ನಾರಾಯಣಪುರ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಸಂಪೂರ್ಣ ತಗ್ಗಿದ್ದರಿಂದ, ಆಲಮಟ್ಟಿ ಶಾಸ್ತ್ರೀ, ಬಸವಸಾಗರ ಜಲಾಶಯಗಳಿಗೆ ನೀರಿನ ಒಳಹರಿವು ಇಳಿಮುಖವಾಗಿದೆ. ಉಕ್ಕಿ ಹರಿಯುತ್ತಿದ್ದ ಕೃಷ್ಣಾ ನದಿಯು ಶಾಂತವಾಗಿದೆ.
ಬಸವಸಾಗರಕ್ಕೆ ಒಳಹರಿವು ತಗ್ಗಿದ್ದರಿಂದ ಹಂತ ಹಂತವಾಗಿ ಕೃಷ್ಣಾ ನದಿಗೆ ನೀರು ಹರಿಸುವುದನ್ನು ಕಡಿಮೆಗೊಳಿಸಲಾಗಿದೆ. ಇದರಿಂದ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಕಡಿಮೆಯಾದಂತಾಗಿದೆ.
ಶನಿವಾರ 6 ಸಾವಿರ ಕ್ಯೂಸೆಕ್‌ನಷ್ಟಿದ್ದ ಒಳಹರಿವು ಗಮನಿಸಿದ ಅಣೆಕಟ್ಟು ಅಧಿಕಾರಿಗಳು ಜಲಾಶಯದ ಎಲ್ಲಾ ಕ್ರಸ್ಟ್‌ಗೇಟ್‌ಗಳನ್ನು ಬಂದ್ ಮಾಡಿ, ಕೃಷ್ಣಾ ನದಿಗೆ 4 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಎಂಪಿಸಿಎಲ್ ಜಲವಿದ್ಯುತ್ ಘಟಕದ ಮೂಲಕ ನದಿಗೆ ಹರಿಸುತ್ತಿದ್ದಾರೆ. ಸೋಮವಾರ ಕೂಡ ಒಳಹರಿವು 6 ಸಾವಿರ ಕ್ಯೂಸೆಕ್‌ನಷ್ಟಿದೆ ಆದರೂ ಜಲಾಶಯದ ಸಂಗ್ರಹಮಟ್ಟ ಹೆಚ್ಚಿಸಿಕೊಳ್ಳಲು ಎಂಪಿಸಿಎಲ್ ಮೂಲಕ ನೀರು ಹರಿಸುವುದನ್ನು ಬಂದ್ ಮಾಡಿ ಕೃಷ್ಣಾ ನದಿಗೆ ನೀರು ಹರಿಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ
ಎಂದು ಅಣೆಕಟ್ಟು ವಿಭಾಗದ ಪ್ರಭಾರ ಇಇ ಪ್ರಕಾಶ ಎಂ. ಪತ್ರಿಕೆಗೆ ತಿಳಿಸಿದರು. ಪ್ರಸ್ತುತ ಜಲಾಶಯ ಗರಿಷ್ಠ ಮಟ್ಟದಲ್ಲಿ 491.49 ಮೀಟರ್‌ಗೆ ನೀರು ಇದ್ದು, 29.87 ಟಿಎಂಸಿ ಅಡಿ ನೀರು ಸಂಗ್ರಹವಿದೆ ಒಳಹರಿವು 6 ಸಾವಿರ ಕ್ಯೂಸೆಕ್ ಇದ್ದು, ಹೊರಹರಿವು ಇಲ್ಲ.