Advertisement

ನಿರಾಶ್ರಿತರ ಕೇಂದ್ರ ಒತ್ತುವರಿಯಾಗಲು ಬಿಡೆನು: ಡಿಸಿಎಂ

12:42 AM Oct 29, 2019 | Lakshmi GovindaRaju |

ಬೆಂಗಳೂರು: ಯಾವುದೇ ಕಾರಣಕ್ಕೂ ನಗರದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರ ಒತ್ತುವರಿಯಾಗಲು ಬಿಡುವುದಿಲ್ಲ. ಇದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಸೋಮವಾರ ಮಾಗಡಿ ರಸ್ತೆಯ ಸುಮ್ಮನಹಳ್ಳಿ ಸಿಗ್ನಲ್‌ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 1946ರಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಕೇಂದ್ರವನ್ನು ಆರಂಭಿಸಿ, 161 ಎಕರೆ ಮೀಸಲಿಟ್ಟಿದ್ದಾರೆ. ಆಸ್ತಿಯನ್ನು ಭೂಗಳ್ಳರು ಒತ್ತುವರಿ ಮಾಡಿಕೊಳ್ಳಲು ಸಂಚು ರೂಪಿಸುತ್ತಿದ್ದು, ಭೂಗಳ್ಳರ ಪಾಲಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಭಿಕ್ಷಾಟನೆ ಸಾಮಾಜಿಕ ಪಿಡುಗಾಗಿದ್ದು, ಭಿಕ್ಷುಕರನ್ನು ಗುರುತಿಸಿ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಊಟ, ವಸತಿ ನೀಡಿ ತರಬೇತಿ ನೀಡಲಾಗುತ್ತಿದೆ. ಬೆಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 150 ಮಹಿಳೆಯರು, 604 ಪುರಷರು ಸೇರಿ 754 ಮಂದಿ ಇದ್ದಾರೆ. ವಿಜಯಪುರ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ 14 ಕೇಂದ್ರಗಳಲ್ಲಿ ಒಟ್ಟಾರೆ 1850 ಜನರಿದ್ದಾರೆ ಎಂದು ತಿಳಿಸಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸರ್ಕಾರಗಳು ಸೆಸ್‌ ಸಂಗ್ರಹಿಸುತ್ತಿದ್ದು, ಸುಮಾರು 164 ಕೋಟಿ ರೂ. ಸೆಸ್‌ ಹಣ ಬಾಕಿ ಉಳಿಸಿಕೊಂಡಿವೆ. ಅದರಲ್ಲಿ ಬಿಬಿಎಂಪಿ 114 ಕೋಟಿ ರೂ. ನೀಡಬೇಕಿದ್ದು, ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದರು.

ಈ ಹಿಂದೆ ಕೂಡಾ ಸಮಾಜ ಕಲ್ಯಾಣ ಸಚಿವನಾಗಿ ಕೆಲಸ ನಿರ್ವಹಿಸಿದ್ದೆ. ಆಗ ಈ ಪರಿಹಾರ ಕೇಂದ್ರವನ್ನು ಅಭಿವೃದ್ಧಿ ಮಾಡಬೇಕೆಂದು ಕನಸಿತ್ತು. ಪ್ರಸ್ತುತ ಈ ಕೇಂದ್ರದಲ್ಲಿ ಬಾಳೆ, ಅಡಕೆ ಸೇರಿ ತರಕಾರಿ ಬೆಳೆಯಲಾಗುತ್ತಿದೆ. ಪ್ರತಿ ವರ್ಷ ನಮ್ಮ ಕುಟುಂಬದ ಜತೆ ಹಬ್ಬ ಆಚರಿಸುತ್ತೇನೆ. ಆದರೆ, ಈ ಬಾರಿ ನಿರಾಶ್ರಿತರ ಜತೆ ಹಬ್ಬ ಆಚರಿಸಲು ದಿಢೀರ್‌ ಭೇಟಿ ನೀಡಿದ್ದೇನೆ ಎಂದರು. ಇದೇ ವೇಳೆ ಕೇಂದ್ರದಲ್ಲಿರುವ ಅನ್ನಪೂರ್ಣ ಭೋಜನಾಲಯಕ್ಕೆ ಭೇಟಿ ನೀಡಿ ಅನ್ನ, ಸಾರು, ಮಜ್ಜಿಗೆ ಸವಿದರು. ಬಾಳೆ ತೋಟಕ್ಕೆ ಹೋಗಿ ಬೆಳೆಗಳ ಬಗ್ಗೆ ಮಾಹಿತಿ ಪಡೆದರು.

Advertisement

ಡಿಸಿಎಂ ಕೈ ಹಿಡಿದು ಕಣ್ಣೀರಿಟ್ಟ ವೃದ್ಧೆ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಾಲಿನಲ್ಲಿ ಕುಳಿತಿದ್ದ ಪ್ರತಿಯೊಬ್ಬ ನಿರಾಶ್ರಿತರ ಹೆಸರನ್ನು ಕೇಳುತ್ತಿದ್ದರು. ಈ ವೇಳೆ ಕೇಂದ್ರದಲ್ಲಿರುವ ಬೆಳಗಾವಿ ಜಿಲ್ಲೆಯ ಮಮದಾಪುರ ಗ್ರಾಮದ ಪ್ರಭಾವತಿ ಎಂಬ ವೃದ್ಧೆ ಡಿಸಿಎಂ ಕೈ ಹಿಡಿದು ಕಣ್ಣೀರಿಡುತ್ತಾ, ದಯವಿಟ್ಟು ನಮ್ಮ ಊರಿಗೆ ಕಳಿಸಿ, ನಮ್ಮ ಜನರ ಜತೆ ಬದುಕಬೇಕೆಂಬ ಆಸೆ ಇದೆ ಎಂದರು. ಕೂಡಲೇ ನಿರಾಶ್ರಿತರ ಕೇಂದ್ರದ ಅಧಿಕಾರಿಗಳ ಬಳಿ ವೃದ್ಧೆಯ ಮಾಹಿತಿ ಕೇಳಿ ಬೆಳಗಾವಿಯ ಸದಲಗಾ ಪೊಲೀಸ್‌ ಠಾಣೆಗೆ ಕರೆ ಮಾಡಿ ವೃದ್ಧೆಯ ಸಂಬಂಧಿಕರ ಬಗ್ಗೆ ಮಾಹಿತಿ ಪಡೆದರು. ವೃದ್ಧೆಯನ್ನು ಶೀಘ್ರವೇ ಊರಿಗೆ ಬಿಟ್ಟು ಬನ್ನಿ ಎಂದು ಕೇಂದ್ರದ ಸಿಬ್ಬಂದಿಗೆ ಸೂಚನೆ ನೀಡಿದರು.

ನವೆಂಬರ್‌ನಿಂದ ಕೆಲಸ ಮಾಡಿದ ದಿನವೇ 75 ರೂ. ಅವರ ಖಾತೆಗೆ ಜಮಾ: ನಿರಾಶ್ರಿತರ ಕೇಂದ್ರದಲ್ಲಿ ಕೆಲಸ ಮಾಡುವ ನಿರಾಶ್ರಿತರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆಸಿ, ನವೆಂಬರ್‌ನಿಂದ ಕೆಲಸ ಮಾಡಿದ ದಿನವೇ 75 ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಲಾಗುವುದು. ಈ ಸಂಬಂಧ ಸರ್ಕಾರಿ ಆದೇಶ ಕೂಡ ಹೊರಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು. ಕೇಂದ್ರದ ಆವರಣದಲ್ಲಿ ನಿರ್ಮಿಸುತ್ತಿರುವ ಬಾಬು ಜಗಜೀವನರಾಮ್‌ ಸಂಶೋಧನಾ ಮತ್ತು ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಕೂಡಲೇ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡಲ್ಲ ಎಂದು ಯಾವ ವಿಚಾರವಾಗಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಇದೊಂದು ರಾಜಕೀಯದ ಹೇಳಿಕೆ ಅಷ್ಟೇ. ಜೆಡಿಎಸ್‌ ಪಕ್ಷದ ಶಾಸಕರು ಆಚೀಚೆ ಹೋಗುತ್ತಿರುವುದಕ್ಕೆ ರೀತಿ ಹೇಳಿರಬಹುದು.
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next