ಜಮಖಂಡಿ: ಮರ ಹಾಗೂ ಅರಣ್ಯ ನಾಶ ಮಾಡುವುದರಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಪರಿಸರ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ತಾಲೂಕಿನ ಬುದ್ನಿ ಗ್ರಾಮದಲ್ಲಿ 120 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡುತ್ತಿದ್ದೇವೆ. ಸರಿಯಾದ ಸಮಯದಲ್ಲಿ ಮಳೆಯಾಗುತ್ತಿಲ್ಲ. ಇಂತಹ ಬೆಳವಣಿಗೆಯಿಂದ ಜಾಗತಿಕ ಮಟ್ಟದಲ್ಲಿ ಆಗುವ ಏರುಪೇರುಗಳಿಗೆ ಎಲ್ಲರೂ ಕಾರಣೀಭೂತರಾಗಿದ್ದೇವೆ ಎಂದರು.
ಕಳೆದ ವರ್ಷ ನಗರದಲ್ಲಿ ಪ್ರತಿದಿನ 20 ಸಾವಿರ ಸಸಿ ನೆಟ್ಟು ಬೆಳೆಸುವ ಕೆಲಸ ಮಾಡಿದ್ದೇವೆ. ಈ ಬಾರಿ ನಗರಪ್ರದೇಶ ಹೊರತುಪಡಿಸಿ ಹಸಿರು ಗ್ರಾಮದ ಪರಿಕಲ್ಪನೆಯಿಂದ ಕ್ಷೇತ್ರದ ಪ್ರತಿಯೊಂದು ಗ್ರಾಮವೂ ಹಸಿರಿನಿಂದ ಕಂಗೊಳಿಸಬೇಕೆನ್ನುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಲಾಗಿದೆ. ಲಿಂಗನೂರ ಗ್ರಾಮ ವ್ಯಾಪ್ತಿಯಲ್ಲಿ ನೂರಾರು ಸಸಿ ನೆಡಲಾಗಿದೆ.
ಗ್ರಾಮಸ್ಥರು, ಯುವಕರು ಕೈಜೋಡಿಸಿದರೆ ಗ್ರಾಮಗಳು ಅಭಿವೃದ್ಧಿ ಸಹಿತ ಪರಿಸರ ಹಸಿರಿನಿಂದ ಕಂಗೊಳಿಸುತ್ತವೆ. ಪ್ರತಿ 15 ದಿನಕ್ಕೊಮ್ಮೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ 40 ಸಾವಿರ ಸಸಿ ನಡುವ ಯೋಜನೆ ರೂಪಿಸಲಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದರು.
ಈಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಎಸ್.ಡಿ. ಬಬಲಾದಿ, ಪ್ರಭಾನಂದಶ್ರೀ, ಚಿದಾನಂದ ಹಿರೇಮಠ, ಮಲ್ಲಪ್ಪ ಕಾಂತಿ, ಚನಮಲ್ಲಪ್ಪ ಗುರವ, ಮಾಳಪ್ಪ ಗಸ್ತಿ, ಸದಾಶಿವ ಹಸರಡ್ಡಿ, ಶಿಕ್ಷಕ ಕೋಲೂರ, ಸುನೀಲ ತೇಲಿ, ಕುಮಾರ ಆಲಗೂರ, ಮೀರಾ ಒಂಟಮೋರೆ, ರೋಹಿತ ಸೂರ್ಯವಂಶಿ ಇದ್ದರು.