ನಾರಾಯಣಪುರ: ಆಲಮಟ್ಟಿ ಶಾಸ್ತ್ರಿ ಜಲಾಶಯದಿಂದ ಬಸವಸಾಗರಕ್ಕೆ ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ಒಳಹರಿವು 75 ಸಾವಿರ ಕ್ಯೂಸೆಕ್ ಇಳಿಕೆಯಾಗಲಿದ್ದು, ಹೀಗಾಗಿ ಕೃಷ್ಣಾ ನದಿಗೆ ಅಷ್ಟೇ ಪ್ರಮಾಣದ ನೀರು ಹರಿಸಲಾಗುವುದು ಎಂದು ಕೆಬಿಜೆಎನ್ನೆಲ್ ಮೂಲಗಳಿಂದ ತಿಳಿದು ಬಂದಿದೆ.
ಮಂಗಳವಾರ ಬೆಳಗ್ಗೆ ಬಸವಸಾಗರಕ್ಕೆ ನೀರಿನ ಒಳಹರಿವು 1 ಲಕ್ಷ ಕ್ಯೂಸೆಕ್ ಇತ್ತು. ಆಗ ಜಲಾಶಯದ 12 ಕ್ರಸ್ಟ್ ಗೇಟ್ ಗಳಿಂದ 84 ಸಾವಿರ ಕ್ಯೂಸೆಕ್ ಹಾಗೂ ಮುರುಡೇಶ್ವರ ಜಲ ವಿದ್ಯುತ್ ಘಟಕದಿಂದ 6 ಸಾವಿರ ಕ್ಯೂಸೆಕ್ ಸೇರಿ ಒಟ್ಟು 90 ಸಾವಿರ ಕ್ಯೂಸೆಕ್‌ನಷ್ಟು ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿತ್ತು. ʼ
ಜಲಾಶಯಕ್ಕೆ ಕ್ರಮೇಣ ಬರುವ ಒಳಹರಿವು ಗಮನಿಸಿ ಅಣೆಕಟ್ಟು ಅಧಿ ಕಾರಿಗಳು ನದಿಗೆ ನೀರು ಹರಿಸುವುದನ್ನು ಕಡಿಮೆಗೊಳಿಸಿದ್ದಾರೆ. ಇದರಿಂದ ನದಿಯಲ್ಲಿ ಪ್ರವಾಹದ ತೀವ್ರತೆ ತಗ್ಗಿದಂತಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಕೊಂಚ ಕಡಿಮೆಯಾಗಿದೆ.
ನದಿಗೆ ಅಪಾರ ನೀರು ಹರಿಬಿಟ್ಟಿದ್ದರಿಂದ ನದಿ ತೀರದ ಕೆಳ ಹಂತದ ಸೇತುವೆಗಳು ಜಲಾವೃತವಾಗಿದ್ದವು. ಸದ್ಯ ನದಿಯಲ್ಲಿ ಪ್ರವಾಹ ತಗ್ಗಿದ್ದರಿಂದ ಸೇತುವೆ ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಿವೆ.
ಸದ್ಯ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಸಾಗರದಿಂದ ಬಸವಸಾಗರಕ್ಕೆ ಬರುವ ಒಳಹರಿವು ಕ್ರಮೇಣ ಕಡಿಮೆಯಾಗುತ್ತಿದೆ. ಹೀಗಾಗಿ ಜಲಾಶಯಕ್ಕೆ ಬರುವ ಒಳಹರಿವು ಗಮನಿಸಿ ಕೃಷ್ಣಾ ನದಿಗೆ ನೀರು ಹರಿಸುವ ಪ್ರಮಾಣ ಕಡಿಮೆಗೊಳಿಸಲಾಗುತ್ತಿದೆ.
–ಪ್ರಕಾಶ ಎಂ., ಅಣೆಕಟ್ಟು ವಿಭಾಗದ ಪ್ರಭಾರ ಕಾರ್ಯ ನಿರ್ವಾಹಕ ಎಂಜಿನಿಯರ್