ಕೊಳ್ಳೇಗಾಲ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗದೆ ನಿರ್ಲಕ್ಷ್ಯವಹಿಸಿದ್ದು ಜನರು ನಾಯಿಗಳ ಕಾಟದಿಂದ ಮನೆಯಿಂದ ಹೊರಬರದಂತಾಗಿದೆ.
ತಾಲೂಕಾದ್ಯಂತ ಎಲ್ಲೆಲ್ಲೂ ನಾಯಿಗಳ ಕಾಟ ಹೆಚ್ಚಾಗಿದ್ದು, ಅವುಗಳ ನಿಯಂತ್ರಣ ಮಾಡಲಾಗದ ಅಧಿಕಾರಿ ಗಳು ಕಾನೂನು ಸಬೂಬು ಹೇಳಿ ಶಾಲಾ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ನಾಯಿಯಿಂದ ಕಚ್ಚಿಸಿಕೊಂಡು ಚಿಕಿತ್ಸೆಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಗಳಲ್ಲಿ ಆಡಚಣೆ: ತಾಲೂಕಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಹಿಂಡು ಮುಖ್ಯ ರಸ್ತೆಗಳಿಗೂ ಗುಂಪು ಗುಂಪಾಗಿ ಬರುವುದರಿಂದ ವಾಹನ ಚಾಲನೆಗೆ ಆಡಚಣೆ ಉಂಟಾಗಿ ಹಲವು ಸವಾರರು ತಮ್ಮ ಬೈಕ್‌ಗಳನ್ನು ಬೇರೆಡೆಗೆ ಡಿಕ್ಕಿ ಹೊಡೆದು ಬಿದ್ದು, ಕಾಲು ಕೈ ಮುರಿದುಕೊಂಡಿರುವ ಹಲವು ಪ್ರಕರಣಗಳು ನಡೆದಿದೆ.
ನಾಯಿ ಕಡಿತ: ಎಲ್ಲಾ ರಸ್ತೆಗಳಲ್ಲೂ ನಾಯಿಗಳ ಕಾಟ ಹೆಚ್ಚಾಗಿದ್ದು ಶಾಲಾ ಮಕ್ಕಳು, ವೃದ್ಧರು ಮತ್ತು ಸಾರ್ವ ಜನಿಕರು ರಸ್ತೆಯಲ್ಲಿ ಓಡಾಡುವ ವೇಳೆ ಆಕಸ್ಮಿಕವಾಗಿ ನಾಯಿಗಳು ಕಚ್ಚಿ ಗಾಯಗೊಳಿಸಿರುವ ನಿದರ್ಶನಗಳು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದೆ.
ನಾಯಿಗಳ ಕಾಟದಿಂದ ನಿದ್ರೆ ಇಲ್ಲ: ರಾತ್ರಿಯ ಹೊತ್ತು ಸಕ್ಕರೆ ಕಾಯಿಲೆ, ಹೃದಯ ಕಾಯಿಲೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಒಳಗಾದ ರೋಗಿಗಳಿಗೆ ತಮ್ಮ ಕಾಯಿಲೆಗೆ ಸಂಬಂಧಪಟ್ಟ ಔಷಧಿಪಡೆದು ಕೊಂಡು ನಿದ್ರಾವಸ್ಥೆಗೆ ಜಾರುತ್ತಾರೆ. ಆದರೆ ನಾಯಿಗಳ ಹಿಂಡು ಎಲ್ಲೆಲ್ಲೂ ದಾಳಿ ಮಾಡಿ ರಾತ್ರಿಯ ಹೊತ್ತು ಹೆಚ್ಚು ಬೊಗಳುವುದರಿಂದ ನಿದ್ರಾವಸ್ಥೆಯಲ್ಲಿರುವ ರೋಗಿ ಗಳು ನಿದ್ರೆ ಬಾರದೆ ನಾಯಿಗಳ ಕಾಟದಿಂದ ಮತ್ತಷ್ಟು ರೋಗ ಉಲ್ಬಣದ ಸ್ಥಿತಿಗೆ ಒಳಗಾಗುವಂತಾಗಿದೆ.
ರೋಗಿಗಳು ನಿದ್ರೆಗೆಡುವುದರ ಜೊತೆಗೆ ಸಣ್ಣ ಮಕ್ಕಳು ಸಹ ನಾಯಿಯ ಕೂಗಿನಿಂದ ಎದ್ದು ಮಕ್ಕಳು ಆಳುವುದರ ಜೊತೆಗೆ ಅವರ ತಂದೆ ತಾಯಿ ಮತ್ತು ಕುಟುಂಬ ವರ್ಗದವರು ನಿದ್ರಾವಸ್ಥೆಯಿಂದ ಕಂಗೆಟ್ಟು ನಾಯಿಗಳ ಕಾಟಕ್ಕೆ ಇಡೀ ಶಾಪ ಹಾಕುವಂತೆ ಆಗಿದ್ದು, ಈ ನಾಯಿಗಳನ್ನು ಇಲ್ಲಿ ಹಿಡಿಯುವವರು ಯಾರು ಇಲ್ಲವೇ ಮತ್ತು ಇದನ್ನು ನಾಶ ಗೊಳಿಸವುದಿಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುವಂತೆ ಆಗಿದೆ.
ನಾಯಿಗಳಿಗೆ ಕಡಿವಾಣ ಹಾಕಿ: ಈ ಹಿಂದೆ ನಾಯಿಗಳು ಸುಮಾರು 35 ಜನರಿಗೆ ಕಚ್ಚಿ ಗಾಯ ಗೊಳಿಸಿರುವ ಪ್ರಕರಣಗಳು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದೆ. ಜೂನ್ ತಿಂಗಳು ಒಂದರಲ್ಲೇ ಇಷ್ಟು ಪ್ರಕರಣ ದಾಖಲಾದರೆ ವರ್ಷವಿಡೀ ಪ್ರಕರಣಗಳು ಹೆಚ್ಚಾಗಲಿದ್ದು, ಸಂಬಂಧಿಸಿದ ಅಧಿಕಾರಿಗಳು ನಾಯಿಗಳ ಕಾಟಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
● ಡಿ.ನಟರಾಜು