Advertisement

ಲೋಕಸಭೆ ಚುನಾವಣೆಯಲ್ಲಿ “ಗ್ಯಾರಂಟಿ” ಪ್ರತಿಫ‌ಲನ

11:11 PM Aug 02, 2023 | Team Udayavani |

ಬೆಂಗಳೂರು: ಐದು ಗ್ಯಾರಂಟಿಗಳ ಜಾರಿ ಮೂಲಕ ಕರ್ನಾಟಕ ಮಾದರಿ ಅಭಿವೃದ್ಧಿಯು ಲೋಕಸಭಾ ಚುನಾವಣೆಯಲ್ಲಿ ಪ್ರತಿಫ‌ಲಿಸಲಿದ್ದು, ನಾವು 20-24 ಸ್ಥಾನ ಜಯ ಗಳಿಸುವ ಭರವಸೆ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಎಐಸಿಸಿ ಕಚೇರಿಯಲ್ಲಿ ನಡೆದ ಸತತ ಆರು ಗಂಟೆಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎರಡು ಪ್ರತ್ಯೇಕ ಸಭೆಗಳಲ್ಲಿ ಲೋಕಸಭಾ ಚುನಾವಣೆ ಹಾಗೂ ಐದು ಗ್ಯಾರಂಟಿಗಳ ಯಶಸ್ವಿ ಜಾರಿಯ ಫ‌ಲಿತಾಂಶಗಳ ಬಗ್ಗೆ ಸುದೀರ್ಘ‌ ಚರ್ಚೆ ನಡೆದಿದೆ. ಐದು ಗ್ಯಾರಂಟಿಗಳು ಪ್ರತಿಯೊಬ್ಬ ಫ‌ಲಾನುಭವಿಗೆ ತಲುಪಬೇಕು. ಇದರ ಯಶಸ್ಸು ಲೋಕಸಭಾ ಚುನಾವಣೆಯಲ್ಲಿ ಪ್ರತಿಫ‌ಲಿಸಬೇಕು ಎನ್ನುವ ಸದಾಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ 20-24 ಸ್ಥಾನ ಗೆಲ್ಲುವ ಭರವಸೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಗ್ಯಾರಂಟಿಗಳ ಸಮರ್ಪಕ ಜಾರಿ ಮತ್ತು ಲೋಕಸಭಾ ಚುನಾವಣೆಯ ಹೊಣೆ ವಹಿಸಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಕೆಲವು ಜಿಲ್ಲೆಗಳ ಜವಾಬ್ದಾರಿಯನ್ನೂ ಸಚಿವರಿಗೆ ನೀಡುವ ಕುರಿತು ಚರ್ಚೆ ನಡೆದಿದೆ ಎಂದರು.

ಸುಳ್ಳಾದ ಮೋದಿ ಆರೋಪ
ಗ್ಯಾರಂಟಿ ಯೋಜನೆಗಳ ಜಾರಿಯಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಪ್ರಧಾನಿ ಮೋದಿ ಅವರ ಆರೋಪ ಪೂರ್ತಿ ಸುಳ್ಳಾಗಿದೆ. ನಾವು ಬಜೆಟ್‌ನಲ್ಲಿ ಐದು ಗ್ಯಾರಂಟಿಗಳಿಗೆ ಹಣ ಒದಗಿಸುವ ಜತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 76 ಭರವಸೆಗಳಿಗೂ ಹಣ ನೀಡಿದ್ದೇವೆ. ಇವೆಲ್ಲವೂ ಎಲಾ ಜಾತಿ, ಧರ್ಮ, ವರ್ಗದವರ ಬದುಕಿಗೂ ಸ್ಪಂದಿಸುವ ಯೋಜನೆಗಳಾಗಿವೆ. ಪ್ರತೀ ದಿನ ಒಂದೂವರೆ ಕೋಟಿಗೂ ಅಧಿಕ ಮಂದಿ ನಮ್ಮ ಸರಕಾರದ ಯೋಜನೆಗಳ ಫ‌ಲಾನುಭವಿಗಳಾಗಿದ್ಧಾರೆ. ದೇಶದ ಆರ್ಥಿಕತೆಯನ್ನು ಹಾಳುಗೆಡವಿದ ಪ್ರಧಾನಿ ಮೋದಿ ಅವರು ಕರ್ನಾಟಕ ಮಾದರಿ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳಲಿ. ದೇಶವನ್ನು ಸರಿ ದಾರಿಯಲ್ಲಿ ಮುನ್ನಡೆಸಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಆರ್ಥಿಕತೆ ಬಗ್ಗೆ ಕಾಳಜಿ ತೋರಿರುವ ಪ್ರಧಾನಿ ಮೋದಿ ಅವರು, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದಾದರೆ ಅವರು ಮತ್ತು ಅವರ ಪಕ್ಷದ ನಿಲುವನ್ನು ಸ್ಪಷ್ಟಪಡಿಸಲಿ. ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕವಾಗಿ ವಿರೋಧಿಸುವಂತೆ ಕರೆ ನೀಡಲಿ. ಇದೇ ವಿಚಾರ ಇಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ. ನೀವು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದರು.

Advertisement

ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಕೂಡಲೇ ಜಾರಿ ಮಾಡುವಂತೆ ರಾಜ್ಯ ಬಿಜೆಪಿ ನಾಯಕರು ಬೆನ್ನು ಹತ್ತಿದ್ದಾರೆ. ಬಡವರಿಗೆ ನೀಡುವ ಅಕ್ಕಿಯಲ್ಲಿ ಒಂದು ಕಾಳು ಕಡಿಮೆಯಾದರೂ ಹೋರಾಟ ಮಾಡುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಗುಡುಗುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದರು.
ಬೆಲೆ ಏರಿಕೆ ಮತ್ತು ನಿರುದ್ಯೋಗಗಳಿಂದಾಗಿ ವಿಪರೀತ ಆರ್ಥಿಕ ಒತ್ತಡಕ್ಕೆ ಸಿಕ್ಕಿ ಕೈಖಾಲಿ ಮಾಡಿಕೊಂಡಿರುವ ಜನಸಾಮಾನ್ಯರನ್ನು ಅರ್ಥಿಕ ಹೊರೆಯಿಂದ ಪಾರು ಮಾಡಲು, ಸಾಲದ ಶೂಲದಿಂದ ಕೆಳಗಿಳಿಸಲು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಇಡೀ ದೇಶಕ್ಕೆ ಕರ್ನಾಟಕ ಮಾದರಿಯ ಆಡಳಿತದ ಆವಶ್ಯಕತೆ ಇದೆ ಎಂದರು.

ರಾಹುಲ್‌ ಗಾಂಧಿ ಮೆಚ್ಚುಗೆ

ಕರ್ನಾಟಕ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಲೋಕಸಭೆ ಚುನಾವಣೆಗೆ ಇದೇ ಮಾದರಿಯಲ್ಲಿ ದೇಶದ ಜನರಿಗೆ ಅನುಕೂಲ ಆಗುವ ಪರಿಣಾಮಕಾರಿ ಕಾರ್ಯಕ್ರಮ ಕೊಡಬೇಕೆಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

ಸರಕಾರ ರಚನೆಯಾಗಿ ಎರಡೇ ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾಗಿರುವುದು, ಪ್ರತಿ ದಿನ ಈ ಯೋಜನೆಗಳ ಲಾಭವು ಕರ್ನಾಟಕದ ಮಧ್ಯಮವರ್ಗ ಹಾಗೂ ಬಡಜನರಿಗೆ ತಲುಪುತ್ತಿದೆ. ಈ ಕಾರ್ಯಕ್ರಮಗಳ ಪ್ರಯೋಜನವನ್ನು ಪ್ರತಿಯೊಬ್ಬ ಫ‌ಲಾನುಭವಿಗೂ ತಲುಪಿಸಲು ಮಾನವ ಸಂಪನ್ಮೂಲ ಹಾಗೂ ಆಡಳಿತ ಯಂತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಾಲದ ಹೊರೆ ಬೀಳದಂತೆ ಇರುವ ಅವಕಾಶದಲ್ಲೇ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವ ಮೂಲಕ ದೇಶಕ್ಕೇ ಕರ್ನಾಟಕವು ಒಂದು ಮಾದರಿ ಆರ್ಥಿಕತೆಯನ್ನು ರೂಪಿಸಿಕೊಟ್ಟಿದೆ. ಬೇರೆ ಬೇರೆ ರಾಜ್ಯ ಸರಕಾರಗಳು ಕರ್ನಾಟಕದ ಕಡೆಗೆ ನೋಡುತ್ತಿವೆ. ಐದು ಗ್ಯಾರಂಟಿಗಳು ದೇಶದ ಆರ್ಥಿಕ ನೀತಿಯ ಗೇಮ್‌ ಚೇಂಜರ್‌ ಆಗುತ್ತವೆ. ಈ ಗ್ಯಾರಂಟಿ ಯೋಜನೆಗಳ ಯಶಸ್ಸು ಬರಲಿರುವ ಲೋಕಸಭಾ ಚುನಾವಣೆಗೆ ಭದ್ರ ಬುನಾದಿ ಆಗಬೇಕು. 22 ರಿಂದ 24 ಸ್ಥಾನಗಳಲ್ಲಿ ಗೆಲ್ಲುವ ಅವಕಾಶಗಳಿವೆ. ಕರ್ನಾಟಕದಲ್ಲಿ ನಡೆದ ಐಎನ್‌ಡಿಐಎ (ವಿಪಕ್ಷಗಳ ಸಭೆ) ಅತ್ಯಂತ ಯಶಸ್ವಿಯಾಗಿದೆ. ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಆರಂಭವಾಗಿದೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next