ಹುಬ್ಬಳ್ಳಿ: ಉತ್ತರ ಕರ್ನಾಟಕ, ಮಲೆನಾಡಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಪ್ರವಾಹ ಇಳಿಮುಖವಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಬಹುತೇಕ ಕಡೆ ಪರಿಹಾರ ಕೇಂದ್ರಗಳಲ್ಲಿದ್ದ ಸಂತ್ರಸ್ತರು ಮನೆಯತ್ತ ತೆರಳಲು ತಯಾರಿ ನಡೆಸಿದ್ದಾರೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆ ಹಾಗೂ ಪ್ರವಾಹ ಗಣನೀಯವಾಗಿ ತಗ್ಗಿದೆ. ಕೃಷ್ಣಾ, ಧೂದ್‌ಗಂಗಾ, ವೇದಗಂಗಾ, ಮಲಪ್ರಭಾ, ಘಟಪ್ರಭಾ ನದಿಗಳ ಒಳಹರಿವಿನ ಮಟ್ಟ ಇಳಿಕೆಯಾಗಿದೆ. ಆದರೆ, ಕೆಲ ಗ್ರಾಮಗಳಿಗೆ ನುಗ್ಗಿದ್ದ ನೀರು ಇನ್ನಷ್ಟೇ ಇಳಿಮುಖವಾಗಬೇಕಿದೆ.
ಬಳ್ಳಾರಿಯಲ್ಲೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ತುಂಗಭದ್ರಾ ನದಿಯಲ್ಲಿ ಸೋಮವಾರ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯದ ಹೊರಹರಿವು 50 ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಈತನಕ ಐದು ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ನದಿಗೆ ಹರಿಸಲಾಗಿದೆ. ಆದರೆ, ಕಂಪ್ಲಿ, ಹಂಪಿ ಸೇರಿದಂತೆ ನದಿಪಾತ್ರದ ಗ್ರಾಮಗಳಲ್ಲಿ ಮನೆ, ಹೊಲಗಳಿಗೆ ನುಗ್ಗಿದ್ದ ನೀರು ಇಳಿಮುಖವಾಗಿಲ್ಲ. ಇನ್ನೊಂದೆಡೆ, ತುಂಗಭದ್ರಾ ಅಣೆಕಟ್ಟೆ ನೋಡಲು ಬರುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಈ ನಡುವೆ, ಕೊಪ್ಪಳ ಜಿಲ್ಲೆಯ ವಿರುಪಾಪುರದಡ್ಡಿ ಯಲ್ಲಿ ಸಿಲುಕಿದ್ದ 26 ವಿದೇಶಿಯರೂ ಸೇರಿ ಒಟ್ಟು 314 ಪ್ರವಾಸಿಗರನ್ನು ಈವರೆಗೆ ರಕ್ಷಣಾ ತಂಡಗಳು ರಕ್ಷಿಸಿವೆ. ಈ ಪೈಕಿ, 150 ಜನರನ್ನು ಹೆಲಿಕಾಪ್ಟರ್ ಹಾಗೂ 100 ಜನರನ್ನು ಎನ್‌ಡಿಆರ್‌ಎಫ್ ಬೋಟ್ ಮೂಲಕ ಸೋಮವಾರ ಕರೆ ತಂದಿದೆ. ಇನ್ನೂ 150 ಮಂದಿ ಅಲ್ಲೇ ಉಳಿದಿದ್ದು, ಮಂಗಳವಾರವೂ ರಕ್ಷಣಾ ಕಾರ್ಯ ಮುಂದುವರಿಯಲಿದೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ ವೇಳೆ ನೀರುಪಾಲಾಗಿದ್ದ ಎನ್‌ಡಿಆರ್‌ಎಫ್ ಕಮಾಂಡೆಂಟ್ ಸಹಿತ ಐವರನ್ನು ರಕ್ಷಿಸಲಾಗಿದೆ. ರಾಯಚೂರು, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲೂ ನೆರೆ ಇಳಿದಿದೆ.
ಚಿಗಳ್ಳಿ ಜಲಾಶಯ ಒಡ್ಡು ಒಡೆತ: ಉತ್ತರ ಕನ್ನಡದಲ್ಲೂ ನೆರೆ ಇಳಿಮುಖವಾಗಿದೆ. ಸೋಮವಾರ ಮುಂಡಗೋಡ ತಾಲೂಕಿನ ಚಿಗಳ್ಳಿ ಜಲಾಶಯದ ಒಡ್ಡು ಒಡೆದು ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಹುಬ್ಬಳ್ಳಿ- ಶಿರಸಿ ಮಧ್ಯೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಗದಗ- ಹಾವೇರಿಯಲ್ಲೂ ಪ್ರವಾಹ ಕಡಿಮೆಯಾಗಿದೆ.
ರಕ್ಷಣಾ ಕಾರ್ಯ ಚುರುಕು: ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ತುಂಗಾ-ಭದ್ರಾ ನದಿಯಲ್ಲಿ ಪ್ರವಾಹ ಇಳಿದಿದೆ. ಅತ್ತ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗುತ್ತಲೇ ಪರಿಹಾರ-ರಕ್ಷಣಾ ಕಾರ್ಯಗಳು ಚುರುಕಾಗಿದೆ. ನಡುಗಡ್ಡೆಗಳಲ್ಲಿ ಸಿಲುಕಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಉಕ್ಕಿ ಹರಿಯುತ್ತಿದ್ದ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಗುಡ್ಡ ಕುಸಿತದಿಂದ ಕಲ್ಲು-ಮಣ್ಣುಗಳಿಂದ ತುಂಬಿಹೋಗಿದ್ದ ರಸ್ತೆಗಳನ್ನು ತೆರವುಗೊಳಿಸಲಾಗುತ್ತಿದೆ.