ಬೆಂಗಳೂರು: ಮಾರಕಾಸ್ತ್ರ ಹಿಡಿದು ಅನುಮಾ ನಾಸ್ಪದವಾಗಿ ಓಡಾಡುತ್ತಿದ್ದ ಸುಪಾರಿ ಕಿಲ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಸಂಘಟಿತ ಅಪರಾಧ ದಳ(ಪಶ್ಚಿಮ) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಳಿಮಾವು ನಿವಾಸಿ ಶಶಾಂಕ್(28) ಬಂಧಿತ ಸುಪಾರಿ ಕಿಲ್ಲರ್.
ಕೆಲ ದಿನಗಳ ಹಿಂದೆ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯ ಕೆರೆ ಬಳಿ ಮಾರಕಾಸ್ತ್ರ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಅಲ್ಲದೆ, ಇದೇ ಫೋಟೋವನ್ನು “ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಸಾರ್ವಜನಿಕರಲ್ಲಿ ಭಯ ಸೃಷ್ಟಿಸಲು ಮುಂದಾಗಿದ್ದ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ಆರೋಪಿ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಈತನ ವಿರುದ್ಧ ಈ ಹಿಂದೆ ಹುಳಿಮಾವು ಮತ್ತು ಬನ್ನೇರುಘಟ್ಟ ಠಾಣೆಯಲ್ಲಿ ಕೊಲೆ ಪ್ರಕರಣ, ಅತ್ತಿಬೆಲೆ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಅಪ್ರಾಪ್ತ ವಯಸ್ಸಿನಲ್ಲೇ ಕೊಲೆ ಆರೋಪಿ: ಶಶಾಂಕ್ ಅಪ್ರಾಪ್ತನಿದ್ದಾಗಲೇ ಯುವಕನೊಬ್ಬನ ಕೊಲೆ ಪ್ರಕರಣದಲ್ಲಿ ಬಾಲ ನ್ಯಾಯ ಮಂಡಳಿ ಸೇರಿದ್ದ. ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ಹಿಂದೆ ಕ್ರಿಕೆಟ್ ಆಟುವಾಗ ಎದುರಾಳಿ ತಂಡದ ಜತೆ ಗಲಾಟೆ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕೆಲ ಯುವಕರ ಜತೆ ಸೇರಿ ಕ್ರಿಕೆಟ್ ಬ್ಯಾಟ್ ಮತ್ತು ಮಾರಕಾಸ್ತ್ರದಿಂದ ಬೇಬಿ ಎಂಬ ಯುವಕನನ್ನು ಕೊಲೆಗೈದು ಜೈಲು ಸೇರಿದ್ದ. ಈ ವೇಳೆ ಜೈಲಿನಲ್ಲೇ ಕೆಲ ರೌಡಿಗಳನ್ನು ಪರಿಚಯಿಸಿಕೊಂಡ ಶಶಾಂಕ್, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾನೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಸುಫಾರಿ: 2019ರಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸತೀಶ್ ರೆಡ್ಡಿ ಎಂಬವರನ್ನು ಸುಪಾರಿ ಪಡೆದು ಕೊಲೆಗೈದಿದ್ದ. ಸತೀಶ್‌ರೆಡ್ಡಿ ಹಾಗೂ ಇತರರಿಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಗಳ ನಡೆದಿತ್ತು. ಆಗ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಶಶಾಂಕ್‌ನ ಕೆಲ ಯುವಕರು, ಜೈಲಿನಲ್ಲೇ ಸತೀಶ್ ರೆಡ್ಡಿ ಕೊಲೆಗೆ ಸುಪಾರಿ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಗ ತಾನೇ ಜೈಲಿನಿಂದ ಬಿಡುಗಡೆಯಾಗಿದ್ದ ಶಶಾಂಕ್ ಸತೀಶ್ ರೆಡ್ಡಿ ಕೊಲೆಗೈದಿದ್ದ ಎಂದು ಸಿಸಿಬಿ ಪೊಲೀಸರು ಹೇಳಿದರು.
ಪೊಲೀಸರಿಂದ ಗುಂಟೇಟು: ಅತ್ತಿಬೆಲೆ ಠಾಣೆ ವ್ಯಾಪ್ತಿಯಲ್ಲಿ ಟೆಕಿಯೊಬ್ಬರನ್ನು ಅಪಹರಿಸಿದ್ದ ಪ್ರಕರಣದಲ್ಲಿ ಶಶಾಂಕ್‌ನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಆಗ ಅವರ ಮೇಲೆಯೇ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಹೀಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು ಎಂದು ಸಿಸಿಬಿ ಪೊಲೀಸರು ಹೇಳಿದರು.