ಬೆಂಗಳೂರು :ಇನ್ಮುಂದೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ಖಾಸಗಿ ಅಭ್ಯರ್ಥಿಗಳು ಕಡ್ಡಾಯವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೋಂದಣಿ ಮಾಡಿಕೊಳ್ಳಬೇಕು. 2018-19 ನೇ ಸಾಲಿನ ಪರೀಕ್ಷೆಯಿಂದಲೇ ಇದು ಜಾರಿಯಾಗಲಿದೆ.
ದಂಡ ಶುಲ್ಕವಿಲ್ಲದೇ ಸೆ.5ರೊಳಗೆ ಅರ್ಜಿ ಸಲ್ಲಿಸಬಹುದು ಮತ್ತು ಕಾಲೇಜಿನವರು ಆ ಅರ್ಜಿಯನ್ನು ಸೆ.10ರೊಳಗೆ ಪದವಿ ಪೂರ್ವ ಇಲಾಖೆಯ ಕೇಂದ್ರ ಕಚೇರಿಗೆ ತಲುಪಿಸಬೇಕು. ದಂಡಶುಲ್ಕ ಗರಿಷ್ಠ 500 ರೂ. ಪಾವತಿಸಿ ಸೆ.18ರವರೆಗೂ ನೋಂದಣಿ ಮಾಡಬಹುದು. ಕಾಲೇಜಿನವರು ಸೆ.22ರೊಳಗೆ ಈ ಅರ್ಜಿಯನ್ನು ಇಲಾಖೆಗೆ ಸಲ್ಲಿಸಬೇಕು. ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್
//www.pue.kar.nic.in ಸಂಪರ್ಕಿಸಬಹದು.
17 ವರ್ಷ ತುಂಬಿರುವವರು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಐಸಿಎಸ್‌ಇಗಳಲ್ಲಿ ವ್ಯಾಸಂಗ ಮಾಡಿ, 2018ರ ಜೂನ್ ಅಥವಾ ಅದಕ್ಕೂ ಹಿಂದಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇತರೆ ರಾಜ್ಯದ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಒಂದು ಭಾಷೆಯಾಗಿ ಅಥವಾ ಒಂದು ಮಾಧ್ಯಮವಾಗಿ ಅಧ್ಯಯನ ಮಾಡಿರಬೇಕು. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ನೋಂದಾಯಿಸಿಕೊಳ್ಳಲು ಸಾಧ್ಯ ಎಂದು ಪಿಯು ಇಲಾಖೆ ತಿಳಿಸಿದೆ.
ಪ್ರಥಮ ಪಿಯುಸಿ ಅನುತ್ತೀರ್ಣರಾದವರು ಅಥವಾ ಪರೀಕ್ಷೆಗೆ ಹಾಜರಾಗದವರು ಖಾಸಗಿ ಅಭ್ಯರ್ಥಿಯಾಗಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ. ರೇಗ್ಯೂಲರ್ ಅಥವಾ ಪುನರಾವರ್ತಿತ ಅಭ್ಯರ್ಥಿಗಳಾಗಿ 2019ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವವರು ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ಅನರ್ಹರು ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿರುವುದು ತಿಳಿದುಬಂದರೆ ಶುಲ್ಕ ಮರುಪಾವತಿ ಮಾಡುವುದಿಲ್ಲ ಮತ್ತು ಇದಕ್ಕೆ ಕಾರಣರಾದ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ನೋಂದಣಿ ಮಾಡಲು ನೋಂದಣಿ ಶುಲ್ಕ, ದಾಖಲಾತಿ ಶುಲ್ಕ, ಕಾಲೇಜು ಅಭಿವೃದ್ಧಿ ಶುಲ್ಕ ಅಂಕಪಟ್ಟಿ ಹಾಗೂ ಪರೀಕ್ಷಾ ಶುಲ್ಕ ಸೇರಿದಂತೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 1960 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 1560 ರೂ. ಶುಲ್ಕ ನಿಗದಿ ಮಾಡಲಾಗಿದೆ.