ವರದಿ: ವಿಕಾಸ್ ಆರ್. ಪಿಟ್ಲಾಲಿ
ಬೆಂಗಳೂರು : ನಗರದ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ, ಮಾರುಕಟ್ಟೆ ಪ್ರದೇಶಗಳು, ಮೇಲ್ಸೇತುವೆಯ ಕೆಳಗೆ ರಾತ್ರಿ ವೇಳೆ ಆಶ್ರಯ ಪಡೆಯುತ್ತಿರುವ ನಿರಾಶ್ರಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 4,246 ಮಂದಿ ನಿರಾಶ್ರಿತರನ್ನು ಪತ್ತೆ ಮಾಡಲಾಗಿದ್ದು, ಆ ನಿರಾಶ್ರಿತರಿಗೆ ಸೂಕ್ತ ರೀತಿಯಲ್ಲಿ ಆಶ್ರಯ ನೀಡುವ ಕೆಲಸ ಇನ್ನೂ ಹಳಿಗೆ ತಲುಪಿಲ್ಲ. ಪರಿಣಾಮ, ಸೂರಿಲ್ಲದೆ ಸಾರ್ವಜನಿಕ ಸ್ಥಳಗಳನ್ನೇ ಆಶ್ರಯ ತಾಣವನ್ನಾಗಿ ಬಳಸಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ನಿರಾಶ್ರಿತರಿಗೆ ಆಶ್ರಯ ಕೇಂದ್ರ(ರಾತ್ರಿ ತಂಗುದಾಣ)ಗಳ ಸವಲತ್ತುಗಳು ಕೈಗೆಟುಕದ ಗಗನಕುಸುಮವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಮುಂದಾಗಿದ್ದೆವು. ಆದರೆ, ಖಾಸಗಿಯವರಿಂದ ಕಟ್ಟಡಗಳು ಬಾಡಿಗೆಗೆ ಸಿಗಲಿಲ್ಲ. ಬಳಿಕ, ಪಾಲಿಕೆಯ ಖಾಲಿ ಕಟ್ಟಡಗಳನ್ನು ಗುರುತಿಸಿ ಮೂಲ ಸೌಕರ್ಯಗಳನ್ನು ಒದಗಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಹಾಗೂ ಸ್ವಯಂಸೇವಾ ಸಂಸ್ಥೆಗಳಿಗೆ ಸೇರಿದ 40 ಖಾಲಿ ಕಟ್ಟಡಗಳನ್ನು ಗುರುತಿಸಲಾಗಿತ್ತು. ಅಲ್ಲೇ ಆಶ್ರಯ ಕೇಂದ್ರಗಳನ್ನು ಪ್ರಾರಂಭಿಸುವ ಕಾರ್ಯ ನಡೆಯುತ್ತಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವೇನು?: ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ ಒಂದು ಲಕ್ಷ ಜನಸಂಖ್ಯೆ ವಾಸಿಸುವ ಪ್ರದೇಶಗಳಲ್ಲಿ 50 ಹಾಸಿಗೆಯ ಒಂದು ನಿರಾಶ್ರಿತರ(ನಿರ್ಗತಿಕ)ಆಶ್ರಯ ಕೇಂದ್ರ ಸ್ಥಾಪಿಸಬೇಕಿದೆ. ಆದರೆ, ಸುಮಾರು 1.30 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಕೇವಲ 10 ನಿರಾಶ್ರಿತರ ಆಶ್ರಯ ಕೇಂದ್ರಗಳಿದ್ದು, ಸುಮಾರು 205 ಮಂದಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಆಶ್ರಯ ಕೇಂದ್ರಗಳ ಸಂಖ್ಯೆ ಹೆಚ್ಚಿಸುವ ಮತ್ತು ಹೆಚ್ಚಿನ ಸಂಖ್ಯೆಯ ನಿರಾಶ್ರಿತರು ಇರುವ ಪ್ರದೇಶದಲ್ಲಿ ಆಶ್ರಯ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಪಾಲಿಕೆ ಈ ಹಿಂದೆ ಸಮೀಕ್ಷೆ ನಡೆಸಿತ್ತು. ಆದರೆ, ಆ ಸಮೀಕ್ಷೆಯ ಯಾವುದೇ ಒಂದು ಅಂಶವೂ ಜಾರಿಗೆ ಬಂದಿಲ್ಲ ಎಂದು ಸ್ವಯಂ ಸೇವಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಶ್ರಿತರಿಗೆ ವೈದ್ಯಕೀಯ ತಪಾಸಣೆ: ಪಾಲಿಕೆ ವ್ಯಾಪ್ತಿಯ ಆರು ವಲಯಗಳಲ್ಲಿನ ವಿವಿಧ ಸ್ಥಳಗಳಲ್ಲಿರುವ 10 ನಗರ ವಸತಿ ನಿರಾಶ್ರಿತರ ಆಶ್ರಯ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಪಾಲಿಕೆಯಿಂದ ಆರೋಗ್ಯ ತಪಾಸಣೆನಡೆಸಲಾಗಿದೆ. ಮೇ 18(2021)ರಂದು ಜಂಬೂಸವಾರಿ ದಿಣ್ಣೆಯ ನಿರಾಶ್ರಿತರ ಕೇಂದ್ರ, ಜೂನ್ 22ರಂದು ಹೂಡಿ, ಜೂನ್ 15ರಂದು ಚೊಕ್ಕಸಂದ್ರ ಹಾಗೂ ದಾಸರಹಳ್ಳಿ ನಿರಾಶ್ರಿತರ ಕೇಂದ್ರ, ಜು.6ರಂದು ಮರ್ಫಿ ಟೌನ್, ಜುಲೈ 1ರಂದು ಉಪ್ಪಾರಪೇಟೆ, ಜೂ.29ರಂದು ರಾಜಾಜಿನಗರ ಮತ್ತು ಗೂಡ್‌ಶೆಡ್ ರಸ್ತೆಯ ಕೇಂದ್ರ-2 ಹಾಗೂ ಜುಲೈ 1ರಂದು ಗೂಡ್ ಶೆಡ್ ರಸ್ತೆಯ ಕೇಂದ್ರ-1ರಲ್ಲಿ ನಿರಾಶ್ರಿತರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಂಟು ಆಶ್ರಯ ಕೇಂದ್ರಗಳು ಸಿದ್ಧ: ನಗರದಲ್ಲಿ ನಿರಾಶ್ರಿತ ಮಹಿಳೆಯರಿಗೆ ಪ್ರತ್ಯೇಕವಾಗಿ 16 ಹಾಗೂ ಎಂಟು ವಲಯದಲ್ಲಿ ನಿರಾಶ್ರಿತರ ಸಂಖ್ಯೆಗೆ ಅನುಗುಣವಾಗಿ 77 ಹೊಸ ಆಶ್ರಯ ಕೇಂದ್ರವನ್ನು ತೆರೆಯುವಂತೆ ಶಿಫಾರಸು ಮಾಡಲಾಗಿತ್ತು. ಪ್ರಸ್ತುತ ಮೂರು ಕೇಂದ್ರ ತೆರಯಲು ಟೆಂಡರ್ ಕರೆಯಲಾಗಿದೆ. ಎರಡು ವರ್ಕ್ ಆರ್ಡರ್ ಕೊಡಬೇಕಿದೆ. ಇನ್ನೊಂದಕ್ಕೆ ಶೀಘ್ರ ಟೆಂಡರ್ ಕರೆದು ಅಂತಿಮಗೊಳಿಸಬೇಕು. ದಾಸರಹಳ್ಳಿ ವಲಯದಲ್ಲಿ ಮೂರು ಕೇಂದ್ರಗಳು ಸಿದ್ಧವಿದೆ. ಪೂರ್ವ ವಲಯದಲ್ಲಿ ಒಂದು, ಮಹದೇವಪುರ ವಲಯದಲ್ಲಿ ಎರಡು, ಆರ್.ಆರ್ .ನಗರದಲ್ಲಿ ಒಂದು, ಬೊಮ್ಮನಹಳ್ಳಿಯಲ್ಲಿ ಒಂದು ಆಶ್ರಯ ಕೇಂದ್ರ ಸಿದ್ಧವಾಗಿದೆ. ಜತೆಗೆ, 25ರಿಂದ 30 ಕೇಂದ್ರಗಳು ಪ್ರಾರಂಭವಾದರೆ ನಗರ ನಿರಾಶ್ರಿತರಿಗೆ ಅನುಕೂಲವಾಗಲಿದೆ ಎಂದು ನಮ್ಮನೆ ಯೋಜನೆ ನಿರ್ದೇಶಕ(ಯುಎಚ್‌ಐ ಯೋಜನೆ) ಡಾ. ರಾಮಚಂದ್ರಪ್ಪ ಮಾಹಿತಿ ನೀಡಿದ್ದಾರೆ.