Advertisement
ಮಂಡ್ಯದಲ್ಲಿ ಪ್ರಚಾರದ ವೇಳೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತೀರಾ ಗಂಭೀರ ಎನಿಸುವಂಥ ಆರೋಪ ಮಾಡಿದ್ದಾರೆ. ಇದರ ಜತೆಗೆ ರಾಜ್ಯ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಕೂಡ ಸ್ಪರ್ಧೆಗೆ ಬಿದ್ದವರಂತೆ ನಿಗದಿತ ಸಮುದಾಯದವರನ್ನು ಕುರಿತು ಆಡಿದ್ದಾರೆ. ಕ್ಷೇತ್ರದ ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಹೇಳಿದ ಮಾತುಗಳು ನಿಜಕ್ಕೂ ಪ್ರಶ್ನಾರ್ಹವೇ ಆಗಿದೆ. ಇದರಿಂದಾಗಿ ಮಾತುಗಳು ಹೊರಬಿದ್ದು ಜನರ ನಡುವೆ ಅಪನಂಬುಗೆಯ ಕಂದರ ಹೆಚ್ಚುತ್ತದೆ ಮತ್ತು ರಾಜಕಾರಣಿಗಳಿಗೆ ಮತಗಳೆಂಬ ಆದಾಯ ಸಿಗುತ್ತದೆ. ಅಂತಿಮವಾಗಿ ದಿನ ನಿತ್ಯದ ವಹಿವಾಟಿನಲ್ಲಿ ಆಯಾ ಊರುಗಳಲ್ಲಿ ಮುಖ ಮುಖ ನೋಡಿಕೊಳ್ಳಬೇಕಾದದ್ದು ಸ್ಥಳೀಯರೇ. ಚುನಾವಣೆಯೋ, ಇನ್ನು ಏನೋ ಒಂದು ದೊಡ್ಡ ಕಾರ್ಯಕ್ರಮದ ವೇಳೆ ಭಾಷಣ ಮಾಡುವವರು ಅವರ ಕೆಲಸ ಮುಗಿಸಿ ಹೋಗಿರುತ್ತಾರೆ. ಹೀಗಾಗಿ ಅಂಥವುಗಳಿಗೆ ಅವಕಾಶ ಯಾಕೆ ಮಾಡಿಕೊಡಬೇಕು ಎನ್ನುವುದನ್ನು ಜನರೇ ಕೇಳಿಕೊಳ್ಳಬೇಕಾಗಿದೆ.
Related Articles
Advertisement
ಸಾಹಿತಿ- ಬರಹಗಾರರಾಗಿರುವ ಗಿರೀಶ್ ಕಾರ್ನಾಡ್, ನಯನತಾರಾ ಸೆಹಗಲ್ ಸೇರಿದಂತೆ 200 ಮಂದಿ ಈ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾತಿ ಮತ್ತು ಹಣಬಲಕ್ಕೆ ಬಗ್ಗದೆ ಹೊಸ ಭಾರತ ನಿರ್ಮಾಣಕ್ಕೆ ಮುಂದಾಗಲು ಜನರು ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ಪೂರಕವಾಗಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಮೊದಲ ಹಂತದ ಮತದಾನಕ್ಕೆ ಇನ್ನು ಸರಿಯಾಗಿ ಒಂಭತ್ತು ದಿನಗಳು ಬಾಕಿ ಉಳಿದಿವೆ. ಹೀಗಾಗಿ, ಎಲ್ಲಾ ರಾಜಕೀಯ ಪಕ್ಷಗಳು ವಿಷಯದ ಆಧಾರ, ಕ್ಷೇತ್ರದ ಆದ್ಯತೆಗಳಿಗೆ ಗಮನ ನೀಡಬೇಕೆ ಹೊರತು, ಹಿಂದಿನ ಯಾವತ್ತೋ ಹಳೆಯ, ಈಗಿನ ಸಂದರ್ಭಕ್ಕೆ ಹೊಂದಿಕೆಯಲ್ಲದ ವಿಚಾರಗಳಿಗೆ ಆದ್ಯತೆ ಕೊಡುವುದನ್ನು ಬಿಟ್ಟು ನಿಜವಾದ ಜನನಾಯಕರು ಎಂಬ ಅರ್ಥದಲ್ಲಿ ಪ್ರಚಾರ ಕಾರ್ಯ ನಡೆಸಬೇಕು. ಈಗೀಗ ಸಾಮಾಜಿಕ ಜಾಲತಾಣಗಳೇ ಪ್ರಧಾನ ಪಾತ್ರ ವಹಿಸುತ್ತಿವೆಯಾದ್ದರಿಂದ, ಜಾತಿ, ಸಮುದಾಯ ಆಧಾರಿತ ಪ್ರಚಾರ ಅಲ್ಲಿಯೇ ಜೋರಾಗಿ ನಡೆಯುತ್ತಿದೆ. ಅದನ್ನು ತಡೆಯುವುದೇ ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳಿಗೆ ಸವಾಲಿನ ಕೆಲಸ.
ಸದ್ಯ ಇರುವ ನಿಯಮಗಳ ಅನ್ವಯವೇ ಧರ್ಮ, ಜಾತಿ ಆಧಾರಿತ, ರಕ್ಷಣಾ ಪಡೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುವುದರ ಬಗ್ಗೆ ನಿಯಮ-ಕಾನೂನುಗಳಲ್ಲಿ ಸ್ಪಷ್ಟವಾಗಿ ಕೂಡದು ಎಂದು ಉಲ್ಲೇಖೀಸಲಾಗಿದೆ. ಇದರ ಜತೆಗೆ ಚುನಾವಣಾ ಆಯೋಗ ಕೂಡ ದಿನಗಳ ಹಿಂದಷ್ಟೇ ಎಲ್ಲಾ ಪಕ್ಷಗಳಿಗೆ ಮನವಿ ಮಾಡಿ, ಪ್ರಚಾರದ ಭರಾಟೆಯಿಂದ ರಕ್ಷಣಾ ಪಡೆಗಳಿಗೆ ಸಂಬಂಧಿತ ವಿಚಾರ ಹೊರಗಿಡಬೇಕೆಂದು ಮನವಿ ಮಾಡಿತ್ತು. ಆದರೆ ಅದು ನಿರೀಕ್ಷಿತ ಫಲ ನೀಡಿಲ್ಲ. ಹೀಗಾಗಿ, ಈ ಅಂಶಗಳನ್ನೆಲ್ಲ ತಡೆಯಲು ಕಾಲಕಾಲಕ್ಕೆ ಕಾನೂನಿನಲ್ಲಿ ಬದಲಾವಣೆಯ ಜತೆಗೆ, ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಅದಕ್ಕೆ ಜತೆಯಾಗಿ ಮತದಾರರು ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕು.