Advertisement

ಶರಣು-ಶರಣಾರ್ಥಿ ಬಳಸಲು ನಿರ್ಣಯ

12:50 PM Jan 09, 2017 | |

ಕಲಬುರಗಿ: ಲಿಂಗಾಯಿತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಿರಂತರ ಹೋರಾಟ, ಲಿಂಗಾಯಿತರು ಶರಣು-ಶರಣಾರ್ಥಿ ಬಳಸುವುದು ಸೇರಿದಂತೆ ಇತರ ನಿರ್ಣಯಗಳನ್ನು ಮೂರು ದಿನಗಳ ಕಾಲ ಅನುಭವ ಮಂಟಪದಲ್ಲಿ ವಿಶ್ವ ಲಿಂಗಾಯತ ಮಹಾಸಭಾ ಮತ್ತು ಕಲಬುರಗಿ ಬಸವ ಸಮಿತಿಯ ಡಾ| ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ನಡೆದ 6ನೇ ಶರಣ ಸಂಗಮ-2017 ಸಮಾರೋಪ ಸಮಾರಂಭದಲ್ಲಿ ಕೈಗೊಳ್ಳಲಾಯಿತು. 

Advertisement

ಲಿಂಗಾಯಿತರು ಕಡ್ಡಾಯವಾಗಿ ವೈಜ್ಞಾನಿಕವಾಗಿ ಧರ್ಮ ಪಾಲನೆ ಮಾಡುವುದು, ವಿಶ್ವದಾದ್ಯಂತ ಜಾಗೃತಿ ಕಾರ್ಯಕ್ರಮ ಕೈಗೊಳ್ಳುವ ಕುರಿತು ಲಿಂಗಾಯಿತ ಮಹಾಸಭಾದ ಮುಖಂಡರು, ಪದಾಧಿಕಾರಿಗಳ ಹಾಗೂ ಸಮಾಜದ ಧುರೀಣರ ಸಮ್ಮುಖದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. 

ಮಾಜಿ ಸಚಿವ ಎಸ್‌.ಕೆ.ಕಾಂತಾ ಅವರು ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿ, ವೈದಿಕ ಧರ್ಮದ ವಿರುದ್ಧ ಹೋರಾಟ ಮಾಡಿದ ಬಸವಾದಿ ಶರಣರು ಎಲ್ಲಿಯೂ ಉಪದೇಶ ಮಾಡಲಿಲ್ಲ. ಅವರು ನಡೆದು ತೋರಿದರು. ಯಾರು ಶ್ರಮವಹಿಸಿ ದುಡಿದು ತಿನ್ನುತ್ತಾರೋ ಅವರೇ ನಿಜವಾದ ಲಿಂಗಾಯತರು.

ಕಲ್ಲು ದೇವರಲ್ಲ, ಮಣ್ಣು ದೇವರಲ್ಲ ಎಂದು ಹೇಳಿದ ಕ್ರಾಂತಿಪುರುಷ ಶರಣರನ್ನೇ ಲಿಂಗಾಯತರು ಪೂಜೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಭಾಲ್ಕಿ ಹಿರೇಮಠದ ಡಾ| ಬಸವಲಿಂಗಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಗುರುಮಠಕಲ್‌ನ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. 

ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಅರುಣಕುಮಾರ ಪಾಟೀಲ ಮುಖ್ಯ ಅತಿಥಿಯಾಗಿದ್ದರು. ಡಾ| ಎಸ್‌. ಎಸ್‌. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸುರೇಶ ಸಜ್ಜನ್‌ ನಿರ್ಣಯ ಮಂಡಿಸಿದರು. 

Advertisement

ಪ್ರೊ| ಸಂಜಯ ಮಾಕಲ್‌, ವಿಲಾಸವತಿ ಖೂಬಾ, ಆಶಾದೇವಿ ಖೂಬಾ, ಮಂಜುನಾಥ ಕಾಳೆ, ಪಿ.ಎಸ್‌. ಮಹಾಗಾಂವಕರ್‌, ಚಂದ್ರಶೇಖರ ಪಾಟೀಲ, ಚಂದ್ರಶೇಖರ ಸೀರಿ, ಸತೀಶ ಸಜ್ಜನ್‌, ಪ್ರಸನ್ನ ವಾಂಜರಖೇಡ, ವಿಜಯಕುಮಾರ ತೇಗಲತಿಪ್ಪಿ, ಅಯ್ಯಣ್ಣ ನಂದಿ, ರವಿ ಹಾಗರಗಿ, ಶಾಂತರೆಡ್ಡಿ, ಮಹಾಂತೇಶ ಆವಂಟಿ, ಅಂಬಾರಾಯ ಬಿರಾದಾರ, ಚಂದ್ರಶೇಖರ ತಳ್ಳಳ್ಳಿ ಇದ್ದರು. 

ಧರ್ಮದ ಮಾನ್ಯತೆಗೆ ಬೆಂಬಲ 
ಗೋಷ್ಠಿಯಲ್ಲಿ ಪಾಲ್ಗೊಂಡ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಲಿಂಗಾಯತ ಎನ್ನುವುದು ಒಂದು ಪರಂಪರೆ. ಈ ಪರಂಪರೆಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕಾಗಿರುವುದು ಅಗತ್ಯವಿದೆ. ಆದರೆ ಇದು ದೊಡ್ಡ ಸಾಹಸದ ಕೆಲಸವಾಗಿದ್ದು, ಇದಕ್ಕಾಗಿ ತಮ್ಮ ಬೆಂಬಲವಿದ್ದು, ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಹಿಂದೂ ಪದದ ಬಗ್ಗೆ ಮಾಹಿತಿ ಕೇಳಿದಾಗ, ಹಿಂದೂ ಎನ್ನುವ ಪದ ಇಲ್ಲ ಎಂದು ವಿವರಣೆ ನೀಡಿದ್ದಾರೆ.

ತಮಗೆ ಬೇಕಾದಾಗ ಹಿಂದೂ ಪದವನ್ನು ದೆಹಲಿಗೆ ತೆಗೆದುಕೊಂಡು ಹೋಗುವ ರಾಜಕಾರಣಿಗಳು ದೆಹಲಿಯಿಂದ ಸಾವಿರಾರು ಜಾತಿಗಳನ್ನಾಗಿ ವಿಂಗಡಿಸುವುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ ಎಂದು ಹೇಳಿದರು. ಬಸವಣ್ಣನವರ ಪ್ರಸ್ತುತತೆ ಎಂಬ ವಿಷಯ ಕುರಿತು ಬಸವ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, 

ಪ್ರಧಾನಿ ನರೇಂದ್ರ ಮೋದಿ ಅವರ ಡಿಸಿಟಲ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ, ನೋಟು ನಿಷೇಧ ಈ ಮುಂತಾದ ಅಂಶಗಳ ಬಗ್ಗೆ ಬಸವಣ್ಣ 12ನೇ ಶತಮಾನದಲ್ಲಿಯೇ ಹೇಳಿದ್ದರು. ಹೀಗಾಗಿ ಬಸವಣ್ಣ ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿದ್ದಾರೆ ಎಂದರು. ಶಾಸಕ ಬಿ.ಆರ್‌. ಪಾಟೀಲ, ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ| ವಿಲಾಸವತಿ ಖೂಬಾ, ಡಾ| ಜಗನ್ನಾಥ ಮೀಸೆ, ಅಶೋಕ ಸಾಹು ಗೋಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next