ಚಿತ್ರದುರ್ಗ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಲ ಸೌಲಭ್ಯ ನೀಡಲು ನಿರಾಕರಿಸುವ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ರಾಷ್ಟ್ರೀಯ ಎಸ್‌ಸಿ-ಎಸ್‌ಟಿ ಆಯೋಗದಲ್ಲಿ ದೂರು ದಾಖಲಿಸಲಾಗುತ್ತದೆ ಎಂದು ಸಂಸದ ಬಿ.ಎನ್. ಚಂದ್ರಪ್ಪ ಎಚ್ಚರಿಸಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬ್ಯಾಂಕರ್ಸ್ ಸಭೆ ನಡೆಸಿ ಅವರು ಮಾತನಾಡಿದರು. ಸರ್ಕಾರ ಜನರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಬ್ಯಾಂಕ್‌ಗಳ ಮೂಲಕ ಸಾಲ ನೀಡುತ್ತಿದೆ. ಆದರೆ ಅನೇಕ ಬ್ಯಾಂಕ್‌ಗಳ
ವ್ಯವಸ್ಥಾಪಕರು ಜನರನ್ನು ಅಲೆದಾಡಿಸುವುದು ಮತ್ತು ವಿನಾಕಾರಣ ಸಾಲ ನೀಡಲು ನಿರಾಕರಿಸುತ್ತಾರೆ ಎಂಬ ಆರೋಪ ವ್ಯಾಪಕವಾಗಿದೆ. ಆದರೆ ಸರ್ಕಾರ ರೂಪಿಸುವ ಯೋಜನೆಗಳಿಗೆ ಬ್ಯಾಂಕ್‌ಗಳಿಗೆ ನೀಡಿದ ಗುರಿ ಅನ್ವಯ ಸಾಲ ನೀಡಲೇಬೇಕು ಎಂದು ತಾಕೀತು ಮಾಡಿದರು.
ಕೆಲವು ಬ್ಯಾಂಕ್‌ಗಳು ಸಾಲದ ಮೊತ್ತದ ಬದಲಾಗಿ ಸಬ್ಸಿಡಿಯನ್ನಷ್ಟೇ ಸಾಲವಾಗಿ ನೀಡುವುದು ಸರಿಯಲ್ಲ. ಜಿಲ್ಲೆಯಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಹೆಚ್ಚಿನ ಶಾಖೆಗಳನ್ನು ಹೊಂದಿದ್ದು ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಯೋಜನೆಗಳನ್ನು ಕಲ್ಪಿಸುತ್ತಿದೆ. ಆದರೆ ಎಸ್ ಬಿಐ, ಕರ್ನಾಟಕ ಬ್ಯಾಂಕ್‌ಗಳು ಫಲಾನುಭವಿಗಳಿಗೆ ಸರಿಯಾಗಿ ಸ್ಪಂದಿಸದೇ ಇರುವುದು ಗಮನಕ್ಕೆ ಬಂದಿದೆ. ಕಳೆದ ವರ್ಷದ ಗುರಿ ಅನ್ವಯ ಜುಲೈ ಅಂತ್ಯದೊಳಗಾಗಿ ಎಲ್ಲಾ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಬೇಕೆಂದು ಸೂಚಿಸಿದರು.
ಸಮಿತಿಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರೂ ಫಲಾನುಭವಿಗಳು ಕೈಗೊಳ್ಳುವ ಚಟುವಟಿಕೆ ಲಾಭದಾಯಕವಲ್ಲ ಎಂದು ಸಬೂಬು ಹೇಳುವ ಬ್ಯಾಂಕ್‌ನವರೂ ಇದ್ದಾರೆ ಎಂದು ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ಸಭೆಯ ಗಮನಕ್ಕೆ ತಂದರು. ಬಟ್ಟೆ ವ್ಯಾಪಾರ ಎಂದು ಸಾಲ ಪಡೆದು ಇದಕ್ಕೆ ಕೊಡುವ ಡಿಡಿಯನ್ನು ಅಂತಹ ಸಂಸ್ಥೆಗೆ ನೀಡಿ ನಗದೀಕರಿಸಿಕೊಳ್ಳುತ್ತಾರೆ. ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತಾರೆಯೋ ಆ ಚಟುವಟಿಕೆ ಕೈಗೊಳ್ಳುವುದಿಲ್ಲ. ಸಾಲಕ್ಕಾಗಿ ಮಾತ್ರ ಚಟುವಟಿಕೆ ಎಂಬಂತಾಗಿದೆ ಎಂದು ಕರ್ನಾಟಕ ಬ್ಯಾಂಕ್ ಶಾಖಾ
ವ್ಯವಸ್ಥಾಪಕರು ದೂರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದರು, ಫಲಾನುಭವಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿರುತ್ತದೆ. ಅವರ ಚಟುವಟಿಕೆ ಲಾಭದಾಯಕವಲ್ಲ ಎಂದು ಹೇಳುವುದು ಬ್ಯಾಂಕ್ ಪರಿಮಿತಿಗೆ ಬರುವುದಿಲ್ಲ, ಇಂತಹ ಧೋರಣೆ ಸರಿ ಎನ್ನಿಸದು. ಈ ಲೋಪ ಸರಿಪಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ತಮ್ಮ ಘನತೆಗೆ ತಕ್ಕಂತೆ ಹಾಗೂ ಸಭೆಯ ಗೌರವ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಅವರ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಲು ಮತ್ತು ಈ ಬ್ಯಾಂಕ್‌ನಲ್ಲಿ ಸರ್ಕಾರಿ ಠೇವಣಿ ಇಟ್ಟಿದ್ದನ್ನು ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಸೂಚನೆ ನೀಡಿದರು.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ವಲಯ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಈ ಹಿಂದೆ ಮುದ್ರಾ ಯೋಜನೆಯಡಿ ಕೈಗಾರಿಕೆಗೆ ಭದ್ರತೆ ಇಲ್ಲದೆ ಸಾಲ ನೀಡಬೇಕೆಂದು ನಿಯಮವಿತ್ತು. ಈಗ ಕೃಷಿಯೇತರ ಚಟುವಟಿಕೆಗಳಿಗೂ ಸಾಲದ ಭದ್ರತೆ ಇಲ್ಲದೆ ನೀಡಬೇಕೆಂದು ಹೊಸ ಮಾರ್ಗಸೂಚಿ ಬಂದಿದೆ. ಇದಕ್ಕೆ ಕೇಂದ್ರ ಸರ್ಕಾರ ಬ್ಯಾಂಕ್‌ಗಳಿಗೆ ಶೇ. 60 ರಷ್ಟು ಸಾಲದ ಭದ್ರತೆ ನೀಡುತ್ತದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸಿಇಒ ಪಿ.ಎನ್. ರವೀಂದ್ರ ಇದ್ದರು.