Advertisement

ಮೆಸ್ಕಾಂ ವ್ಯಾಪ್ತಿಯಲ್ಲಿ ತಗ್ಗಿದ ಬೇಡಿಕೆ: ಅಕಾಲಿಕ ಮಳೆಯಿಂದಾಗಿ ವಿದ್ಯುತ್‌ ಬಳಕೆ ಇಳಿಕೆ !

01:18 AM May 10, 2022 | Team Udayavani |

ಮಂಗಳೂರು: ದೇಶದೆಲ್ಲೆಡೆ ವಿದ್ಯುತ್‌ ಅಭಾವದ ಸಂಕಷ್ಟ ಎದುರಾ ಗಿದ್ದರೂ ಸದ್ಯ ಕರಾವಳಿ ಜಿಲ್ಲೆಯ ಮೆಸ್ಕಾಂ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯ ಕಾರಣದಿಂದ ವಿದ್ಯುತ್‌ ಬಳಕೆಯೇ ಇಳಿದಿದೆ !

Advertisement

ಜನವರಿಯಲ್ಲಿ ಪ್ರತೀ ದಿನ ಸರಾಸರಿ 20.83 ಮಿಲಿಯ ಯುನಿಟ್‌ (ಕಳೆದ ವರ್ಷ 18.76 ಮಿ. ಯುನಿಟ್‌) ವಿದ್ಯುತ್‌
ಬಳಕೆಯಾಗಿದ್ದರೆ, ಫೆಬ್ರವರಿಯಲ್ಲಿ 24.11 ಮಿ. ಯುನಿಟ್‌ (21.47 ಮಿ.ಯು.), ಮಾರ್ಚ್‌ನಲ್ಲಿ 24.27 ಯುನಿಟ್‌ (24.10 ಮಿ.ಯು.) ವಿದ್ಯುತ್‌ ಬಳಕೆಯಾಗಿದೆ. ಆದರೆ ಎಪ್ರಿಲ್‌ನಲ್ಲಿ ಮಾತ್ರ ಇಳಿಕೆಯಾಗಿದೆ. ಸರಾಸರಿ 19.98 ಮಿ. ಯುನಿಟ್‌ (ಕಳೆದ ವರ್ಷ 20.86 ಮಿ.ಯು.) ಮಾತ್ರ ಬಳಕೆಯಾಗಿದೆ. ಮೇ ಮೊದಲ ವಾರ ವಿದ್ಯುತ್‌ ಬಳಕೆ ಮತ್ತೆ ಕೊಂಚ ಏರಿದ್ದರೂ ಒಂದೆರಡು ದಿನದಲ್ಲಿ ಸುರಿದ ಮಳೆಯ ಕಾರಣದಿಂದ ಬಳಕೆ ಇಳಿಕೆ ಕಂಡಿದೆ.

ಅಲ್ಲಲ್ಲಿ ಮಳೆ; ಬೇಡಿಕೆಯೂ ಇಳಿಕೆ!
ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಸೇರಿರುವ ಮೆಸ್ಕಾಂ ವ್ಯಾಪ್ತಿಯಲ್ಲಿ ಬೇಸಗೆ ಸಂದರ್ಭ ಕೃಷಿ ಪಂಪ್‌ಸೆಟ್‌ ಬಳಕೆ ಅಧಿಕವಿರುತ್ತದೆ. ಈ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಾಗುತ್ತಿರುವ ಕಾರಣದಿಂದ ಪಂಪ್‌ಸೆಟ್‌ ಬಳಕೆ ಕಡಿಮೆಯಾಗಿದೆ. ಪರಿಣಾಮ ವಿದ್ಯುತ್‌ ಬಳಕೆ ಕುಸಿತ ಕಂಡಿದೆ.

ವಿದ್ಯುತ್‌ ಬಳಕೆ ಯಾಕೆ ಹೆಚ್ಚು?
ಕರಾವಳಿಯಾದ್ಯಂತ ಬೇಸಗೆಯಲ್ಲಿ ಕೃಷಿ ಪಂಪ್‌ಸೆಟ್‌ ಬಳಕೆ ಅಧಿಕವಿರುತ್ತದೆ. ಹೀಗಾಗಿ ವಿದ್ಯುತ್‌ ಬೇಡಿಕೆ ಗರಿಷ್ಠ ಮಟ್ಟ ತಲುಪಿತ್ತು. ಜತೆಗೆ ಬೇಸಗೆಯ ತಾಪವೂ ಗರಿಷ್ಠ ಮಟ್ಟದಲ್ಲಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಉಷ್ಣಾಂಶದಲ್ಲಿ ಶೇ. 1ರಿಂದ ಶೇ. 2ರಷ್ಟು ಏರಿಕೆಯಾಗಿದೆ. ಬಿಸಿಲಿನ ಬೇಗೆಯಿಂದ ಪಾರಾಗಲು ಜನರು ತಂಪು ಗಾಳಿ ಹಾಯಿಸುವ ಎ.ಸಿ., ಕೂಲರ್‌, ಫ್ಯಾನ್‌ ಸಹಿತ ವಿದ್ಯುತ್‌ ಉಪಕರಣ ಬಳಕೆ ಏರಿಕೆಯಾಗಿತ್ತು. ಅಕಾಲಿಕ ಮಳೆಯಿಂದ ಗೃಹ ವಿದ್ಯುತ್‌ ಬೇಡಿಕೆಯ ಮೇಲೂ ಕೊಂಚ ಪರಿಣಾಮ ಬೀರಿದಂತಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 24.29 ಲಕ್ಷ ಬಳಕೆದಾರರಿದ್ದು, ಗೃಹಬಳಕೆಯವರು 17.70 ಲಕ್ಷ, ಕೃಷಿ ಪಂಪ್‌ಸೆಟ್‌ ಬಳಕೆದಾರರು 3.45 ಲಕ್ಷ, ವಾಣಿಜ್ಯ ಬಳಕೆದಾರರು 2.19 ಲಕ್ಷ, ಕೈಗಾರಿಕೆ ಬಳಕೆದಾರರು 33 ಸಾವಿರ ಇದ್ದಾರೆ.

Advertisement

ಅಘೋಷಿತ ಲೋಡ್‌ ಶೆಡ್ಡಿಂಗ್‌ !
ದೈನಂದಿನ ವಿದ್ಯುತ್‌ ಬೇಡಿಕೆ ಪ್ರಮಾಣ ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದ ಕಾರಣದಿಂದ ಪರಿಸ್ಥಿತಿಯ ಒತ್ತಡ ನಿಭಾಯಿಸಲು ತಾಂತ್ರಿಕ ನೆಪವೊಡ್ಡಿ ವಿದ್ಯುತ್‌ ಕಡಿತಗೊಳಿಸುವ ತಂತ್ರವನ್ನು ಮೆಸ್ಕಾಂ ಅನುಸರಿಸಿತ್ತು. ಅಘೋಷಿತ ಲೋಡ್‌ಶೆಡ್ಡಿಂಗ್‌ ಜಾರಿ ಕೆಲವೆಡೆ ಜಾರಿಯಲ್ಲಿದೆ. ಈ ಮಧ್ಯೆ ಮಳೆ, ಗಾಳೆ, ಸಿಡಿಲಿನಿಂದ ಗ್ರಾಮಾಂತರ ಭಾಗದಲ್ಲಿ ವಿದ್ಯುತ್‌ ಕೈಕೊಟ್ಟರೆ ಇಡೀ ದಿನ ಮತ್ತೆ ಬರುವುದೇ ಅನುಮಾನ ಎಂಬಂತಾಗಿದೆ!

ಬಿಸಿಲಿನ ಬೇಗೆ ಅಧಿಕ, ಕೃಷಿ ಪಂಪ್‌ಸೆಟ್‌ ಮತ್ತು ಕೈಗಾರಿಕಾ ವಲಯದಲ್ಲಿ ಉತ್ಪಾದನೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್‌ ಬಳಕೆಯಲ್ಲಿ ಏರಿಕೆ ಆಗಿತ್ತು. ರಾಜ್ಯ ಮಟ್ಟದಲ್ಲಿ ಕೂಡ ವಿದ್ಯುತ್‌ ಬಳಕೆ ಪ್ರಮಾಣ ಏರುಗತಿಯಲ್ಲಿತ್ತು. ಆದರೆ, ಅಕಾಲಿಕ ಮಳೆ ಕಾರಣದಿಂದ ವಿದ್ಯುತ್‌ ಬಳಕೆಯಲ್ಲಿ ಕಡಿಮೆಯಾಗುತ್ತಿದೆ.
– ಪ್ರಶಾಂತ್‌ ಕುಮಾರ್‌ ಮಿಶ್ರಾ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ಬಳಕೆ ವಿದ್ಯುತ್‌ ಪ್ರಮಾಣ (ಮಿಲಿಯ ಯೂನಿಟ್‌ಗಳಲ್ಲಿ )
ಜನವರಿ: 604.02
ಫೆಬ್ರವರಿ: 675.21
ಮಾರ್ಚ್‌: 752.35
ಎಪ್ರಿಲ್‌: 586.23
ಕಳೆದ ವರ್ಷದ ವಿದ್ಯುತ್‌ ಬಳಕೆ (ಮಿಲಿಯ ಯೂನಿಟ್‌ಗಳಲ್ಲಿ )
ಜನವರಿ: 581.46
ಫೆಬ್ರವರಿ: 601.11
ಮಾರ್ಚ್‌: 746.98
ಎಪ್ರಿಲ್‌: 625.85
ವಿದ್ಯುತ್‌ ಬಳಕೆಯ ಪ್ರದೇಶವಾರು ವಿವರ
ಗ್ರಾಮಾಂತರ: ಶೇ. 38
ನಗರ: ಶೇ. 24
ಕೈಗಾರಿಕೆ: ಶೇ. 5
ನೀರಾವರಿ ಪಂಪ್‌ಸೆಟ್‌: ಶೇ. 22
ಕುಡಿಯುವ ನೀರು: ಶೇ. 3
ನಿರಂತರ ಜ್ಯೋತಿ: ಶೇ. 8

– ದಿನೇಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.

Next