ಬೆಳಗಾವಿ: ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಸಹ ಗಣನೀಯ ಇಳಿಕೆಯಾಗಿದ್ದು ಪ್ರವಾಹದ ಆತಂಕದಲ್ಲಿದ್ದ ನದಿ ತೀರದ ಗ್ರಾಮಗಳ ಜನರಲ್ಲಿ ನೆಮ್ಮದಿ ಮೂಡಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾನಯನ ಪ್ರದೇಶದಲ್ಲಿ ಮಳೆಯ ರಭಸ ತಗ್ಗಿದೆ. ಇದರಿಂದ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದು ಈಗ ರಾಜಾಪುರ ಬ್ಯಾರೇಜ್ ಗೆ 1,28,875 ಕ್ಯೂಸೆಕ್ ನೀರು ಬರುತ್ತಿದೆ. ಇದೇ ವೇಳೆ ದೂಧಗಂಗಾ ನದಿಯಿಂದ 33,616 ಕ್ಯೂಸೆಕ್ ಸೇರಿದಂತೆ ಕರ್ನಾಟಕದ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 1,62,491 ಕ್ಯೂಸೆಕ್ ನೀರು ಬರುತ್ತಿದೆ.
ಘಟಪ್ರಭಾ: ಮಹಾರಾಷ್ಟ್ರದ ಅಂಬೋಲಿ ಪ್ರದೇಶದಲ್ಲಿ ಸಹ ಮಳೆಯ ಪ್ರಮಾಣ ಇಳಿಕೆಯಾಗಿದೆ. ಇದರಿಂದ ಕಳೆದ 24 ಗಂಟೆಗಳ ಅವಧಿಯಲ್ಲಿ ಘಟಪ್ರಭಾ ನದಿಯ ಒಳಹರಿವು ಸಹ ಸಾಕಷ್ಟು ಕಡಿಮೆಯಾಗಿದೆ. ಹಿಡಕಲ್ ಜಲಾಶಯಕ್ಕೆ ಈಗ 39 ಸಾವಿರ ಕ್ಯೂಸೆಕ್ ನೀರು ಬರಲಾರಂಭಿಸಿದೆ. ಶನಿವಾರ ಒಳಹರಿವಿನ ಪ್ರಮಾಣ 46 ಸಾವಿರ ಕ್ಯೂಸೆಕ್‌ದಷ್ಟಿತ್ತು. ಆದರೆ ಜಲಾಶಯ ಭರ್ತಿಯಾಗುವ ಹಂತ ತಲುಪಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಮಲಪ್ರಭಾ: ಖಾನಾಪುರ ತಾಲೂಕಿನಲ್ಲಿ ಸಹ ಮಳೆ ಕಡಿಮೆಯಾಗಿ ಮಲಪ್ರಭಾ ನದಿಯ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಶನಿವಾರ 22 ಸಾವಿರ ಕ್ಯೂಸೆಕ್ಸ್‌ದಷ್ಟಿದ್ದ ಒಳಹರಿವು ಈಗ 15 ಸಾವಿರಕ್ಕೆ ಇಳಿಕೆಯಾಗಿದೆ. ಒಟ್ಟು 2079 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2072 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿ ಹಂತ ತಲುಪಿರುವದರಿಂದ ಮುಂಜಾಗೃತಾ ಕ್ರಮವಾಗಿ ಜಲಾಶಯದಿಂದ ಸುಮಾರು ಆರು ಸಾವಿರ ಕ್ಯೂಸೆಕ್ ನೀರನ್ನು ಹೊರಗಡೆ ಬಿಡಲಾಗುತ್ತಿದೆ.
ಬೆಳಗಾವಿ ತಾಲೂಕಿನಲ್ಲಿ ಅಪಾರ ನಷ್ಟ ಉಂಟುಮಾಡುವ ಬಳ್ಳಾರಿ ನಾಲಾ ಅರ್ಭಟ ಸಹ ಕಡಿಮೆಯಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಬಳ್ಳಾರಿ ನಾಲಾಕ್ಕೆ ಈಗ ಎಂಟು ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಇನ್ನೊಂದು ಕಡೆ ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳಲ್ಲಿ ಸಹ ಒಳಹರಿವಿನ ಪ್ರಮಾಣ ತಗ್ಗಿರುವುದರಿಂದ ನದಿ ತೀರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.