Advertisement

ಶಂಕರ ಹೊಂಡಕ್ಕೆ ಪುನಶ್ಚೇತನ ಕಾರ್ಯ

11:47 AM Jul 13, 2019 | Suhan S |

ಶಿರಸಿ: ಪವಿತ್ರ ಅಘನಾಶಿನಿ ನದಿಯ ಉಗಮ ಸ್ಥಳ ಶಂಕರ ಹೊಂಡ ಗಲೀಜನ್ನು ನೋಡಲಾರದೇ ಅದರ ಅಭಿವೃದ್ಧಿಗೆ ಟೊಂಕ ಕಟ್ಟಿದ್ದ ಇಲ್ಲಿನ ಜೀವಜಲ ಕಾರ್ಯಪಡೆ ಕುಸಿದು ಬಿದ್ದಿದ್ದ ಗೋಡೆಯನ್ನೂ ಪುನಃ ನಿರ್ಮಾಣ ಮಾಡಿದೆ.

Advertisement

ಕಳೆದೆರಡು ವರ್ಷಗಳ ಹಿಂದೆ ನಗರಸಭೆ ಬಳಿ ಶಂಕರ ಹೊಂಡಕ್ಕೆ ಏನಾದರೂ ಮಾಡಿ, ಅಭಿವೃದ್ಧಿ ಮಾಡಿ ಎಂದು ಜೀವಜಲ ಕಾರ್ಯಪಡೆ ಮನವಿ ಮಾಡಿದಾಗ ನಮ್ಮ ಬಳಿ ಇದು ಆಗದು ಎಂದು ಕೈಚೆಲ್ಲಿತ್ತು. ಅಲ್ಲದೇ ಕಾರ್ಯಪಡೆಗೆ ಪತ್ರವನ್ನೂ ಕೊಟ್ಟಿತ್ತು.

ಅಲ್ಲಿಂದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರರ ನೇತೃತ್ವದಲ್ಲಿ ಶಂಕರ ಹೊಂಡದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ಕೊಳಚೆ ಗುಂಡಿಯಂತಾಗಿದ್ದ ಪವಿತ್ರ ಶಂಕರ ಹೊಂಡ ಅಭಿವೃದ್ಧಿಗೆ ಪಣ ತೊಟ್ಟಿತು. ಹೊಂಡದ ಹೂಳೆತ್ತಿಸಿ ಸ್ವಚ್ಛಗೊಳಿಸಿ ಸುತ್ತಲಿನ ಸ್ನಾನಗೃಹ, ಶೌಚಗೃಹ ನಿರ್ಮಾಣ ಮಾಡಿ ಮಾರಿಕಾಂಬಾ ದೇವಿ ಜಾತ್ರೆಗೆ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿತ್ತು. ರೋಟರಿ ನೆರವಿನಿಂದ ವ್ಯಾಯಾಮ ಅಂಗಳ, ಕಾರ್ಯಪಡೆಯಿಂದ ದೋಣಿ ವಿಹಾರ, ಈಚೆಗೆ ಚೆಂದದ ಕಾರಂಜಿಯನ್ನೂ ನಿರ್ಮಿಸಿತ್ತು.

ಜೀವಜಲ ಕಾರ್ಯಪಡೆ ಕಾರ್ಯಕ್ಕೆ ಶ್ಲಾಘನೆ ಕೂಡ ವ್ಯಕ್ತವಾಗಿದೆ. ಶಂಕರ ಹೊಂಡ ಮಾದರಿಯಲ್ಲಿ ಹಲವಡೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತವು. ಮಂತ್ರಾಲಯದ ಸ್ವಾಮೀಜಿ ವೀಕ್ಷಿಸಿ ತಮ್ಮಲ್ಲೂ ಇದೇ ಮಾದರಿಗೆ ಮುಂದಾಗುವ ಇಂಗಿತ ವ್ಯಕ್ತಪಡಿಸಿದ್ದರು.

ಅಘನಾಶಿನಿ ನದಿಯ ಮೂಲಕ್ಕೂ ಶೋಭೆ ಬಂದಿತ್ತು. ಸಂಜೆ ಬೆಳಗ್ಗೆ ವಾಕಿಂಗ್‌ ಪಾಯಂಟ್ ಕೂಡ ಆಯಿತು.

Advertisement

ಇಷ್ಟಾದ ಬಳಿಕ ಇದರ ನಿರ್ವಹಣೆಗೆ ಸ್ವತಃ ಜನರನ್ನು ಕೊಡಿ ಎಂದು ನಗರಸಭೆಗೆ ಕೇಳಿದಾಗ ಕಾನೂನು ತೊಡಕಿನ ಪ್ರಶ್ನೆ ಇಟ್ಟರು. ಕಾರ್ಯಪಡೆ ಸಿಬಂದಿಗಳನ್ನೂ ನೇಮಕ ಮಾಡಿ ನಡೆಸುತ್ತಿದೆ.

ಈ ಎಲ್ಲ ವಿದ್ಯಮಾನಗಳ ಜೊತೆಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಜಯನಗರದ ಕಡೆ ತೆರಳುವ ರಸ್ತೆ ಪಕ್ಕದ ಗೋಡೆ ಕುಸಿದು ಬಿದ್ದಿತ್ತು. ಇದನ್ನು ದುರಸ್ತಿ ಮಾಡುವಂತೆ ಸ್ವತಃ ಶ್ರೀನಿವಾಸ ಹೆಬ್ಟಾರರ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತೆ ಅಶ್ವಿ‌ನಿ ಅವರಲ್ಲಿ ಮನವಿ ಮಾಡಿಕೊಂಡರು. ನಗರಸಭೆ ಸದಸ್ಯರಿಗೆ ಅಧಿಕಾರವಿಲ್ಲ, ಪೌರಾಯುಕ್ತರಲ್ಲಿ ಕೇಳಿದರೆ ಹಣವಿಲ್ಲ ಎಂಬ ಉತ್ತರ ಬಂತು. ಮತ್ತೆ ಕುಸಿದು ಬಿದ್ದಿದ್ದ ಸುಮಾರು 75 ಅಡಿ ಉದ್ದನೆಯ ಹತ್ತಾರು ಅಡಿ ಎತ್ತರದ ಗೋಡೆ ನಿರ್ಮಾಣ ಕಾರ್ಯಪಡೆ ಹೆಗಲಿಗೆ ಬಿತ್ತು.

ಮಳೆಗಾಲದ ಬಳಿಕ ಸತತ ಕಾರ್ಯ ಮಾಡಿಸಿ ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, 75 ಅಡಿ ಉದ್ದನೆಯ ಗೋಡೆ ಮತ್ತೆ ಸದೃಢವಾಗಿ ಎದ್ದು ನಿಂತಿದೆ. ಸುಮಾರು 7 ಲ.ರೂ. ಗಳಷ್ಟು ಖರ್ಚು ಹೆಚ್ಚುವರಿಯಾಗಿ ಕಾರ್ಯಪಡೆಗೆ ಬಿದ್ದಿದೆ. ಇನ್ನೂ ಗ್ರಿಲ್ಸ್, ಪ್ಲೇವರ್ಸ ಅಳವಡಿಕೆ ಕೂಡ ಮಾಡುವದಿದೆ ಎನ್ನುತ್ತಾರೆ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ.

 

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next