Advertisement

ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿ: ಕೋರ್ಟ್‌ ಆದೇಶ

12:26 AM Feb 11, 2020 | Lakshmi GovindaRaj |

ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ನೆಪದಲ್ಲಿ ಮಹದೇವ ಪುರ ವಲಯದ ಮಾರತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ತೂಬರಹಳ್ಳಿ ಹಾಗೂ ಕುಂದಲಹಳ್ಳಿಯಲ್ಲಿ ಒಕ್ಕಲೆಬ್ಬಿಸಿರುವ ನೂರಾರು ನಿರಾಶ್ರಿತ ವಲಸೆ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲು ಒಂದು ತಿಂಗಳೊಳಗೆ ಸಮಗ್ರ ಪ್ಯಾಕೇಜ್‌ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್‌ ಆದೇಶಿಸಿದೆ.

Advertisement

ಈ ಕುರಿತು ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ (ಪಿಯುಸಿಎಲ್‌) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾ. ಹೇಮಂತ್‌ ಚಂದನ ಗೌಡರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ತೆರವು ಕಾರ್ಯಾಚರಣೆಯಿಂದ ಬಿದಿಗೆ ಬಿದ್ದಿರುವ ನೂರಾರು ನಿರಾಶ್ರಿತ ವಲಸೆ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲು ಒಂದು ತಿಂಗಳೊಳಗೆ ಸಮಗ್ರ ಪ್ಯಾಕೇಜ್‌ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲದೇ 15 ದಿನಗಳೊಳಗೆ ತಾತ್ಕಾಲಿಕ ಪರಿಹಾರ ಯೋಜನೆಯನ್ನು ಸಲ್ಲಿಸುವಂತೆಯೂ ನಿರ್ದೇಶನ ನೀಡಿತು.

ಇದು ಪೊಲೀಸರ ತಪ್ಪಿನಿಂದ ಆಗಿರುವುದು. ಪೊಲೀಸರು ಸ್ಥಳ ಪರಿಶೀಲನೆ ನಡೆಸದೆ, ತನಿಖೆ ಮಾಡದೆ ಅಕ್ರಮವಾಸಿಗಳು ಎಂಬ ತೀರ್ಮಾನಕ್ಕೆ ಬಂದಿರುವುದು ಸರಿಯಲ್ಲ. ಹಾಗಾಗಿ ಸರ್ಕಾರವೇ ಪರಿಹಾರ ಮತ್ತು ಪುನರ್‌ ವಸತಿ ಕಲ್ಪಿಸಿಕೊಡಬೇಕು ಎಂದು ನ್ಯಾಯಪೀಠ ಹೇಳಿತು.

ಮಾರತ್ತಹಳ್ಳಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಕಳೆದ ಜ.11ರಂದು ಭೂಮಾಲೀಕರಿಗೆ ನೋಟಿಸ್‌ ನೀಡಿ ನಿಮ್ಮ ಭೂಮಿಯಲ್ಲಿ ವಾಸಿಸುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ತೆರವು ಮಾಡಿ ಎಂದು ಹೇಳಿರುವುದು ಮೇಲ್ನೋಟಕ್ಕೆ ತಪ್ಪಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸದೆ, ತನಿಖೆ ಮಾಡದೆ ಹೇಗೆ ಅಷ್ಟು ದೊಡ್ಡ ಸಂಖ್ಯೆಯ ಜನರನ್ನು ಅಕ್ರಮ ವಾಸಿಗಳು ಎಂಬ ತೀರ್ಮಾನಕ್ಕೆ ಬಂದರು ಎಂದು ನ್ಯಾಯಪೀಠ ಪ್ರಶ್ನಿಸಿತು.

Advertisement

ಅಲ್ಲದೆ, ಭೂಮಿಯ ಮಾಲೀಕರು, ಅಕ್ರಮ ವಲಸಿಗರನ್ನು ತಾವು ತೆರವು ಮಾಡಿಲ್ಲ, ಅವರಾಗಿಯೇ ಜಾಗಬಿಟ್ಟು ಹೋದರು ಎಂದು ಹೇಳಿರುವುದನ್ನು ಒಪ್ಪಲಾಗದು. ಇದೇ ವೇಳೆ ಬಿಬಿಎಂಪಿ ಮತ್ತು ಸರ್ಕಾರ ತಾವು ವಲಸೆ ಕಾರ್ಮಿಕರನ್ನು ತೆರವುಗೊಳಿಸಿಲ್ಲ ಎಂದು ಹೇಳುತ್ತಿವೆ.

ಅದನ್ನೂ ಸಹ ಒಪ್ಪಲು ಸಾಧ್ಯವಿಲ್ಲ. ಅರ್ಜಿದಾರರ ಪರ ವಕೀಲರು, ಇಂದು ಸಲ್ಲಿಸಿರುವ ಜಂಟಿ ಮೆಮೋದಲ್ಲಿ ಪೊಲೀಸರೇ ಖುದ್ದು ನಿಂತು ಬಲವಂತವಾಗಿ ತೆರವುಗೊಳಿಸುತ್ತಿರುವುದನ್ನು ಫೋಟೋ ಸಹಿತ ಹಾಕಿದ್ದಾರೆ. ಹಾಗಾಗಿ ಇದು ಸರ್ಕಾರ ಕಡೆಯಿಂದ ತಪ್ಪಾಗಿರುವುದರಿಂದ ಅದೇ ಪರಿಹಾರವನ್ನು ನೀಡಬೇಕು ಎಂದು ನ್ಯಾಯಪೀಠ ಹೇಳಿತು.

ಸರ್ಕಾರದ ಪರ ವಾದ ಮಂಡಿಸಿದ ವಕೀಲರಾದ ವಿ.ಶ್ರೀನಿಧಿ, ಸರ್ಕಾರ ಪುನರ್ವಸತಿ ಕಲ್ಪಿಸಲಿದೆ. ಆದರೆ ಯಾರ್ಯಾರನ್ನು ಒಕ್ಕಲೆಬ್ಬಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಅಸ್ಪಷ್ಟವಾಗಿದೆ, ಅರ್ಜಿದಾರರು ನೀಡಿರುವ ಮಾಹಿತಿಯಲ್ಲಿ ಅವರು ಅಸ್ಸಾಂ, ತೆಲಂಗಣ ವಾಸಿಗಳೆಂಬ ಕಾಯಂ ವಿಳಾಸವಿದೆ.

ಆದರೆ ಹಾಲಿ ಅವರು ಎಲ್ಲಿ ನೆಲೆಸಿದ್ದಾರೋ ಮಾಹಿತಿ ಇಲ್ಲ ”ಎಂದರು. ಅದಕ್ಕೆ ಅರ್ಜಿದಾರರ ಪರ ವಕೀಲೆ ಮೈತ್ತೈಯಿ ಕೃಷ್ಣನ್‌, ನಿರಾಶ್ರಿತರು ಬೇರೆಲ್ಲೂ ಹೋಗಿಲ್ಲ, ಅಲ್ಲೇ ಸುತ್ತಮುತ್ತ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂದರಲ್ಲದೆ, ಸುಮಾರು 150 ಮಂದಿಯ ವಿವರಗಳನ್ನೂ ಸಹ ನ್ಯಾಯಪೀಠಕ್ಕೆ ಸಲ್ಲಿಸಿದರು.

ಈ ಮಧ್ಯೆ, ಇದೇ ಪ್ರಕರಣದಲ್ಲಿ ನಿಯಮ ಪಾಲನೆ ಮಾಡದೆ, ಸ್ಥ ಳ ಪರಿಶೀಲನೆ ನಡೆಸದೆ ತನಿಖೆ ಮಾಡದೆ ಏಕಾಏಕಿ ವಲಸೆ ಕುಟುಂಬಗಳನ್ನು ಅಕ್ರಮ ಬಾಂಗ್ಲಾ ವಾಸಿಗಳೆಂದು ತೆರವು ಮಾಡಿಸಿದ್ದರೆಂಬ ಕಾರಣಕ್ಕೆ ಮಾರತ್‌ ಹಳ್ಳಿ ಪೊಲೀಸ್‌ ಠಾಣೆಯ ಇನ್ಸಪೆಕ್ಟರ್‌ ಬಿ.ಪಿ.ಗಿರೀಶ್‌ ಕುಮಾರ್‌ ಅವರನ್ನು ಅಮಾನತುಗೊಳಿಸಿರುವ ಬಗ್ಗೆ ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಮೂಲಭೂತ ಹಕ್ಕುಗಳ ಉಲ್ಲಂಘನೆ: ವಲಸಿಗರನ್ನು ಒಕ್ಕಲೆಬ್ಬಿಸುವಾಗ ನಿಯಮಗಳನ್ನು ಪಾಲನೆ ಮಾಡದಿರುವುದು ಕಂಡು ಬಂದಿದೆ. ಮೇಲ್ನೋಟಕ್ಕೆ ಅಷ್ಟು ದೊಡ್ಡ ಸಂಖ್ಯೆಯ ಜನರನ್ನು ಏಕಾಏಕಿ ತೆರವು ಮಾಡಿರುವುದು ತಪ್ಪು. ಅಲ್ಲದೆ, ಇದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ.

ಏಕೆಂದರೆ ಸೂರು ಹೊಂದುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು”ಎಂದು ನ್ಯಾಯಪೀಠ ಆದೇಶಿಸಿತು. ಅಲ್ಲದೆ, ಯಾವ ನಿರಾತ್ರಿತರನ್ನು ಒಕ್ಕಲೆಬ್ಬಿಸಲಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬೇಕು, ಅರ್ಜಿದಾರರೂ ಸಹ ಮಾಹಿತಿಯನ್ನು ಒದಗಿಸಬೇಕು ಎಂದು ನ್ಯಾಯಪೀಠ ಆದೇಶಿಸಿ ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next