Advertisement

ತಂತ್ರಜ್ಞಾನದಿಂದ ವ್ಯಕ್ತಿಯ ಸಂವೇದನಾಶೀಲತೆ ಕಡಿಮೆ

05:25 PM Dec 17, 2018 | |

ಧಾರವಾಡ: ತಂತ್ರಜ್ಞಾನವು ವ್ಯಕ್ತಿಯ ಸಂವೇದನಾ ಶೀಲತೆಯನ್ನು ಕಡಿಮೆ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಭಾಭವನದಲ್ಲಿ ರವಿವಾರ ಕ್ರಾಂತಿ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಅಕ್ಷರೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ರೋಚಕತೆ ಸೃಷ್ಟಿಸುತ್ತಿದೆ. ತಂತ್ರಜ್ಞಾನ ವ್ಯಕ್ತಿಯ ಜವಾಬ್ದಾರಿ ಕಡಿಮೆ ಮಾಡುತ್ತಿದೆ ಎಂದರು.

Advertisement

ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದ ಮನುಷ್ಯರಲ್ಲಿ ಆವೇಶ ಹೆಚ್ಚಾಗಿ, ಕಾಮ, ಕ್ರೋಧ, ಮದ, ಮತ್ಸರ ಹೆಚ್ಚಿದೆ. ಸಮಾಜದಲ್ಲಿ ಸ್ತ್ರೀತ್ವದ ಬಲ ಕುಂಠಿತಗೊಂಡು, ಪುರುಷತ್ವದ ಮೌಲ್ಯಗಳು ಹೆಚ್ಚುವುದು ದುರಂತದ ಸಂಗತಿ ಎಂದರು. ಹೊಸ ತಲೆಮಾರಿನ ಸಾಹಿತಿಗಳಿಗೆ ತಾವು ಬರೆದ ಸಾಹಿತ್ಯವೇ ಶ್ರೇಷ್ಠ ಎಂಬ ಅಹಂ ಭಾವ ಇರುತ್ತದೆ. ಇದನ್ನು ತೊಡೆದು ಹಾಕಿ ಹಿರಿಯ ತಲೆಮಾರಿನ ಸಾಹಿತಿಗಳ ಮಾರ್ಗದರ್ಶನದಲ್ಲಿ ಸಾಹಿತ್ಯ ಕೃಷಿ ಮಾಡಬೇಕು ಎಂದರು.

ಸೋಮು ರೆಡ್ಡಿ ಅವರ ‘ತಲಾಷ್‌’ ಕೃತಿ ಲೋಕಾರ್ಪಣೆ ಮಾಡಿದ ಸಾಹಿತಿ ಅಮರೇಶ
ನುಗಡೋಣಿ ಮಾತನಾಡಿ, ಕನ್ನಡ ಸಾಹಿತ್ಯ ಓದಿ ಕನ್ನಡ ಸಾಹಿತ್ಯ ಕ್ಷೇತ್ರ  ಮಂತಗೊಳಿಸಿದವರಿಗಿಂತ ಅನ್ಯ ಭಾಷೆಯ ಸಾಹಿತ್ಯ ಓದಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಸಾಹಿತಿಗಳ ಸಂಖ್ಯೆ ಹೆಚ್ಚಾಗಿದೆ. ಕನ್ನಡ ಸಾಹಿತ್ಯದೊಂದಿಗೆ ಅನ್ಯ ಭಾಷೆಗಳ ಸಾಹಿತ್ಯ ಓದಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕೆಂದರು.

ಬರಹಗಾರರು ಸಮಾಜದ ಬದಲಾವಣೆ ಬಗ್ಗೆ ದೂರದೃಷ್ಟಿ ಹೊಂದಿರಬೇಕು. ಎಲ್ಲರ ಮನಸ್ಸಿಗೆ ಮುಟ್ಟುವ ಸಾಹಿತ್ಯ ರಚಿಸಬೇಕು. ಬರಹಗಾರನಿಗೆ ಒಳದೃಷ್ಟಿಕೋನವಿರುವುದು ಅವಶ್ಯ. ತಲಾಷ್‌ ಕೃತಿ ಉತ್ತಮ ಸಂದೇಶ ಹೊಂದಿದ ನಾಟಕ ಕೃತಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ರಾಜು ಗಡ್ಡಿ ಹಾಗೂ ನಾಗರಾಜ ಮುಖಾರಿ ಅವರ ಕೃತಿಗಳ ಅವಲೋಕನ ನಡೆಯಿತು. ಡಾ| ಸಿದ್ದರಾಮ ಕಾರಣಿಕ, ಡಾ| ಬಸು ಬೇವಿನಗಿಡದ ಮಾತನಾಡಿದರು. ಡಾ| ಪ್ರಜ್ಞಾ ಮತ್ತಿಹಳ್ಳಿ ಇದ್ದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಿರಣ ಗಡ, ಉಮೇಶ ಪುರಾಣಿಕಮಠ, ಹೇಮಂತ ದೊಡ್ಡಮನಿ, ಸಿ.ಎಸ್‌.ಪಾಟೀಲ ಕುಲಕರ್ಣಿ, ಅಮೃತ ಇಜಾರಿ, ಮೋಹನ ಕುಲಕರ್ಣಿ, ಶ್ರೀಧರ ಅಸಂಗಿಹಾಳ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next