ್ಲಿ ಬರೋಬ್ಬರಿ 40 ಸಂದರ್ಶನ ಎದುರಿಸಿದರೂ, ಕೆಲಸ ಮಾತ್ರ ಸಿಗಲೇ ಇಲ್ಲ. ಕೊನೆಗೆ, ಆದದ್ದಾಗಲಿ ಎಂದು ತನ್ನ ಹೆಸರನ್ನು ‘ಸಾಜಿದ್‌’ ಎಂದು ಬದಲಿಸಿಬಿಟ್ಟ. ಪಾಸ್‌ಪೋರ್ಟ್‌, ಮತದಾರರ ಗುರುತಿನ ಚೀಟಿ, ಡ್ರೈವಿಂಗ್‌ ಲೈಸನ್ಸ್‌ ಎಲ್ಲವನ್ನೂ ಹೊಸ ಹೆಸರಲ್ಲೇ ಮಾಡಿಸಿದ. ಆದರೆ, ಶೈಕ್ಷಣಿಕ ಸರ್ಟಿಫಿಕೇಟ್‌ಗಳಲ್ಲಿ ಹೆಸರು ಬದಲಿಸಲಾಗಲಿಲ್ಲ. ಸಿಬಿಎಸ್‌ಇಗೆ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಇದರಿಂದ ರೋಸಿ ಹೋದ ಸಾಜಿದ್‌ ಈಗ ಝಾರ್ಖಂಡ್‌ ಹೈಕೋರ್ಟ್‌ ಮೊರೆಹೋಗಿದ್ದಾನೆ. ಮೇ 5ರಂದು ವಿಚಾರಣೆ ನಡೆಯಲಿದೆ. ಈ ಹೆಸರಿನ ಕಾರಣಕ್ಕಾಗಿ ನಾನು ಯಾರಧ್ದೋ ಅಪರಾಧದ ಬಲಿಪಶುವಾಗಬೇಕಾಯಿತು ಎನ್ನುತ್ತಾನೆ ಸದ್ದಾಂ, ಅಲ್ಲಲ್ಲ ಸಾಜಿದ್‌!

Advertisement

Udayavani is now on Telegram. Click here to join our channel and stay updated with the latest news.

Next