Advertisement

ನಿಯಂತ್ರಣ ಸರಿ, ದುರ್ಬಳಕೆ ಸಲ್ಲದು

02:20 AM Feb 26, 2021 | Team Udayavani |

ಸಾಮಾಜಿಕ ಜಾಲತಾಣಗಳು, ನ್ಯೂಸ್‌ ವೆಬ್‌ಸೈಟ್ಗಳು, ಒಟಿಟಿ ವೇದಿಕೆಗಳ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಕೇಂದ್ರ ಸರಕಾರ‌ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಇದು ಚರ್ಚೆಗೂ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳು, ನ್ಯೂಸ್‌ ವೆಬ್‌ ಸೈಟ್‌ಗಳು ಮತ್ತು ಒಟಿಟಿಗಳ ಮೇಲೆ ನಿಯಂತ್ರಣ ಹೇರುವುದರಿಂದ, ಜನರ ಮೂಲಭೂತ ಹಕ್ಕನ್ನೇ ಕಸಿದುಕೊಂಡಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಗಳೂ ಎದುರಾಗಿವೆ. ಆದರೆ ಇದಕ್ಕೆ ಕೇಂದ್ರ ಸರಕಾರವೂ ಸಮರ್ಥನೆ ನೀಡಿದ್ದು, ಮೂಲಭೂತ ಹಕ್ಕು ಎಂಬುದು ಎಲ್ಲರಿಗೂ ಅನ್ವಯವಾಗಲಿದ್ದು, ಒಬ್ಬರ ಸ್ವಾತಂತ್ರ್ಯ ಬಲಿಕೊಟ್ಟು, ಮತ್ತೂಬ್ಬರ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಮಾತನಾಡಿದೆ.

Advertisement

ಹೌದು ಇದುವರೆಗೆ ದೇಶದಲ್ಲಿ ಸಾಮಾಜಿಕ ಜಾಲತಾಣಗಳು, ನ್ಯೂಸ್‌ ವೆಬ್‌ಸೈಟ್ಗಳು ಮತ್ತು ಒಟಿಟಿ ವೇದಿಕೆಗಳನ್ನು ನಿಯಂತ್ರಣ ಇಡುವ ಯಾವುದೇ ಮಾನದಂಡಗಳಿರಲಿಲ್ಲ. ಇದು ಯಾವ ಮಟ್ಟದಲ್ಲಿ ಅಂದರೆ ವೈಯಕ್ತಿಕ ಸ್ವಾತಂತ್ರ್ಯವಿದ್ದು, ನಾನು ಏನು ಬೇಕಾದರೂ ಮಾಡುತ್ತೇನೆ ಎಂಬರ್ಥದಲ್ಲಿ ಸೋಶಿಯಲ್‌ ಮೀಡಿಯಾಗಳಲ್ಲಿ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯ ಹರಣವೂ ಆಗುತ್ತಿತ್ತು.

ಈಗ ತಂದಿರುವ ಹೊಸ ನಿಯಮಗಳು ಈ ವೈಯಕ್ತಿಕ ಸ್ವಾತಂತ್ರ್ಯ ಹರಣಕ್ಕೆ ಕೊಕ್ಕೆ ಹಾಕಲಿದೆ. ಬೇರೊಬ್ಬ ಹಾಕಿದ ಪೋಸ್ಟ್‌, ಮತ್ತೂಬ್ಬರ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಅಥವಾ ಆತನ ಚಾರಿತ್ರ್ಯಹರಣವಾಗುತ್ತಿದೆ ಎಂದಾದಲ್ಲಿ, ಈ ಬಗ್ಗೆ ದೂರು ನೀಡಿದರೆ 36 ಗಂಟೆಗಳ ಒಳಗೆ ಆ ಪೋಸ್ಟ್‌ ಅನ್ನು ತೆಗೆದುಹಾಕಬೇಕು. ಇದು ಸರಿಯಾದ ವಿಚಾರವೇ. ಏಕೆಂದರೆ ಎಷ್ಟೋ ಬಾರಿ ಅಪ್ರಾಪ್ತ ವಯಸ್ಸಿನ ಮಕ್ಕಳು ಈ ಸಾಮಾಜಿಕ ಜಾಲತಾಣದ ಗೀಳಿಗೆ ಬಿದ್ದು, ತಮ್ಮ ಖಾಸಗಿ ಮಾಹಿತಿಯನ್ನು ಬೇರೊಬ್ಬರ ಜತೆ ಹಂಚಿಕೊಂಡು, ಬಳಿಕ ಅವು ಇದೇ ಸಾಮಾಜಿಕ ಜಾಲತಾಣಗಳ ಮೂಲಕ ಜಗಜ್ಜಾಹೀರಾಗಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಆದರೆ ಯಾವ ಪೋಸ್ಟ್ ಗಳನ್ನು ತೆಗೆದುಹಾಕಬೇಕು, ಯಾವುದನ್ನು ತೆಗೆದುಹಾಕಬಾರದು ಎಂಬುದು ಜಿಜ್ಞಾಸೆಯಲ್ಲಿ ಉಳಿದಿದೆ. ವೈಯಕ್ತಿಕ ಸ್ವಾತಂತ್ರ್ಯ ಹರಣ ಸರಿ, ಆದರೆ ಸರಕಾರಗಳನ್ನು ಟೀಕಿಸಿದರೆ ಅಂಥ ಪೋಸ್ಟ್‌ಗಳನ್ನು ತೆಗೆದುಹಾಕಬೇಕಾ? ಜನರಿಗೆ ಟೀಕಿಸುವ ಸ್ವಾತಂತ್ರ್ಯವೂ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತವೆ. ಇದು ಇತ್ತೀಚಿನ ಟ್ವಿಟರ್‌ ಮತ್ತು ಕೇಂದ್ರ ಸರಕಾರದ ನಡುವಿನ ಸಂಘರ್ಷದಲ್ಲಿ ಬಹಿರಂಗವಾಗಿದೆ.

ಇನ್ನು ಒಟಿಟಿಗಳ ಮೇಲೆ ನಿಯಂತ್ರಣ ಮತ್ತು ಯಾವ ಕಂಟೆಂಟ್‌ ಅನ್ನು ಯಾವ ವಯಸ್ಸಿನವರು ನೋಡಬಹುದು ಎಂಬ ವರ್ಗೀಕರಣ ಉತ್ತಮವಾದದ್ದೇ. ಆದರೆ ಸರಕಾರ‌ ನಿಯಮ ಮಾಡಿದರೂ ಇದರ ಪಾಲನೆ ಮೊಬೈಲ್‌ ಬಳಕೆ ಮಾಡುವವರದ್ದೇ ಆಗಿದೆ. ಒಂದು ವೇಳೆ ಮಕ್ಕಳ ಕೈಗೆ ಮೊಬೈಲ್‌ ಕೊಡುವುದೇ ಆದರೆ ಪೋಷಕರೇ ಪೆರೆಂಟಲ್‌ ಕಂಟ್ರೋಲ್‌ ಅಳವಡಿಸಬೇಕು. ಏಕೆಂದರೆ ಒಟಿಟಿ ವೇದಿಕೆ ತೆರೆಯುವ ಪ್ರತಿಯೊಬ್ಬರೂ ತನ್ನ ವಯಸ್ಸು 18 ಮೀರಿದೆ ಎಂದೇ ಹೇಳಿಕೊಳ್ಳುತ್ತಾನೆ.

ಇದರ ಜತೆಗೆ ನ್ಯೂಸ್‌ ವೆಬ್‌ಸೈಟ್‌ಗಳೂ ಅಷ್ಟೇ. ಸುಳ್ಳು ಸುದ್ದಿ ಹಬ್ಬಿಸುವ ವೆಬ್ಸೈಟ್‌ಗಳ ಮೇಲೆ ಗಮನವೇನೋ ಸರಿ, ಆದರೆ ನಿಜಕ್ಕೂ ಸರಿಯಾದ ಸುದ್ದಿ ನೀಡುವವನಿಗೆ ಇದರಿಂದ ತೊಂದರೆಯಾಗಬಾರದು ಅಷ್ಟೇ. ಜತೆಗೆ ವೆಬ್‌ಸೈಟ್‌ಗಳ ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ವಿಚಾರ ಸಣ್ಣ ಪುಟ್ಟ ವೆಬ್‌ಸೈಟ್ಗಳ ಮಾಲಕರಿಗೆ ತೊಂದರೆಯಾಗಬಹುದು. ಈ ನಿಟ್ಟಿನಲ್ಲಿ ಯೋಚಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next