ಮೈಸೂರು: ಕೇಂದ್ರ ಸರ್ಕಾರದ ಆದೇಶದ ಪ್ರಕಾರ 9, 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಸೆ.21ರಿಂದ ಶಾಲೆಗೆ ಹೋಗಿ ಶಿಕ್ಷಕರ ಬಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳುವ ಅವಕಾಶ ಇದೆಯೇ ಹೊರತು ತರಗತಿಗಳು ಆರಂಭವಾಗುವುದಿಲ್ಲ. ಮಾಮೂಲಿ ತರಗತಿ ಆರಂಭಿಸಲು ಕೇಂದ್ರದಿಂದ ಅನುಮತಿ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.21ರಿಂದ ಸಾಮಾನ್ಯ ತರಗತಿಗಳು ಶುರುವಾಗುವುದಿಲ್ಲ. ಶಿಕ್ಷಕರೆಲ್ಲರೂ ಶಾಲೆಗೆ ಬರುತ್ತಾರೆ. ವಿದ್ಯಾರ್ಥಿಗಳು ಅವಶ್ಯಕತೆ, ಅನುಮಾನಗಳಿದ್ದರೆ ಶಾಲೆಗೆ ಬಂದು ಶಿಕ್ಷಕರ ಬಳಿ ಮಾತನಾಡಬಹುದು. ಇದು ಮಾಮೂಲಿ ತರಗತಿಯಲ್ಲ. ವಿದ್ಯಾರ್ಥಿಗಳು ತಮ್ಮ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ. ಅಲ್ಲದೆ ಶಾಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ, ರಾಜ್ಯ ಸರ್ಕಾರ ಎಸ್‌ಒಪಿ ತಯಾರಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!
ಖಾಸಗಿ ವಾಹಿನಿಗಳಲ್ಲಿ ತರಗತಿ ಪ್ರಸಾರಕ್ಕೆ ಟೆಂಡರ್: ಈಗಾಗಲೇ ಚಂದನ ವಾಹಿನಿಯಲ್ಲಿ ಸೇತುಬಂಧ ಮುಗಿದು ಈ ವರ್ಷದ ಪಠ್ಯಕ್ರಮದ ತರಗತಿಗಳು ಪ್ರಸಾರವಾಗುತ್ತಿದೆ. ವಿದ್ಯಾಗಮ ಕಾರ್ಯಕ್ರಮ ಕೂಡ ಚೆನ್ನಾಗಿ ನಡೆಯುತ್ತಿದೆ. ಇದಕ್ಕಿಂತ ಹೆಚ್ಚು ಕಾರ್ಯಕ್ರಮ ಪ್ರಸಾರ ಮಾಡಲು ಚಂದನ ವಾಹಿನಿ ಬಳಿ ಸಮಯ ಇಲ್ಲ. ಕೆಲವು ಖಾಸಗಿ ವಾಹಿನಿಗಳನ್ನು ಸಮಯ ಕೇಳಿದರೆ ಹೆಚ್ಚು ದರ ಕೇಳಿದರು. ಆದರೆ ಈಗ ಇನ್ನು ಕೆಲವು ಖಾಸಗಿ ವಾಹಿನಿಗಳು ತಾವಾಗಿಯೇ ಮುಂದೆ ಬಂದು ಕಡಿಮೆ ದರದಲ್ಲಿ ಕಾರ್ಯಕ್ರಮ ಪ್ರಸಾರ ಮಾಡಲು ಒಪ್ಪಿಕೊಂಡಿವೆ. ಈ ಸಂಬಂಧ ಟೆಂಡರ್ ಸಹ ಕರೆಯಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗೆ ಎಷ್ಟು ವಿದ್ಯಾರ್ಥಿಗಳು ಬಂದರೂ ಸಮಸ್ಯೆಯಿಲ್ಲ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯಾರ್ಥಿಗಳು ಹಾಗೂ ಪೋಷಕರು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರಿ ಶಾಲೆಗಳು ಇರುವುದೇ ಬಡ, ಮಧ್ಯಮ, ಕೆಳ ಮಧ್ಯಮ ಕುಟುಂಬಳಿಗಾಗಿ. ಎಷ್ಟು ವಿದ್ಯಾರ್ಥಿಗಳು ಬಂದರೂ ಎಲ್ಲರಿಗೂ ನಾವು ಶಿಕ್ಷಣ, ಸೂಕ್ತ ಸೌಲಭ್ಯ, ಪಠ್ಯ ಪುಸ್ತಕಗಳನ್ನು ನೀಡಲು ತಯಾರಿದ್ದೇವೆ ಎಂದು ಹೇಳಿದರು.