Advertisement

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ

12:23 PM Sep 02, 2019 | Suhan S |

ಬೆಳಗಾವಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಶಾಲಿಗೊಳಿಸಬೇಕಾದರೆ ಚುನಾವಣೆ ಮತ್ತು ಮತದಾರರ ಪಟ್ಟಿಯನ್ನು ದೋಷರಹಿತಗೊಳಿಸುವ ಅಗತ್ಯವಿದೆ. ಹೀಗಾಗಿ ಸೆ. 1ರಿಂದ ಅ. 15ರ ವರೆಗೆ ನಡೆಯುವ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಬೊಮ್ಮನಹಳ್ಳಿ ಮನವಿ ಮಾಡಿದರು.

Advertisement

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ರವಿವಾರ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿ ನಡೆಯುತ್ತದೆ. ಆದರೆ ಮತದಾನದ ದಿನದಂದು ನಮ್ಮ ಹೆಸರು ಇಲ್ಲ ಎಂಬ ದೂರುಗಳು ಬರುತ್ತವೆ. ಮತದಾರರು ಜಾಗರೂಕತೆ ವಹಿಸಿದರೆ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಮುಂಚಿತವಾಗಿಯೇ ಸರಿಪಡಿಸಬಹುದು. ಆ ಕಾರಣಕ್ಕಾಗಿಯೇ ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತದೆ. ಹೀಗಾಗಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಮತ್ತು ಹೆಸರು ಕೈಬಿಡುವುದಕ್ಕೆ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ ಎಂದರು.

ಜನವರಿ 1ನೇ ತಾರೀಖನ್ನು ಅರ್ಹತಾ ದಿನಾಂಕ ಎಂದು ಪರಿಗಣಿಸಿ ಪ್ರತಿ ವರ್ಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ. ಸೆ. 1ರಿಂದ ಅಕೋrಬರ್‌ 15ರ ವರೆಗೆ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯ ನಡೆಯಲಿದೆ. ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಲೋಪದೋಷಗಳಿದ್ದರೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸರಿಪಡಿಸಬಹುದು ಎಂದು ತಿಳಿಸಿದರು.

ನಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ಪ್ರಜಾಪ್ರಭುತ್ವದಲ್ಲಿ ನಮಗೆ ನೀಡಲಾಗಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆ ನಮ್ಮೆಲ್ಲರ ಹಬ್ಬ. ಮತದಾನ ಮಾಡುವಾಗ ಎಚ್ಚರ ತಪ್ಪಿದರೆ ನಾವೇ ಪರಿತಪಿಸಬೇಕಾಗುತ್ತದೆ. ಮತದಾನ ಸಂವಿಧಾನಾತ್ಮಕ ಹಕ್ಕು. ಹೀಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿ ಎಲ್ಲರೂ ತಪ್ಪದೇ ಮತದಾನಕ್ಕೆ ಮುಂದಾಗಬೇಕು ಎಂದರು.

Advertisement

ತಮ್ಮ ಹೆಸರು ಖಾತ್ರಿಪಡಿಸಿಕೊಳ್ಳಿ: ಅರ್ಹ ಯುವಕರು ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ನಿಗದಿತ ಅರ್ಜಿ ನಮೂನೆ 6 ಲಭ್ಯವಿರುತ್ತದೆ. ಅಲ್ಲದೇ ಆನ್‌ಲೈನ್‌ನಲ್ಲಿ ಮತದಾರರ ಪಟ್ಟಿ ಲಭ್ಯವಿದ್ದು, ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದರು.

ಮರಣ ಹೊಂದಿರುವವರ ಹೆಸರುಗಳನ್ನು ಅಧಿಕಾರಿಗಳೇ ತೆಗೆಯಲು ಅವಕಾಶವಿಲ್ಲ. ಅಂತಹ ಹೆಸರುಗಳನ್ನು ತೆಗೆಯಬೇಕಾದರೆ ಅವರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂತಹ ಕುಟುಂಬದವರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು. ಅದೇ ರೀತಿ ರಾಜಕೀಯ ಪಕ್ಷಗಳು, ಮಾಧ್ಯಮಗಳು ಈ ಪ್ರಕ್ರಿಯೆಯಲ್ಲಿ ಸಹಕರಿಸಬೇಕು ಎಂದರು. ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ ಮಾತನಾಡಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಹಾಗೂ ಹೆಸರು ತಪ್ಪದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಹೊಣೆಗಾರಿಕೆಯಾಗಿದೆ. ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಆನ್‌ಲೈನ್‌ ಮೂಲಕವೂ ಪರಿಶೀಲನೆಗೆ ಅವಕಾಶವಿರುವುದರಿಂದ ಎಲ್ಲರೂ ಮತದಾನದ ಮೂಲಕ ದೇಶದ ಭವಿಷ್ಯ ರೂಪಿಸಲು ಕೈಜೋಡಿಸಬೇಕು ಎಂದರು.

ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ದೇಶದ ಎಲ್ಲ ನಾಗರಿಕರು ಭಾಗವಹಿಸುವಂತಹ ಚುನಾವಣೆ ಕೂಡ ಒಂದು ಹಬ್ಬವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.

ರವಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, 2020ರ ಜನೇವರಿ 1ಕ್ಕೆ ಹದಿನೆಂಟು ವರ್ಷ ಪೂರ್ಣಗೊಳಿಸುವ ಯುವಕ/ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ಮತದಾರರ ಪಟ್ಟಿಯಲ್ಲಿನ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ತೆಗೆದು ಹಾಕುವುದು ಸೇರಿದಂತೆ ವಿವಿಧ ಬಗೆಯ ಪರಿಷ್ಕರಣೆಯನ್ನು ಪರಿಶೀಲನಾ ಸಂದರ್ಭದಲ್ಲಿ ಮಾಡಲಾಗುವುದು ಎಂದರು.

ಪ್ರಚಾರ ರಾಯಬಾರಿ ರಾಘವೇಂದ್ರ ಅಣ್ವೇಕರ ಮಾತನಾಡಿ, ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಬಿಜೆಪಿ ನಗರ ಅಧ್ಯಕ್ಷ ರಾಜೇಂದ್ರ ಹರಕುಣಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಎರಡೆರಡು ಕಡೆಗಳಲ್ಲಿ ಹೆಸರು ಕಂಡುಬಂದಿದ್ದು, ಈ ಬಾರಿ ಅದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿಕೊಂಡರು.

ಹೆಚ್ಚುವರಿ ಅಪರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ದಿನೇಶಕುಮಾರ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಇದ್ದರು. ಅಪರ ಜಿಲ್ಲಾಧಿಕಾರಿ ಡಾ| ಬೂದೆಪ್ಪ ಎಚ್.ಬಿ. ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಡಾ| ಕವಿತಾ ಯೋಗಪ್ಪನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next