ಗಡಿಯಲ್ಲಿ ಚೀನದ ಕಿತಾಪತಿ ಹೆಚ್ಚಾದಂತೆ ಆ ದೇಶದೊಂದಿಗಿನ ಭಾರತದ ವಾಣಿಜ್ಯ ಸಂಬಂಧದ ಕೊಂಡಿಯನ್ನು ಭಾರತ ಕ್ರಮೇಣ ಸಡಿಲ ಮಾಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚೀನದಿಂದ ಆಮದಾಗುವ ವಸ್ತುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದ್ದು, ಕಳೆದ ಐದು ವರ್ಷಗಳಲ್ಲಿ ಕಂಡುಬಂದ ದೊಡ್ಡ ಮಟ್ಟದ ಕುಸಿತ ಇದಾಗಿದೆ. ಹಾಗೇ ಭಾರತದಿಂದ ಚೀನಕ್ಕೆ ರಫ್ತಾಗುವ ಉತ್ಪನ್ನಗಳ ಮೌಲ್ಯ ಹೆಚ್ಚಾಗುತ್ತಿದೆ. ಯುಪಿಎ ಸರಕಾರದ ಅವಧಿಯಲ್ಲಿನ ಆಮದು ಪ್ರಮಾಣಕ್ಕೆ ಹೋಲಿಸಿದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಆಮದು ಮೌಲ್ಯ ಸಾಕಷ್ಟು ಹೆಚ್ಚಿದೆಯಾದರೂ, ರಫ್ತು ಮೌಲ್ಯ ಕೂಡ ವೃದ್ಧಿಸಿದೆ ಎಂಬುದು ಸುಳ್ಳಲ್ಲ. ಈ ನಡುವೆ ಕಳೆದ ಕೆಲವು ತಿಂಗಳುಗಳಿಂದ ಚೀನದಿಂದ ಬರುವ ಸರಕು, ಸೇವೆಗಳಿಗೆ ಮೋದಿ ಸರಕಾರ ಸಾಕಷ್ಟು ಕಡಿವಾಣ ಹಾಕಿದೆ. ಜತೆಗೆ ರಫ್ತು ಪ್ರಮಾಣದಲ್ಲಿ ಶೇ.3.3ರಷ್ಟು ಏರಿಕೆ ಕಂಡುಬಂದಿರುವುದು ಭಾರತದ ಮಟ್ಟಿಗೆ ಆಶಾದಾಯಕ ಬೆಳವಣಿಗೆ.
ಇತ್ತೀಚಿನ ಬೆಳವಣಿಗೆಗಳು
ಚೀನದ ಮೇಲಿನ ಅವಲಂಬನೆಯಿಂದ ಕ್ರಮೇಣ ಹೊರಬರುತ್ತಿರುವ ಭಾರತ.
ಕಳೆದ ಕೆಲವು ತಿಂಗಳುಗಳಿಂದ ಆಮದು ಕಡಿಮೆ ಮಾಡಿ ರಫ್ತು ಪ್ರಮಾಣ ಹೆಚ್ಚಳ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಆಮದು-ರಫ್ತು ಮೌಲ್ಯದ ನಡುವಿನ ಅಂತರ ಕುಸಿತ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚೀನ ಕೈತಪ್ಪಿದ 1.5 ಲಕ್ಷ ಕೋಟಿ ರೂ. ಆದಾಯ.
ಪರ್ಯಾಯವಾಗಿ ರಿಯಾಯಿತಿ ಮತ್ತಿತರ ಸೌಲಭ್ಯ ನೀಡಿ ದೇಶಿ ಉದ್ಯಮಗಳಿಗೆ ಉತ್ತೇಜನ.
5.78 ಲಕ್ಷ ಕೋಟಿ ರೂ. 2018-19ನೇ ಸಾಲಿನ ಆಮದು ಮೌಲ್ಯ.
4.92 ಲಕ್ಷ ಕೋಟಿ ರೂ. 2019-20ನೇ ಸಾಲಿನ ಆಮದು ಮೌಲ್ಯ.
1.20 ಲಕ್ಷ ಕೋಟಿ ರೂ. 2019-20ನೇ ಸಾಲಿನ ರಫ್ತು ಮೌಲ್ಯ.
4.05 ಲಕ್ಷ ಕೋಟಿ ರೂ. 2018-19ನೇ ಸಾಲಿನಲ್ಲಿ ಆಮದು-ರಫ್ತು ಮೌಲ್ಯದ ನಡುವಿನ ಅಂತರ.
3.58 ಲಕ್ಷ ಕೋಟಿ ರೂ. 2019-20ನೇ ಸಾಲಿನಲ್ಲಿ ಆಮದು-ರಫ್ತು ಮೌಲ್ಯದ ನಡುವಿನ ಅಂತರ