Advertisement

ಇವ್ರೆಲ್ಲಾ ಯಾರ್ ಮಗ

10:04 AM Jan 04, 2020 | Team Udayavani |

“ತನ್ವೀರ್‌, ಇಸ್ತಾಕ್‌ ಪೈಲ್ವಾನ್‌ ಹಾಗೂ ಕುಟ್ಟಿರಾಜು…’

Advertisement

-ಇವರು ಶಿವಾಜಿನಗರದ ಒಂದು ಕಾಲದ ರಿಯಲ್‌ ರೌಡಿಗಳು! ಅರೇ, ಇವರ ಬಗ್ಗೆ ಇಲ್ಲೇಕೆ ಸುದ್ದಿ ಎಂಬ ಸಣ್ಣದ್ದೊಂದು ಪ್ರಶ್ನೆಗೆ ಉತ್ತರ, “ಯಾರ್‌ ಮಗ’ ಚಿತ್ರ. ಹೌದು, ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ರಿಯಲ್‌ ರೌಡಿಗಳು ಬಣ್ಣ ಹಚ್ಚುತ್ತಿದ್ದಾರೆ. ರಿಯಲ್‌ ರೌಡಿಗಳು ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಹೊಸದೇನಲ್ಲ. ಈ ಹಿಂದೆ “ಓಂ’, “ಕರಿಯ’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ರಿಯಲ್‌ ರೌಡಿಗಳು ನಟಿಸಿರುವುದುಂಟು. ಈ ಚಿತ್ರದ ಕಥೆ 1995 ರಿಂದ 2000ರವರೆಗೆ ನಡೆಯುವ ರೌಡಿಸಂ ಕಥೆ ಆಗಿದ್ದರಿಂದ ಸನ್ನಿವೇಶಗಳು ಕೂಡ ನೈಜವಾಗಿಯೇ ಕಾಣಬೇಕೆಂಬ ಕಾರಣಕ್ಕೆ, ಇವರನ್ನು ಒಪ್ಪಿಸಿ ಸಿನಿಮಾದಲ್ಲಿ ನಟಿಸುವಂತೆ ಮಾಡಲಾಗಿದೆ.

ಅಂದಹಾಗೆ, ಚಿತ್ರಕ್ಕೆ ಸುರೇಶ್‌ ರಾಜು ನಿರ್ದೇಶಕರು. ಕಥೆ ಬಗ್ಗೆ ಹೇಳುವ ಅವರು, “ಎಲ್ಲಾ ಇದ್ದವರು ಕೆಟ್ಟ ದಾರಿ ಹಿಡಿಯುತ್ತಾರೆ. ಯಾರ ಮನೆಯಲ್ಲೂ ಕೂಡ ಇಂತಹ ಘಟನೆಗಳು ನಡೆಯಬಾರದು. ಸಿನಿಮಾ ನೋಡುಗರಿಗೆ ಅದು ನಮ್ಮ ಏರಿಯಾದಲ್ಲೇ ನಡೆದ ಘಟನೆ ಎಂಬಂತಹ ಅನುಭವ ಆಗುತ್ತೆ. ಅಂಥದ್ದೊಂದು ಕಥೆ ಚಿತ್ರದಲ್ಲಿದೆ. ಶೇ. 50ರಷ್ಟು ನೈಜ ಘಟನೆಗಳು ಸ್ಫೂರ್ತಿಯಾಗಿವೆ. ಮುಂಬೈ, ಮಂಗಳೂರು, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ಬಹುತೇಕ ಶಿವಾಜಿನಗರದಲ್ಲೂ ಚಿತ್ರೀಕರಿಸುವ ಯೋಚನೆ ಇದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಸುರೇಶ್‌ ರಾಜು.

ಚಿತ್ರಕ್ಕೆ ರಘು ಪಡಕೋಟೆ ಹೀರೋ. ಚಿತ್ರಕ್ಕೆ ಕಥೆ ಕೂಡ ಬರೆದಿದ್ದಾರೆ. ಅವರಿಲ್ಲಿ ಒರಟನಾಗಿ, ಡ್ರಗ್ಸ್‌ ವ್ಯಸನಿಯಾಗಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊನೆಯಲ್ಲಿ ಎಲ್ಲವನ್ನೂ ಬಿಟ್ಟು, ಒಳ್ಳೆಯವನಾಗಿ ಸಮಾಜದ ಕಣ್ಣಿಗೆ ಉತ್ತಮ ಪ್ರಜೆ ಎನಿಸಿಕೊಳ್ಳುವ ವ್ಯಕ್ತಿಯಾಗಿ ಬದಲಾಗುವಂತಹ ಪಾತ್ರ ಮಾಡಿದ್ದಾರಂತೆ. ಇನ್ನು, ನಾಯಕ ರಘು ಪಡಕೋಟೆ ಅವರಿಗೆ ವಿದ್ಯಾ ಪ್ರಭು ನಾಯಕಿ. ಮಂಗಳೂರು ಮೂಲದ ವಿದ್ಯಾಪ್ರಭು, ಮಾಡೆಲ್‌ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ನಾಯಕನ ಪ್ರೀತಿಗೆ ಬಿದ್ದಾಗ, ಮುಂದೆ ಆಗುವಂತಹ ಅನಾಹುತದಿಂದ ಹೇಗೆಲ್ಲಾ ಚಡಪಡಿಸುತ್ತಾಳೆ ಎಂಬ ಪಾತ್ರ ನಿರ್ವಹಿಸಲಿದ್ದಾರೆ ವಿದ್ಯಾ ಪ್ರಭು. ಬಲರಾಜ್‌ ವಾಡಿ ಚಿತ್ರದ ನಾಯಕನನ್ನು ಸಾಕುಮಗನಂತೆ ಬೆಳಸಿ, ಅವನನ್ನು ದುರುಪಯೋಗ ಪಡಿಸಿಕೊಳ್ಳುವ ದಾದಾ ಪಾತ್ರ ಮಾಡುತ್ತಿದ್ದಾರೆ. “ಕಾಕ್ರೋಚ್‌’ ಖ್ಯಾತಿಯ ಸುಧೀರ್‌ ಖಳನಟನಾಗಿ ಅಬ್ಬರಿಸಲಿದ್ದಾರೆ. ಗಣೇಶ್‌ ರಾವ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿರಲಿದ್ದು, ಐವರು ಸಂಗೀತ ನಿರ್ದೇಶಕರಿಂದ ಒಂದೊಂದು ಹಾಡನ್ನು ಸಂಯೋಜಿಸಿಕೊಳ್ಳುವ ಯೋಚನೆ ಚಿತ್ರತಂಡಕ್ಕಿದೆ. ಚಿತ್ರಕ್ಕೆ ಬಸವರಾಜ್‌ ಪಡಕೋಟೆ ನಿರ್ಮಾಪಕರು. ರಾಯಚೂರು ಮೂಲದ ಬಸವರಾಜ್‌ ಪಡಕೋಟೆ, ಯೌವ್ವನದಲ್ಲಿದ್ದಾಗ ಅವರು ಹೀರೋ ಆಗಬೇಕು ಅಂತ ಬಯಸಿದ್ದವರು. ಆದರೆ, ಆ ಆಸೆ ಈಡೇರಲಿಲ್ಲ. ಕೊನೆಗೆ ಡಾ.ರಾಜಕುಮಾರ್‌ ಅಭಿಮಾನಿಯಾಗಿದ್ದ ಅವರು, ಬೆಂಗಳೂರಿಗೆ ಬಂದು, ಇಲ್ಲೊಂದು ಕನ್ನಡ ಸಂಘ ಕಟ್ಟಿ ಈಗ ತಮ್ಮ ಪುತ್ರ ರಘು ಪಡಕೋಟೆ ಅವರನ್ನು ಹೀರೋ ಮಾಡುವ ಮೂಲಕ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಾರಾ, ಮಾಲತಿ, ಅಶ್ವಿ‌ನಿಗೌಡ, ಪ್ರಶಾಂತ್‌ ಸಿದ್ದಿ, ಗುರುರಾಜ ಹೊಸಕೋಟೆ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಸಿ.ಎಸ್‌. ಸತೀಶ್‌ ಅವರ ಛಾಯಾಗ್ರಹಣವಿದೆ. ಸುಜೇಂದ್ರ.ಎನ್‌.ಮೂರ್ತಿ ಸಂಕಲನವಿದೆ. ಆರ್‌.ಯಶ್‌ ಯಲ್ಲಾಲಿಂಗ್‌, ಕೆ.ಅಂಕೀತ್‌ಕುಮಾರ್‌ ಮತ್ತು ಗುರುಪ್ರಸಾದ್‌ ಸಂಭಾಷಣೆ ಬರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next