ಬೆಂಗಳೂರು: ರಾಜ್ಯಾದ್ಯಂತ ಸಂಚಲನಕ್ಕೆ ಎಡೆಮಾಡಿಕೊಟ್ಟಿದ್ದ ಚಂದ್ರು ಕೊಲೆ ಪ್ರಕರಣದ ತನಿಖೆ ಮುಕ್ತಾಯಗೊಳಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ(ಚಾರ್ಜ್‌ಶೀಟ್) ಸಲ್ಲಿಸಿದ್ದು ತನಿಖೆ ವೇಳೆ ಆರೋಪಿ ಶಾಹಿದ್ ಪಾಷಾ “ಕನ್ನಡ ಬರುವುದಿಲ್ಲ, ಉರ್ದುವಿನಲ್ಲಿ ಹೇಳು’ ಎಂದು ಚಂದ್ರುವಿಗೆ ಜೋರು ಧ್ವನಿಯಲ್ಲಿ ಹೇಳಿರುವ ಅಂಶ ಉಲ್ಲೇಖೀಸಲಾಗಿದೆ.
ಆದರೆ, ಈ ಹಿಂದಿನ ಕಮೀಷನರ್ ಕಮಲ್ ಪಂತ್ ಅವರು “ಕನ್ನಡ ಬರುವುದಿಲ್ಲ’ ಎಂಬ ಮಾತು ಘಟನೆಗೆ ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಜೈ ಭೀಮ್ ನಗರದ ನಿವಾಸಿಗಳಾದ ಚಂದ್ರು ಹಾಗೂ ಸೈಮನ್ ರಾಜ್ ಸ್ನೇಹಿತರಾಗಿದ್ದು, ಏ.4ರಂದು ರಾತ್ರಿ 12.30ಕ್ಕೆ ಸೈಮನ್ ರಾಜ್ ತನ್ನ ಹುಟ್ಟುಹಬ್ಬದ ಅಂಗವಾಗಿ ಚಂದ್ರುವಿಗೆ ಚಿಕನ್ ರೋಲ್ ಕೊಡಿಸಲು ಸ್ಕೂಟರ್‌ನಲ್ಲಿ ತಡರಾತ್ರಿ 2.15ಕ್ಕೆ ಹಳೆಗುಡ್ಡದಹಳ್ಳಿ 9ನೇ ಮುಖ್ಯರಸ್ತೆಗೆ ಹೋಗಿದ್ದರು. ಅಲ್ಲಿ ಚಿಕನ್ ರೋಲ್ ಅಂಗಡಿ ಮುಚ್ಚಿದ್ದರಿಂದ 200 ಮೀಟರ್ ದೂರದಲ್ಲಿದ್ದ ಬೇಕರಿ ಬಳಿ ಸ್ಕೂಟರ್ ನಿಲುಗಡೆ ಮಾಡಿದ್ದರು.
ಆ ವೇಳೆ ಅದೇ ರಸ್ತೆ ಯಲ್ಲಿ ನಡೆದುಕೊಂಡು ಹೋಗುತ್ತಿದ್ದ 1ನೇ ಆರೋಪಿ ಶಾಹಿದ್ ಪಾಷಾ, “ನನಗೆ ಏಕೆ ಬೈಯುತ್ತೀಯಾ’ ಎಂದು ಹೇಳಿ ಸೈಮನ್ ರಾಜ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಿನ್ನನ್ನು ಬೈದಿಲ್ಲ ಹೋಗು ಎಂದು ಸೈಮನ್ ರಾಜ್ ಆತನಿಗೆ ಹೇಳಿ ಚಂದ್ರು ಜತೆ ಬೇಕರಿಗೆ ಹೋಗಿದ್ದ. ಇಷ್ಟಾದರೂ ಸುಮ್ಮನಾಗದ ಶಾಹಿದ್, ಸೈಮನ್ ರಾಜ್‌ಗೆ ಬೈಯುತ್ತಲೇಯಿದ್ದ. ಇದರಿಂದ ಆಕ್ರೋಶಗೊಂಡ ಸೈಮನ್ ರಾಜ್, ಬೇಕರಿಯಿಂದ ಹೊರಗೆ ಬಂದು ಶಾಹಿದ್‌ನನ್ನು ತಳ್ಳಿದ್ದಾನೆ. ಆ ವೇಳೆ ಶಾಹಿದ್ ಯಾರನ್ನು ಬೇಕಾದರೂ ಕರೆಯಿರಿ ಎಂದು ಉರ್ದುವಿನಲ್ಲಿ ಹೇಳಿದ್ದ. ಆಗ ಸೈಮನ್ ರಾಜ್ ಸಹ ನೀನು ಕೂಡ ಯಾರನ್ನು ಬೇಕಾದರೂ ಕರಿ ಎಂದು ಹೇಳಿದ್ದ. ಆ ವೇಳೆ ಆರೋಪಿಯು “ಕನ್ನಡ ನಹಿ ಆತಾ, ಉರ್ದು ಮೆ ಬೋಲೊ’ ಎಂದು ಹೇಳಿ ಜಗಳಕ್ಕೆ ಬಂದಿದ್ದ. ಚಂದ್ರು ಆರೋಪಿಯನ್ನು ತಡೆಯಲು ಪ್ರಯತ್ನಿಸಿದಾಗ, ಶಾಹಿದ್ ತನ್ನ ಬಳಿಯಿದ್ದ ಚಾಕು ತೆಗೆದು ಹಲ್ಲೆಗೆ ಮುಂದಾಗಿದ್ದ. ಆ ವೇಳೆ ಸೈಮನ್ ರಾಜ್ ಆತನ ಕೈಗಳನ್ನು ಹಿಡಿದುಕೊಂಡಿದ್ದ. ಶಾಹಿದ್ ಇತರ ಆರೋಪಿಗಳನ್ನು ಕೂಗಿ ಕರೆದಿದ್ದ. ಇತರ ಆರೋಪಿಗಳು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಶಾಹಿದ್ ತನ್ನ ಬಳಿಯಿದ್ದ ಚಾಕುವಿನಿಂದ ಚಂದ್ರು ಬಲ ತೊಡೆಗೆ ಚುಚ್ಚಿದ್ದ. 2ನೇ ಆರೋಪಿ ಶಾಹಿದ್ ಪಾಷಾ ಸೈಮನ್ ರಾಜ್ ಮೇಲೆ ಲಾಂಗ್ ಬೀಸಿ ಕೊಲೆಗೆ ಯತ್ನಿಸಿದ್ದ. ನಂತರ ಆರೋಪಿಗಳು ಕೃತ್ಯ ನಡೆದ ಸ್ಥಳದಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ದ ಬಳಿ ಇರುವ ಲಾಡ್ಜ್ನಲ್ಲಿ ರೂಂ ಮಾಡಿಕೊಂಡಿದ್ದರು. ಚಂದ್ರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಸಿಐಡಿ ಉಲ್ಲೇಖೀಸಿದೆ.
ಇದನ್ನೂ ಓದಿ: ಮಂಗಳೂರು: ಎಂಟು ತಿಂಗಳ ಹೆಣ್ಣುಮಗುವನ್ನು ರಕ್ಷಿಸಿದ ಚೈಲ್ಡ್ ಲೈನ್ ತಂಡ
ಶಾಹಿದ್ ಪಾಷಾ (21), ಶಾಹಿದ್ ಪಾಷಾ (24), ಮೊಹಮದ್ ನಬಿಲ್ (20) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ವಿರುದ್ಧ ಸಿಐಡಿ ನ್ಯಾಯಾಲಯಕ್ಕೆ 171 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 49 ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ.
ಬಿಜೆಪಿ ನಾಯಕರು–ಕಮಲ್ ಪಂತ್ ಮಧ್ಯೆ ವಾಗ್ವಾದ ನಡೆದಿತ್ತು
ಚಂದ್ರು ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ಹಾಗೂ ಅಂದಿನ ಪೊಲೀಸ್ ಕಮೀಷನರ್ ಕಮಲ್ ಪಂತ್ ನಡುವೆ ಭಾಷೆ ವಿಚಾರವಾಗಿ ಜಟಾಪಟಿ ನಡೆದಿತ್ತು. “ಕನ್ನಡ ಬರುವುದಿಲ್ಲ, ಉರ್ದುವಿನಲ್ಲಿ ಹೇಳು’ ಎಂದು ಆರೋಪಿಗಳು ಬೆದರಿಸಿದ್ದರು. ಇದೇ ವಿಷಯಕ್ಕೆ ಕೊಲೆ ನಡೆದಿದೆ ಎಂಬ ಅರ್ಥದಲ್ಲಿ ಬಿಜೆಪಿ ನಾಯಕರು ಪ್ರತಿಪಾದಿಸಿದ್ದರು. ಆದರೆ, ಇನ್ನು ತಳ್ಳಿ ಹಾಕಿದ್ದ ಕಮಲ್ ಪಂತ್ ಅವರು, ಭಾಷೆ ವಿಚಾರಕ್ಕೆ ಕೊಲೆ ನಡೆದಿಲ್ಲ. ಬೈಕ್‌ಗಳು ತಾಗಿದ್ದರಿಂದ ಘರ್ಷಣೆ ಉಂಟಾಗಿ ಕೊಲೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಕೋರ್ಟ್‌ಗೆ 171 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಅದರಲ್ಲಿ ಕೊಲೆ ಸಂದರ್ಭದಲ್ಲಿ ಆರೋಪಿಯೋರ್ವ “ಕನ್ನಡ ಬರುವುದಿಲ್ಲ, ಉರ್ದುವಿನಲ್ಲಿ ಹೇಳು’ ಎಂದು ಬೆದರಿಸಿದ್ದಾರೆ ಎಂಬುದಾಗಿ ಉಲ್ಲೇಖೀಸಲಾಗಿದೆ.