ಹುಬ್ಬಳ್ಳಿ: ಹಲವು ಸಮಸ್ಯೆಗಳಿಗೆ ಪರಿಹಾರ ನಿಟ್ಟಿನಲ್ಲಿ ಸಾಮಾಜಿಕ ಉದ್ಯಮಕ್ಕೆ ಹೆಚ್ಚಿನ ಸಾಮರ್ಥ್ಯ ಇದೆ. ಅತ್ಯುತ್ತಮ ಉದ್ದೇಶ ಹಾಗೂ ಕಾರ್ಯಕ್ಷಮತೆಯ ಸಾಮಾಜಿಕ ಉದ್ಯಮದ ಜತೆ ಪಾಲುದಾರಿಕೆಗೆ ಸರಕಾರ ಉತ್ಸುಕವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ದೇಶಪಾಂಡೆ ಪ್ರತಿಷ್ಠಾನದ ಅಭಿವೃದ್ಧಿ ಸಂವಾದದಲ್ಲಿ ರಿಇಮೇಜಿನಿಂಗ್ ಪಾಟ್ನರ್ರ್‌ಶಿಪ್ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಮಸ್ಯೆಗಳಿಗೆ ಪರಿಹಾರ ನಿಟ್ಟಿನಲ್ಲಿ ಸರಕಾರಕ್ಕಿಂತಲೂ ಖಾಸಗಿ ಹಾಗೂ ಸಾಮಾಜಿಕ ಉದ್ಯಮ ವಲಯದಿಂದ ಹೆಚ್ಚು ಅವಕಾಶ ಇರಲಿದೆ. ಸರಕಾರದೊಂದಿಗೆ ಪಾಲುದಾರಿಕೆ ಹೊಂದಿದರೆ ಪರಿಣಾಮಕಾರಿ ಅನುಷ್ಠಾನವಾಗಲಿದೆ ಎಂದರು.
ಕೃಷಿಯಲ್ಲಿ ಕೂಲಿಕಾರರ ಸಮಸ್ಯೆ ಹೆಚ್ಚುತ್ತಿದೆ. ಕೃಷಿ ವೆಚ್ಚದಲ್ಲಿ ಕೂಲಿಕಾರರ ಪಾಲು ಶೇ. 40 ಆಗುತ್ತಿದೆ. ಕೃಷಿ ಕಾಯಕಕ್ಕೆ ರೈತರು ಅನಿವಾರ್ಯವಾಗಿ ಯಂತ್ರೋಪಕರಣಗಳಿಗೆ ಮೊರೆ ಹೋಗಬೇಕಾಗಿದೆ. ಸಣ್ಣ-ಅತಿಸಣ್ಣ ರೈತರಿಗೆ ಯಂತ್ರೋಪಕರಣಗಳ ಖರೀದಿ ಸಾಧ್ಯವಾಗದು. ನಾನು ಕೃಷಿ ಸಚಿವನಾಗಿದ್ದಾಗ ಕೃಷಿ ಯಂತ್ರೋಪಕರಣ ಹಾಗೂ ಸಲಕರಣೆಗಳನ್ನು ಬಾಡಿಗೆಯಾಗಿ ನೀಡಲು ಯೋಜಿಸಲಾಗಿತ್ತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದರ ನಿರ್ವಹಣೆಗೆ ಮುಂದಾಗಿತ್ತು. ಇದರಿಂದ ರಾಜ್ಯದಲ್ಲಿ ಸುಮಾರು 150 ಕೇಂದ್ರಗಳು ಇಂದು ಯಶಸ್ವಿಯಾಗಿ ನಡೆಯುತ್ತಿವೆ. ಇದು ಸಾಮಾಜಿಕ ಉದ್ಯಮ ಹಾಗೂ ಸರಕಾರದ ಪಾಲುದಾರಿಕೆ ಯಶಸ್ವಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ನವೋದ್ಯಮಕ್ಕೆ ರಾಜ್ಯ ಸರಕಾರ ಅಗತ್ಯ ನೆರವು, ಪ್ರೋತ್ಸಾಹ ನೀಡುತ್ತಿದ್ದು ದೇಶಕ್ಕೆ ಮಾದರಿಯಾಗಿದೆ. ಸರಕಾರದೊಂದಿಗೆ ಪಾಲುದಾರಿಕೆ ಅಸಾಧ್ಯ ಎಂದು ಅನೇಕರು ಹೇಳುತ್ತಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ತಪ್ಪು ಸಂದೇಶ ನೀಡುವ ಕಾರ್ಯ ನಡೆಯುತ್ತಿದೆ. ಉತ್ತಮ ಪ್ರಸ್ತಾವನೆ, ಸಮರ್ಪಕ ದಾಖಲೆಗಳಿಲ್ಲದೆ ಬಂದರೆ ಅಧಿಕಾರದಲ್ಲಿದ್ದವರು ಸಾಗಹಾಕುತ್ತಾರೆ ಎಂದರು.
ಖಾಸಗಿ ಹಾಗೂ ಸರಕಾರ ಪಾಲುದಾರಿಕೆಗೆ ವಿಚಾರಕ್ಕೆ ಬಂದರೆ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ಶಿಕ್ಷಣ ಸುಧಾರಣೆಗೆ ಸರಕಾರದ ಪಾಲುದಾರಿಕೆಗೆ ಮುಂದಾದಾಗ, ಉತ್ತರ ಕರ್ನಾಟಕದಲ್ಲಿ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡಲಾಗಿತ್ತು. ಅದೇ ರೀತಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಸಂಚಾರಿ ವಿಜ್ಞಾನ ಪ್ರಯೋಗಾಲಯವನ್ನು ಗ್ರಾಮೀಣ ಶಾಲೆಗಳಿಗೆ ತೆಗೆದುಕೊಂಡು ಹೋಗುವ ಯೋಜನೆಗೂ ಸರಕಾರ ಪಾಲುದಾರಿಕೆ ನೀಡಿತ್ತು. ಇವು ಉತ್ತಮ ಫಲಿತಾಂಶ ನೀಡಿವೆ ಎಂದು ತಿಳಿಸಿದರು.
ಅಕ್ಷರ ಫೌಂಡೇಶನ್ ಗ್ರಂಥಾಲಯ ಆರಂಭಕ್ಕೆ ಸರಕಾರ ಪಾಲುದಾರಿಕೆ ನೀಡಿದೆ. ಗಣಿತ ಕಲಿಕೆ ಕಾರ್ಯಕ್ರಮ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆಸ ಸಚಿವ ಸಂಪುಟದಲ್ಲಿ ಯೋಜನೆ ಮುಂದುವರಿಸಲು, ಗಣಿತ ಕಲಿಕೆಯನ್ನು 10ರಿಂದನ 20 ಸಾವಿರ ಶಾಲೆಗಳಿಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ. ಇನ್ನೋವೇಶನ್ ಸರಕಾರದ ಮಟ್ಟದಲ್ಲೂ ಆಗುತ್ತದೆ. ರೈತರ ಭೂ ದಾಖಲೆಗಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಭೂಮಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಪಿರಮಳ ಫೌಂಡೇಶನ್ ಮುಖ್ಯಸ್ಥ ಎಸ್.ಪಿ. ಪರೇಶ್ ಮಾತನಾಡಿದರು. ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಇದ್ದರು. ಪೋರ್ಡ್ ಫೌಂಡೇಶನ್ ಪ್ರಾದೇಶಿಕ ನಿರ್ದೇಶಕ ಪ್ರದೀಪ ನಾಯರ್ ಗೋಷ್ಠಿ ನಿರ್ವಹಿಸಿದರು.