Advertisement

ಜಿಲೇಬಿಯಲ್ಲಿ ಸಕ್ಕರೆ ಕಡಿಮೆ

11:25 AM Mar 04, 2017 | |

ಒಂದು ಮನೆ, ಆ ಮನೆಯಲ್ಲಿ  ಮೂವರು ಬ್ಯಾಚ್ಯುಲರ್  ಹುಡುಗರು, ಅವರ ಜತೆ ಒಬ್ಬ  ಕಾಲ್‌ಗ‌ರ್ಲ್! ಅವಳ ಹೆಸರು “ಜಿಲೇಬಿ’. ಆ ಜಿಲೇಬಿಯ ರುಚಿ ಸವಿಯಬೇಕೆಂಬುದೇ ಆ ಹುಡುಗರ ಪರಮ ಗುರಿ!! 

Advertisement

– ಇಷ್ಟು ಹೇಳಿದ ಮೇಲೆ ಆ ಮನೆಯಲ್ಲಿ ಏನೆಲ್ಲಾ ನಡೆದು ಹೋಗಿರುತ್ತೆ ಎಂದು ಅರ್ಥವಾಗಿರಲೇಬೇಕು. ಹಾಗಂತ, ಇನ್ನಿಲ್ಲದ ಕಲ್ಪನೆ ಮಾಡಿಕೊಂಡರೆ, ಆ ಊಹೆ ತಪ್ಪು. ಅಲ್ಲಿ ನಿರೀಕ್ಷಿಸದ ಘಟನೆಗಳು ನಡೆದುಹೋಗುತ್ತವೆ. ಆಗಬಾರದ್ದೆಲ್ಲಾ ಆಗಿ ಹೋಗುತ್ತೆ. ಒಂದೇ ಮನೆಯಲ್ಲಿ ಒಂದಷ್ಟು ಪಾತ್ರಗಳ ನಡುವೆ ನಡೆಯೋ ಕಥೆಯಲ್ಲಿ ಹೇಳಿಕೊಳ್ಳುವಂತಹ ಧಮ್‌ ಇರದಿದ್ದರೂ, ಕಥೆಯ ನಡುವೆ ಬರುವ ಸಣ್ಣದ್ದೊಂದು ತಿರುವಿನಲ್ಲಿ ಅಲ್ಲಿರುವ ಪಾತ್ರಗಳು “ಧಮ್‌’ ಕಟ್ಟುವುದಂತೂ ಹೌದು.

ಆರಂಭದಲ್ಲಿ ಸಿಗದ ರೋಚಕತೆ, ದ್ವಿತಿಯಾರ್ಧದಲ್ಲಿ ತಕ್ಕಮಟ್ಟಿಗೆ ಸಿಗುತ್ತಾ ಹೋಗುತ್ತೆ ಎಂಬುದೊಂದೇ ಸಮಾಧಾನ. ಒಂದೇ ಮಾತಲ್ಲಿ ಹೇಳುವುದಾದರೆ, ಮೊದಲರ್ಧ “ಜಿಲೇಬಿ’ ಅಷ್ಟೇನೂ ರುಚಿಸುವುದಿಲ್ಲ. ಇನ್ನೇನು, “ಜಿಲೇಬಿ’ಯಲ್ಲಿ  ಸ್ವೀಟೇ ಇಲ್ಲ ಅಂತಂದುಕೊಳ್ಳುತ್ತಿದ್ದಂತೆಯೇ, ನೋಡುಗರಿಗೊಂದು ಟ್ವಿಸ್ಟ್‌ ಸಿಗುತ್ತದೆ. ಆ ಕುತೂಹಲ ಅರಿಯುವ ತುಡಿತವಿದ್ದರೆ, “ಜಿಲೇಬಿ’ ರುಚಿ ಸವಿದು ಬರಲ್ಲಡ್ಡಿಯಿಲ್ಲ.

ಮೊದಲೇ ಹೇಳಿದಂತೆ, ಇಲ್ಲಿ ಕಥೆ ಹುಡುಕುವಂತಿಲ್ಲ. ಟೈಮ್‌ ಎಕ್ಕುಟ್ಟು ಹೋದಾಗ, ಎಷ್ಟೆಲ್ಲಾ ಗ್ರಹಚಾರಗಳು ಒಕ್ಕರಿಸಿ ಬರುತ್ತವೆ ಅನ್ನುವುದನ್ನೇ ಸ್ವಲ್ಪ ವಿಭಿನ್ನ ಮತ್ತು ಅರ್ಥಪೂರ್ಣವಾಗಿ ಹೇಳುತ್ತಾ ಹೋಗಿದ್ದಾರೆ ನಿರ್ದೇಶಕರು. ಕಥೆಯೇ ಹೇಳದೆ, ಕೇವಲ ಒಂದು ಮನೆಯೊಳಗೆ ಸಸ್ಪೆನ್ಸ್‌ ಹಾಗೂ ಕಾಮಿಡಿ ಅಂಶಗಳನ್ನು ತುಂಬುವ ಮೂಲಕ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅವರು ಹಿಂದೆ ಬಿದ್ದಿಲ್ಲ.

ಸಾಮಾನ್ಯವಾಗಿ ಒಂದೇ ಮನೆ, ಬಂದು ಹೋಗುವ ನಾಲ್ಕೈದು ಪಾತ್ರಗಳ ಮೂಲಕ ಅಲ್ಲಲ್ಲಿ, ಕುತೂಹಲ ಕೆರಳಿಸುತ್ತ ಹೋಗಿರುವುದು ಸಿನಮಾದ ಪ್ಲಸ್‌ ಎನ್ನಬಹುದು. ಚಿತ್ರಕಥೆಯ ವೇಗಕ್ಕೆ ಕ್ಯಾಮೆರಾ ಕಣ್ಣುಗಳು ಸರಿಯಾಗಿ ಕೆಲಸ ನಿರ್ವಹಿಸಿದ್ದರೆ, ಅದೂ ಕೂಡ ಪ್ಲಸ್‌ ಆಗುತ್ತಿತ್ತೇನೋ, ಆದರೆ, ನೋಡುಗರನ್ನು ನಗಿಸಬೇಕೆಂಬ ಉತ್ಸಾಹದಲ್ಲಿ, ಭಯಪಡಿಸಬೇಕೆಂಬ ಆತುರದಲ್ಲಿ ಕ್ಯಾಮೆರಾದ ಬೇಕು, ಬೇಡವೆಂಬ ಕೆಲ ಆಸೆಗಳನ್ನು ಪೂರೈಸದಿರುವುದೇ ಚಿತ್ರದ ಮೈನಸ್‌ಗೆ ಕಾರಣ.

Advertisement

ಆದರೆ, ನಾಲ್ಕು ಪಾತ್ರಗಳ ನಡುವೆ ನಡೆಯೋ, ಘಟನೆಗಳನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿರುವುದನ್ನು ತೆಗಳುವಂತಿಲ್ಲ. ಜಿಲೇಬಿ (ಪೂಜಾ ಗಾಂಧಿ) ಪ್ರೇಮಿಯೊಬ್ಬನನ್ನು ಕಳೆದುಕೊಂಡ ಬಳಿಕ “ವೇಶ್ಯೆ’ ಎಂಬ ಪಟ್ಟ ಕಟ್ಟಿಕೊಳ್ಳುತ್ತಾಳೆ. ಬದುಕಿಗೆ ಆ ಪಟ್ಟವೇ ಆಸರೆಯಾಗುತ್ತೆ. ಜೀವನದಲ್ಲೊಮ್ಮೆ ಎಂಜಾಯ್‌ ಮಾಡಬೇಕು ಅಂತ ನಿರ್ಧರಿಸೋ ಮೂವರು ಬ್ಯಾಚ್ಯುಲರ್ ಹುಡುಗರು (ಯಶಸ್‌ ಸೂರ್ಯ, ನಾಗೇಂದ್ರ, ವಿಜಯ್‌ ಚೆಂಡೂರ್‌) ಪಿಂಕ್‌ ಪಾರ್ಟಿಗೆ ಮೊರೆ ಹೋಗುತ್ತಾರೆ.

ವೇಶ್ಯೆಯರನ್ನು ಹುಡುಕಿ ಹೋಗುವ ಅವರಿಗೆ ತರಹೇವಾರಿ ಅನುಭವಗಳಾಗುತ್ತವೆ. ಕೊನೆಗೆ ಅವರ ಕಣ್ಣಿಗೆ ಬೀಳ್ಳೋದೇ ಜಿಲೇಬಿ. ಅವಳನ್ನು ನೋಡಿ, ಮಾತಾಡಿ, ಕುಣಿದಾಡಿ, ತಮ್ಮ ಬ್ಯಾಚ್ಯುಲರ್‌ ಮನೆಗೆ ಕರೆದುಕೊಂಡು ಬರುವ ಆ ಮೂವರು, ಆಕೆಯ ಜತೆ ಎಂಜಾಯ್‌ ಮಾಡುವ ಮುನ್ನ, ರೌಂಡ್‌ ಟೇಬಲ್‌ ಪಾರ್ಟಿ ಮಾಡ್ತಾರೆ. ಆ ಮನೆಯಲ್ಲೊಂದು ಕೊಲೆ ನಡೆದು ಹೋಗುತ್ತೆ. ಆ ಕೊಲೆಯ ಸುತ್ತ ನಡೆಯೋದೇ ಸಸ್ಪೆನ್ಸ್‌ ಸ್ಟೋರಿ.

ಕೊಲೆಯಾಗಿದ್ದು ಯಾರು, ಕೊಲೆ ಮಾಡಿದ್ದು ಯಾರು, ಆ ಮೂವರು ಹುಡುಗರು ಎಂಥಾ ಇಕ್ಕಟ್ಟಿಗೆ ಸಿಲುಕುತ್ತಾರೆ ಎಂಬುದೇ ಸಾರಾಂಶ. ಪೂಜಾ ಗಾಂಧಿ “ದಪ್ಪ’ ಇದ್ದದ್ದು ಆ ಪಾತ್ರಕ್ಕೆ ಸಹಕಾರಿಯಾಗಿದೆಯಷ್ಟೇ. ಆ ಪಾತ್ರಕ್ಕಿನ್ನೂ ಜೀವ ತುಂಬಲು ಸಾಧ್ಯವಿತ್ತು. ಆರಂಭದಲ್ಲೊಂದಷ್ಟು “ಬೆನ್ನು’ ತೋರಿಸಿದ್ದು ಬಿಟ್ಟರೆ ಬೇರೇನೂ ಸಾಧನೆ ಇಲ್ಲ. ಯಶಸ್‌ ಸೂರ್ಯ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ.

ನಾಗೇಂದ್ರ ಹಾಸ್ಯದಲ್ಲಿನ್ನೂ ಧಮ್‌ ಕಟ್ಟಬೇಕು. ವಿಜಯ್‌ ಚೆಂಡೂರ್‌ ಕಾಮಿಡಿ ಸ್ವಲ್ಪ ಓವರ್‌ ಎನಿಸುತ್ತದೆ. ಉಳಿದಂತೆ ಕಾಣಿಸಿಕೊಳ್ಳುವಷ್ಟೂ ಸಮಯ ದತ್ತಣ್ಣ, ಶೋಭರಾಜ್‌, ತಬಲಾನಾಣಿ, ಮಿತ್ರ ಇಷ್ಟವಾಗುತ್ತಾರೆ. ಎಂ.ಆರ್‌.ಸೀನು ಕ್ಯಾಮೆರಾ ಕೈಚಳಕದಲ್ಲಿ “ಜಿಲೇಬಿ’ ಅಷ್ಟಾಗಿ ರುಚಿಸಿಲ್ಲ. ಜೇಮ್ಸ್‌ ಆರ್ಕಿಟೆಕ್ಟ್ ಸಂಗೀತವೂ ಅಷ್ಟಕ್ಕಷ್ಟೇ.

ಚಿತ್ರ: ಜಿಲೇಬಿ
ನಿರ್ಮಾಣ: ಶಿವಶಂಕರ ಫ್ಯಾಕ್ಟರಿ
ನಿರ್ದೇಶನ: ಲಕ್ಕಿ ಶಂಕರ್‌
ತಾರಾಗಣ: ಪೂಜಾಗಾಂಧಿ, ಯಶಸ್‌ ಸೂರ್ಯ, ನಾಗೇಂದ್ರ, ವಿಜಯ್‌ ಚೆಂಡೂರ್‌, ದತ್ತಣ್ಣ, ತಬಲಾನಾಣಿ, ಮಿತ್ರ, ಶೋಭರಾಜ್‌ ಇತರರು.
 

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next