ಬೆಂಗಳೂರು: ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ನಿರ್ಮಿಸಿದ ಐತಿಹಾಸಿಕ “ಕೆಂಪಾಂಬುದಿ ಕೆರೆ’ಗೆ ಕಾಯಕಲ್ಪ ಸಿಕ್ಕಿದೆ. ಸಿಎಂ ನಗರೋತ್ಥಾನ ಯೋಜನೆ ಮತ್ತು ಬಿಬಿಎಂಪಿ ವತಿಯಿಂದ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದು, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬುಧವಾರ ಕೆರೆಯನ್ನು ಸಾರ್ವಜನಿಕ ಬಳಕೆಗೆ ಸಮರ್ಪಿಸಿದರು.
ಒತ್ತುವರಿ, ದುರ್ವಾಸನೆ, ಕೊಳಚೆ ನೀರು ಮತ್ತು ತ್ಯಾಜ್ಯಗಳಿಂದ ತುಂಬಿ ನಿರ್ಜೀವಗೊಂಡಿದ್ದ ಗವಿಪುರ ಬಳಿಯ ಕೆರೆ ಈಗ ಜೀವ ತುಂಬಿಕೊಂಡಿದೆ. ಕೆರೆಯನ್ನು ಸಾರ್ವಜನಿಕರ ಬಳಕೆಗೆ ಸಮರ್ಪಿಸಿದ ಬಳಿಕ ಮಾತನಾಡಿದ ಸಚಿವ ಕೆ.ಜೆ.
ಜಾರ್ಜ್, ಕುಡಿಯುವ ನೀರಿಗೆಂದು ಕೆಂಪೇಗೌಡರು ಈ ಕೆರೆ ಕಟ್ಟಿಸಿದ್ದರು. ಕೆರೆಗೆ ಶತಮಾನಗಳ ಇತಿಹಾಸವಿದೆ. ಆದರೆ,
ಕಾಲಕ್ರಮೇಣ ಒತ್ತುವರಿ, ತ್ಯಾಜ್ಯ ನೀರು ಸೇರ್ಪಡೆ ಇತ್ಯಾದಿ ಕಾರಣಗಳಿಂದಾಗಿ ಕೆರೆ ತನ್ನ ಮೂಲ ಸ್ವರೂಪ ಮತ್ತು ಮಹತ್ವ ಕಳೆದುಕೊಂಡಿತ್ತು. ಇದೀಗ ಕೆರೆಗೆ ಕಾಯಕಲ್ಪ ನೀಡಲಾಗಿದೆ ಎಂದರು. ಶಾಸಕ ಆರ್.ವಿ.ದೇವರಾಜ್ ಇತರರು ಇದ್ದರು.
ಗಿಮಿಕ್ ಅನಿವಾರ್ಯತೆ ನಮಗಿಲ್ಲ: ಬೆಂಗಳೂರನ್ನು ಲೂಟಿ ಮಾಡಿದವರು ಇಂದು ಬೆಂಗಳೂರು ರಕ್ಷಿಸಿ ಎಂದು ಹೋರಾಟ ಮಾಡುತ್ತಿದ್ದಾರೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು. “ಕೆರೆ ಹಬ್ಬ’ದ ನೆಪದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದ ಗಿಮಿಕ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗಿಮಿಕ್ ಮಾಡುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಹೇಳಿದರು.