Advertisement

ಆಧುನಿಕ ಕಲೆ ವೇದಗಳಲ್ಲಿ ಉಲ್ಲೇಖ

06:35 AM Mar 10, 2019 | Team Udayavani |

ಆಳಂದ: ಯಾವ ಕಲೆಗಳನ್ನು ಅತ್ಯಾಧುನಿಕವೆಂದು ಕರೆಯುತ್ತೇವೆಯೋ ಅವರೆಲ್ಲವನ್ನೂ ಪುರಾಣ ಹಾಗೂ ವೇದಗಳಲ್ಲಿ ಹೇಳಲಾಗಿದೆ ಎಂದು ನವದೆಹಲಿ ಇಂದಿರಾಗಾಂಧಿ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಕಲಾ ಕೇಂದ್ರದ ಕಾರ್ಯದರ್ಶಿ ಪ್ರೊ| ಸಚ್ಚಿದಾನಂದ ಜೋಶಿ ಹೇಳಿದರು.

Advertisement

ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಾನವ ಸಂಪನ್ಮೂಲ ಇಲಾಖೆ ಪ್ರಾಯೋಜಿತ ಹೊಸ ಭಾರತದ ಸಂಸ್ಕೃತಿಯಲ್ಲಿ ಕಲೆ ಪ್ರಭಾವ ಮತ್ತು ಅದರ ಜವಾಬ್ದಾರಿ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಭಾರತ ಸಂಸ್ಕೃತಿ, ಕಲೆ ತವರೂರಾಗಿದೆ. ನಮ್ಮ ಪುರಾಣ, ವೇದಗಳಲ್ಲಿ 64 ಕಲೆಗಳ ಬಗ್ಗೆ ನಮೂದಿಸಲಾಗಿದೆ ಎಂದರು.

ನಾವು ಕಲೆ ಬಗ್ಗೆ ಸಂಕುಚಿತ ಕಲ್ಪನೆ ಹೊಂದಿದ್ದೇವೆ. ಕಲೆ ಎಂದರೆ ಕೇವಲ ನೃತ್ಯ, ಸಂಗೀತ, ಚಿತ್ರಕಲೆ ಅಲ್ಲ. ಕಲೆ ಎನ್ನುವುದು ಜೀವನದ ಒಂದು ಅಂಗ. ನಾವು ಮಾಡುವ ಪ್ರತಿಯೊಂದು ಕ್ರಿಯೆಯಲ್ಲಿ ಕಲೆ ಅಡಗಿದೆ. ನಾವು ಮನೆಯಲ್ಲಿ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳುತ್ತೇವೆ, ಅಡುಗೆ ಮನೆಯನ್ನು
ಹೇಗೆ ಹೊಂದಿಸಿಕೊಳ್ಳುತ್ತೇವೆ, ಎಂತಹ ಉಡುಗೆ-ತೊಡುಗೆ ಬಳಸುತ್ತೇವೆ ಎನ್ನುವುದೆಲ್ಲವೂ ಕಲೆಯೇ ಎಂದು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕಲಾವಿದ ಇದ್ದಾನೆ. ಅದನ್ನು ಹೊರತಂದಾಗ ಜೀವನ ಸುಂದರವಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರ ನಿರ್ಮಾಣವೂ ಒಂದು ಕಲೆ. ಪಕ್ಷಿಯ ಸುಮಧುರ ಹಾಡು, ಸುಂದರವಾದ ಹೂಗಳು, ಜಲಪಾತಗಳ ನರ್ತನ, ಹಸಿರಿನ ಸೊಬಗು. ಇದೊಂದು ದೇವರ ಸುಂದರ ಕಲೆಯಿಂದ ನಿರ್ಮಾಣವಾದ ವಸ್ತು. ಇದನ್ನು ಆನಂದಿಸಬೇಕೆ ಹೊರತು, ನಾಶಮಾಡಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಮಾತನಾಡಿ, ಭಾರತ ಸಾಂಸ್ಕೃತಿಕವಾಗಿ  ಮಂತವಾಗಿದ್ದು, ಪಾರಂಪರಿಕ ಮತ್ತು ಸಾಂಸ್ಕೃತಿಕ ಪ್ರವಾಸೊದ್ಯಮಕ್ಕೆ ಅವಕಾಶಗಳಿವೆ. ಅದಕ್ಕಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗುತ್ತಿದೆ ಎಂದರು.

Advertisement

ಕುಲಸಚಿವ ಪ್ರೊ| ಮುಸ್ತಾಕ್‌ ಅಹಮ್ಮದ್‌ ಐ. ಪಟೇಲ್‌ ಸ್ವಾಗತಿಸಿದರು. ಡಾ| ಮಹೇಂದ್ರ ನಿರೂಪಿಸಿದರು, ಡಾ| ಗಣಪತಿ ಸಿನ್ನೂರ್‌ ವಂದಿಸಿದರು. ಸಮ ಕುಲಪತಿ ಪ್ರೊ| ಜಿ.ಆರ್‌. ನಾಯಕ ಹಾಗೂ ವಿಶ್ವವಿದ್ಯಾಲಯ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next