Advertisement
ಕುಂದಾಪುರ, ಬೈಂದೂರು, ಶಿರೂರು, ಕೊಲ್ಲೂರು, ಹೊಸಂಗಡಿ, ಸಿದ್ದಾಪುರ, ಶಂಕರನಾರಾಯಣ, ಹಾಲಾಡಿಯಂತಹ ಗ್ರಾಮಾಂತರ ಭಾಗದ ಜನರು ಚಾಲನ ಪರವಾನಿಗೆ, ವಾಹನ ನೋಂದಣಿ, ನವೀಕರಣ ಮತ್ತಿತರ ಕೆಲಸಕ್ಕಾಗಿ 60-70 ಕಿ.ಮೀ. ದೂರದ ಮಣಿಪಾಲಕ್ಕೆ ತೆರಳಬೇಕಾದ ಅನಿವಾರ್ಯತೆಯಿದೆ. ಈ ಕಾರಣಕ್ಕೆ ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಆರಂಭಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.
ಕುಂದಾಪುರದಲ್ಲಿ ಸಾರಿಗೆ ಕಚೇರಿ ಆರಂಭಿಸಬೇಕು ಎನ್ನುವುದಾಗಿ ಒತ್ತಾಯಿಸಿ ದಿ| ವಿ.ಎಸ್. ಆಚಾರ್ಯ ಕೂಡ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
Related Articles
ಸಚಿವ ಕೋಟ ಅವರು ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭ ಕುರಿತಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಕುಂದಾಪುರದಲ್ಲಿ 72 ಸಾವಿರಕ್ಕೂ ಅಧಿಕ ವಾಹನಗಳಿದ್ದು, ವಾರದಲ್ಲಿ ಒಂದು ದಿನದ ಕ್ಯಾಂಪ್ ನಡೆಸುವುದರಿಂದ ಸರಾಸರಿ 600ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ತಪ್ಪಿದಲ್ಲಿ ಅವರೆಲ್ಲ 60-70 ಕಿ.ಮೀ. ದೂರದ ಮಣಿಪಾಲಕ್ಕೆ ಹೋಗಬೇಕು. ಆದ್ದರಿಂದ ಹೊಸದಾಗಿ ಪ್ರತ್ಯೇಕ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಾರಂಭಿಸಬೇಕು ಎನ್ನುವುದು ಕುಂದಾಪುರದ ಜನತೆಯ ಬೇಡಿಕೆಯಾಗಿದ್ದು, ಕುಂದಾಪುರಕ್ಕೆ ಕಚೇರಿ ಮಂಜೂರು ಮಾಡಿ, ಈ ಸಾಲಿನಲ್ಲಿಯೇ ಪ್ರಾರಂಭಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
ಮಾನದಂಡಗಳೇನು?ಸಾರಿಗೆ ಕಚೇರಿ ಆರಂಭಿಸಬೇಕಾದರೆ ಪ್ರಸ್ತಾವಿತ ಜಾಗದಲ್ಲಿ ಈಗಾಗಲೇ ನೋಂದಣಿಯಾದ ಎಲ್ಲ ವಾಹನಗಳಿಂದ ವಾರ್ಷಿಕ ಕನಿಷ್ಠ 20 ಕೋ.ರೂ. ತೆರಿಗೆ (ರಾಜಸ್ವ) ಮೂಲಕ ಆದಾಯ ಬರಬೇಕು. ಪ್ರಸ್ತಾವಿತ ಕಚೇರಿ ಜಾಗದಲ್ಲಿ ಕನಿಷ್ಠ 30 ಸಾವಿರ ವಾಹನಗಳ ನೋಂದಣಿಯಾಗಿರಬೇಕು. ಆ ಭಾಗದಲ್ಲಿ ಕನಿಷ್ಠ 10,000 ಚಾಲನಾ ಪರವಾನಿಗೆ ನೀಡಿರಬೇಕು. ವಾರ್ಷಿಕ 10,000 ಚಾಲನಾ ಪರವಾನಿಗೆ ನೋಂದಣಿಯಾಗಿರಬೇಕು. ಪ್ರಸ್ತಾವಿತ ಕಚೇರಿಯು ಮೂಲ ಕಚೇರಿಯಿಂದ ಗ್ರಾಮೀಣ ಭಾಗಗಳಿಂದ 50 ಕಿ.ಮೀ. ಅಂತರವಿರಬೇಕು. ಅರ್ಹತೆಗಳೇನು?
ಕುಂದಾಪುರ ಭಾಗಗಳಿಂದ ನೋಂದಣಿಯಾದ ವಾಹನಗಳಿಂದ ಪ್ರತಿ ವರ್ಷ 20 ಕೋ.ರೂ.ಗಿಂತ ಅಧಿಕ ತೆರಿಗೆ (ರಾಜಸ್ವ) ಸಂಗ್ರಹವಾಗುತ್ತದೆ. ಇಲ್ಲಿ ಈವರೆಗೆ 60,710 ವಾಹನ ನೋಂದಣಿಯಾಗಿ ಉಪಯೋಗದಲ್ಲಿದೆ. ಕುಂದಾಪುರ ಭಾಗದ 27,529 ಮಂದಿಗೆ ಚಾಲನಾ ಪರವಾನಿಗೆ ನೀಡಲಾಗಿದೆ. ವಾರ್ಷಿಕ 58,382 ವಾರ್ಷಿಕ ನೋಂದಣಿ ನೀಡಲಾಗುತ್ತದೆ. 50 ಕಿ.ಮೀ. ಅಂತರದಲ್ಲಿದೆ. ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸಬೇಕು ಎನ್ನುವ ಬೇಡಿಕೆ ಬಹು ವರ್ಷಗಳಿಂದ ಇದೆ. ಈ ಬಗ್ಗೆ ಅರ್ಹತೆಗಳೇನು, ಎಷ್ಟೆಲ್ಲ ವಾಹನ ನೋಂದಣಿಯಾಗುತ್ತವೆ, ಆದಾಯ ಎಷ್ಟು ಬರುತ್ತದೆ ಎನ್ನುವ ಕುರಿತಂತೆ 2018ರಲ್ಲಿಯೇ ಬೆಂಗಳೂರಿನ ಪ್ರಧಾನ ಕಚೇರಿಗೆ ವಿವರ ನೀಡಿ, ಪ್ರಸ್ತಾವನೆ ಸಲ್ಲಿಸಲಾಗಿದೆ.
– ರಾಮಕೃಷ್ಣ ರೈ, ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ