ಧಾರವಾಡ: ಶಾಸಕ ಅಮೃತ ದೇಸಾಯಿ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಹಾಗೂ ಗೆಳೆಯರ ಬಳಗದಿಂದ ತಾಲೂಕಿನ ನರೇಂದ್ರ ಗ್ರಾಮದ ಬಳಿಯ ಶ್ರೀ ಸಾಯಿ ಕೆ.ಬಿ.ಎನ್. ಕಲ್ಯಾಣ ಮಂಟಪದಲ್ಲಿ ರಕ್ತದಾನ ಹಾಗೂ ನೇತ್ರದಾನ ನೋಂದಣಿ ಶಿಬಿರವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಪುನೀತ್‌ರಾಜಕುಮಾರ್ ನೇತ್ರದಾನದಿಂದ ಪ್ರೇರಣೆ ಪಡೆದಿರುವ ಶಾಸಕ ಅಮೃತ ದೇಸಾಯಿ ಅವರು, ತಮ್ಮ ಪತ್ನಿ ಸಮೇತ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಸಿದರು.
ನಟ ಪುನೀತ್ ರಾಜಕುಮಾರ್ ನಿಧನದ ಬಳಿಕವೂ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ನಾವು ಮಾಡುವ ನೇತ್ರದಾನದಿಂದ ಬೇರೆಯವರು ಕೂಡ ದೃಷ್ಟಿ ಪಡೆಯಲಿದ್ದಾರೆ. ಈ ಕಾರಣದಿಂದ ನೇತ್ರದಾನ ಮಾಡುತ್ತಿರುವುದಾಗಿ ಶಾಸಕ ಅಮೃತ ದೇಸಾಯಿ ಹೇಳಿದರು. ಇದಾದ ಬಳಿಕ ಶಿಬಿರದಲ್ಲಿ 210 ಜನರು ನೇತ್ರದಾನಕ್ಕೆ ನೋಂದಣಿ ಮಾಡಿಸಿದರೆ, 71 ಜನ ರಕ್ತದಾನ ಮಾಡಿದರು.
ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ, ಚುನಾಯಿತ ಪ್ರತಿನಿ ಧಿಗಳು ನಿರಂತರ ಜನರ ಮಧ್ಯದಲ್ಲಿದ್ದು ಕೆಲಸ ನಿರ್ವಹಿಸಿದಾಗಲೇ ಹೆಚ್ಚಿನ ಗೌರವ ಸಿಗುತ್ತದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಜನಪ್ರತಿನಿ ಧಿಗಳು ಬೆಳೆಸಿಕೊಳ್ಳಬೇಕು. ಆಗ ಜನರಿಂದ ಮನ್ನಣೆ ಮತ್ತು ಸೂಕ್ತ ಬೆಂಬಲ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಅಮೃತ ದೇಸಾಯಿ ಅವರು ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಾನುರಾಗಿಯಾಗಿದ್ದಾರೆ ಎಂದರು.
ಅಮೃತ ದೇಸಾಯಿ ಗೆಳೆಯರ ಬಳಗದ ಅಧ್ಯಕ್ಷ ರುದ್ರಪ್ಪ ಅರಿವಾಳ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಎಸ್. ಆರ್. ರಾಮನಗೌಡರ ಮತ್ತು ಡಾ| ವಿ.ಎಂ. ದೇಶಪಾಂಡೆ ಅವರನ್ನು ಸತ್ಕರಿಸಲಾಯಿತು. ಮಾಜಿ ಶಾಸಕ ಎ.ಬಿ. ದೇಸಾಯಿ, ಅಶೋಕ್ ದೇಸಾಯಿ, ಪ್ರಿಯಾ ದೇಸಾಯಿ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಜಿಪಂ ಸದಸ್ಯರಾದ ತವನಪ್ಪ ಅಷ್ಟಗಿ, ಪ್ರೇಮಾ ಕೊಮಾರ ದೇಸಾಯಿ, ಎಪಿಎಂಸಿ ಅಧ್ಯಕ್ಷ ಚೆನವೀರಗೌಡ ಪಾಟೀಲ, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ, ಶಂಕರ ಶೇಳಕೆ, ಗಣ್ಯರಾದ ಶಶಿಮೌಳಿ ಕುಲಕರ್ಣಿ, ನಾಗರಾಜ ಗಾಣಿಗೇರ, ಶಿವಾನಂದ ದೇಶನೂರ, ಅಡಿವೆಪ್ಪ ಹೊನ್ನಪ್ಪನವರ, ಕಲ್ಲಪ್ಪ ಹಟ್ಡಿ, ಎಚ್.ಡಿ. ಪಾಟೀಲ, ಸಂಭಾಜಿ ಜಾಧವ ಇದ್ದರು. ರಾಷ್ಟೋತ್ಥಾನ ರಕ್ತ ನಿ ಧಿಯವರು ರಕ್ತದಾನ ಮತ್ತು ಡಾ| ಎಂ.ಎಂ. ಜೋಶಿ ನೇತ್ರ ಸಂಶೋಧನಾ ಟ್ರಸ್ಟ್‌ನ ಸಿಬ್ಬಂದಿ ನೇತ್ರದಾನ ನಡೆಸಿಕೊಟ್ಟರು.
ಜಿಲ್ಲಾ ಕೆಡಿಪಿ ಸದಸ್ಯ ನಾಗನಗೌಡ ಪಾಟೀಲ ಸ್ವಾಗತಿಸಿದರು. ಗ್ರಾಮೀಣ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಂಕರ ಕೊಮಾರ ದೇಸಾಯಿ ನಿರೂಪಿಸಿದರು. ಸುನೀಲ ಮೋರೆ ವಂದಿಸಿದರು.