Advertisement

ನಿರಾಶ್ರಿತರ ಸೇವೆಗೆ 242 ವೈದ್ಯರ ನೋಂದಣಿ!

06:00 AM Aug 24, 2018 | |

ಮಡಿಕೇರಿ: ಕೊಡಗಿನ ಜನರಿಗೆ ಉಚಿತ ಸೇವೆ ನೀಡಲು ರಾಜ್ಯದ ವೈದ್ಯರು ಹಾಗೂ ದಾದಿಯರು ಸ್ವಇಚ್ಛೆಯಿಂದ ಮುಂದೆ ಬಂದಿದ್ದು, ಗೂಗಲ್‌ ಡಾಕ್ಸ್‌ ತಂತ್ರಾಂಶದಲ್ಲಿ ಈಗಾಗಲೇ 242 ವೈದ್ಯರು ಮತ್ತು 178 ದಾದಿಯರು ನೋಂದಣಿ ಮಾಡಿಕೊಂಡಿದ್ದಾರೆ.

Advertisement

ಈ ಎಲ್ಲ ವೈದ್ಯರನ್ನು ಹಾಗೂ ದಾದಿಯರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಸ್ಪತ್ರೆ ರೂಪು-ರೇಷೆ ಸಿದ್ಧಪಡಿಸಿಕೊಂಡಿದೆ.

ವೈದ್ಯಕೀಯ ತಂಡವನ್ನು ಆ.30ರ ತನಕ ಆರೋಗ್ಯ ಸೇವೆ ಒದಗಿಸಲು ಬೇಕಾದ ಸಿದ್ಧತೆಯಾಗಿದೆ. ಸೆ.15ರ ತನಕವೂ ವೈದ್ಯರ ಸೇವೆ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಆರೋಗ್ಯಾಧಿಕಾರಿ ಡಾ.ರಾಜೇಶ್‌ ಹೇಳಿದರು.

ವೈದ್ಯರು ಹಾಗೂ ದಾದಿಯರು ವೈಯಕ್ತಿಕ ನೆಲೆಯಲ್ಲಿ ಬಂದು ಸೇವೆ ಮಾಡಲು ಅನುಕೂಲವಾಗುವಂತೆ ಗೂಗಲ್‌ ಡಾಕ್ಸ್‌ನಲ್ಲಿ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ವೈದ್ಯರ ಮಾಹಿತಿಯ ಜತೆಗೆ ಅವರು ತರಲಿರುವ ವೈದ್ಯಕೀಯ ಪರಿಕರ ಹಾಗೂ ವಸ್ತುಗಳ ವಿವರವೂ ಇದರಲ್ಲಿ ದೊರೆಯಲಿದೆ. ಅದರ ಆಧಾರದಲ್ಲಿ ಹಂತ ಹಂತವಾಗಿ ವೈದ್ಯರ ಸೇವೆ ಬಳಸಿಕೊಳ್ಳಲು ಕಾರ್ಯಯೋಜನೆ ರೂಪಿಸಿದ್ದೇವೆ. ಈಗಾಗಲೇ ಬಂದಿರುವ ವೈದ್ಯರಿಗೂ ಸೂಕ್ತ ಜವಾಬ್ದಾರಿ ನೀಡಿದ್ದೇವೆ ಎಂದು ತಿಳಿಸಿದರು.
ಒಟ್ಟಾರೆಯಾಗಿ 25 ವೈದ್ಯರ ತಂಡ ಸೇವೆ ಸಲ್ಲಿಸುತ್ತಿದೆ. ಎಲ್ಲ ನಿರಾಶ್ರಿತರ ಕೇಂದ್ರದಲ್ಲೂ ಇಬ್ಬರು ವೈದ್ಯರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಬಿರದಲ್ಲಿ ಇರುವ 30 ವರ್ಷ ಮೇಲ್ಪಟ್ಟ ಎಲ್ಲರ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚು ಗಂಭೀರ ಪ್ರಕಣಗಳು ಬಂದಿಲ್ಲ. ಎಲುಬು ಹಾಗೂ ಮೂಳೆ ನೋವಿನಿಂದ ಬಳಲುತ್ತಿರುವ ಮೂರ್‍ನಾಲ್ಕು ಜನರಿಗೆ ಚಿಕಿತ್ಸೆ ನೀಡಿದ್ದೇವೆ.

Advertisement

ನಿರಾಶ್ರಿತರಲ್ಲಿ ಒಳ ರೋಗಿ ವಿಭಾಗದಲ್ಲಿ  30 ಮಂದಿಗೆ ಹಾಗೂ ಹೊರರೋಗಿ ವಿಭಾಗದಲ್ಲಿ 60 ಮಂದಿಗೆ ಚಿಕಿತ್ಸೆ ನೀಡಿದ್ದೇವೆ. 10 ಮಂದಿ ಇನ್ನೂ ಒಳರೋಗ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್‌ ಹೇಳಿದರು.

ಲಘುಉಷ್ಣತೆ(ಹೈಪೋಥರ್ಮಿಯಾ) ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ವಿಪರಿತ ಮಳೆಯಿಂದಾಗಿ ಮನುಷ್ಯನ ದೇಹದಲ್ಲಿ ಉಷ್ಣಾಂಶ ಕಡಿಮೆಯಾದಾಗದ ಈ ಸಮಸ್ಯೆ ಕಂಡು ಬರುತ್ತದೆ. ಅದಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯರಿಗೆ ಹಾಗೂ ಪುರಷರಿಗೆ ಪ್ರತ್ಯೇಕವಾದ ಎರಡು ವಾರ್ಮ್(ಉಷ್ಣಾಂಶ ಹೆಚ್ಚಿಸಲು ಸಹಕಾರಿ) ಕೊಠಡಿ ವ್ಯವಸ್ಥೆ ಮಾಡಿದ್ದೇವೆ. ತಲಾ 8 ಹಾಸಿಗೆಯ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿರುವ ರೋಗಿಗಳಿಗೆ ವಾರ್ಮ್ ಕೊಠಡಿಯಲ್ಲಿ ಚಿಕಿತ್ಸೆ ನೀಡಿ ನಂತರ ವಾರ್ಡ್‌ಗೆ ವರ್ಗಾಯಿಸುತ್ತೇವೆ. ಆಸ್ಪತ್ರೆಯಲ್ಲಿ 50 ವೈದ್ಯರು ಮತ್ತು 200 ದಾದಿಯರು ಮೂರು ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ರೋಗಿಗಳನ್ನು ಮೈಸೂರು ಅಥವಾ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆಯೂ ಆಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next