Advertisement

ಉರಿ ಬಿಸಿಲಿಗೆ ಕರಟಿದ ಅಡಿಕೆ ಹಿಂಗಾರ

03:55 AM Mar 29, 2019 | Sriram |

ಬೆಳ್ತಂಗಡಿ: ತಾಪ ಏರಿಕೆಯಿಂದ ಬರದ ಛಾಯೆ ಮೂಡಿರುವ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆಗೆ ಕುತ್ತು ಬಂದಿದೆ. ಜಿಲ್ಲೆಯಲ್ಲಿ ಈ ಬಾರಿ ಈ ವರೆಗಿನ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದ ಪರಿಣಾಮ ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳ ಬಹುತೇಕ ಪ್ರದೇಶಗಳಲ್ಲಿ ಅಡಿಕೆಯ ಹಿಂಗಾರ ಕರಟಿದೆ.

Advertisement

ದಿನಕ್ಕೆ ನಾಲ್ಕು ತಾಸು ನೀರು ಹಾಯಿಸುವ ತೋಟಗಳಲ್ಲೂ ಹಿಂಗಾರ ಸುಟ್ಟು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. 36-37 ಡಿಗ್ರಿ ಸೆ.ಗಿಂತ ಹೆಚ್ಚಿನ ತಾಪಮಾನವಿದ್ದರೆ ಅಡಿಕೆ ಇಳುವರಿ ಕುಸಿಯುತ್ತದೆ. ಅದಕ್ಕಿಂತ ಹೆಚ್ಚು ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಮುಂದಿನ ವರ್ಷದ ಇಳುವರಿಯೂ ಕುಸಿಯುವುದು ನಿಶ್ಚಿತ.

ಬೇರುಹುಳ ರೋಗ ಬಂಟ್ವಾಳ ಸುತ್ತಮುತ್ತ ಬೇರುಹುಳ ಸಮಸ್ಯೆ ಆವರಿಸಿದೆ. ದುಂಬಿ ಪ್ರಭೇದದ ಕೀಟದ ಹುಳಗಳು ಬೇರು ತಿನ್ನುತ್ತಿವೆ. ಇದರಿಂದ ಅಡಿಕೆ ಗಿಡಗಳು ಬಲ ಕಳೆದು ಕೊಂಡು ವಾಲುತ್ತ¤ ಹಾಳಾಗುತ್ತಿವೆ. ತಜ್ಞರ ಪ್ರಕಾರ ಸಮಗ್ರ ನಿಯಂತ್ರಣ ಪದ್ಧತಿ ಅನುಸರಿಸಿದಲ್ಲಿ ಮಾತ್ರ ಇದರ ನಿಯಂತ್ರಣ ಸಾಧ್ಯ. ಆದರೆ ಅಡಿಕೆ ಗಿಡ ಕೀಟ ಬಾಧೆಯಿಂದ ಒಮ್ಮೆ ಬಲ ಕಳೆದುಕೊಂಡರೆ ಯಾವುದೇ ದ್ರಾವಣದಿಂದ ನಿಯಂತ್ರಣ ಅಸಾಧ್ಯ ಎಂಬುದು ರೈತರ ಅಳಲು.

ರೆಡ್‌ಮೈಟ್‌ ಆತಂಕ
ಕಳೆದ ವರ್ಷ ಮಳೆ ಪ್ರಮಾಣ ಹೆಚ್ಚಿದ್ದ ರಿಂದ ಜಿಲ್ಲೆಯ 33,595 ಹೆಕ್ಟೇರ್‌ ಪ್ರದೇಶದಲ್ಲಿ ಶೇ. 33ಕ್ಕಿಂತ ಹೆಚ್ಚು (ಫೈಟೋಥೆರಾ ಆರೆಕಿಯಾ) ಕೊಳೆಯನ್ನು ಗುರುತಿ ಸಲಾಗಿತ್ತು. ಜತೆಗೆ ಮೇಯಲ್ಲಿ ಅಡಿಕೆ ಸಸಿಯನ್ನು ಬಾಧಿಸುವ ರೆಡ್‌ಮೈಟ್‌ (ಫಂಗಸ್‌ನಿಂದ ಸೋಗೆ ಕೆಂಪಾಗುವುದು) ರೋಗ ಈ ಬಾರಿ ಕೆಲವೆಡೆ ಮಾರ್ಚ್‌ನಲ್ಲೇ ಆವರಿಸಿದೆ. ಇದು ಅಡಿಕೆಯನ್ನೇ ನಂಬಿರುವ ಬೆಳೆಗಾರರಿಗೆ ಹೊಡೆತ ನೀಡಿದೆ.

ತಿಂಗಳಿಗೊಂದು ಅಡಿಕೆ ಸೋಗೆ ಕೆಂಪಾಗಿ ಬೀಳುವುದು ಸಹಜ. ಆದರೆ ಈ ರೋಗದಿಂದ ತಿಂಗಳಿಗೆ ನಾಲ್ಕೈದು ಸೋಗೆಗಳು ಉದುರುತ್ತಿವೆ. ಈಗಾಗಲೇ ರೈತರು ಬೋಡೋì ದ್ರಾವಣ, ಬೇವಿನ ಎಣ್ಣೆ, ಟಾಟಮಸ್ಟ್‌ ಸಿಂಪಡಿಸಿದ್ದಾರೆ. ಆದರೆ ರೋಗ ನಿಯಂತ್ರಣಕ್ಕೆ ಬಾರದಿರುವುದು ತಲೆ ನೋವಾಗಿ ಪರಿಣಮಿಸಿದೆ ಎಂದು ಕೃಷಿಕ ಗೋಪಾಲಕೃಷ್ಣ ಕಾಂಚೋಡು ಹೇಳಿತ್ತಾರೆ.

Advertisement

ಅಡಿಕೆಯ 3ನೇ ಕೊಯ್ಲು ಆಗಿದೆ. ಮಳೆಗಾಲಕ್ಕೆ ಮುನ್ನ ಮದ್ದು ಸಿಂಪಡನೆ ಮಾಡಬೇಕಿತ್ತು. ಆದರೆ ತಾಪಮಾನ ಏರಿಕೆಯಿಂದ ಹಿಂಗಾರ ಕರಟಿ ಮುಂದಿನ ವರ್ಷದ ಇಳುವರಿಗೆ ಹೊಡೆತ ಬೀಳಬಹುದು ಎಂಬುದು ಕೃಷಿ ತಜ್ಞರ ಅಭಿಪ್ರಾಯ.

ಇಲಾಖೆಯಿಂದ ಮಾಹಿತಿ
ತಾಪಮಾನ 37 ಡಿಗ್ರಿ ಸೆ.ಗಿಂತ ಹೆಚ್ಚಾದಲ್ಲಿ ಅಡಿಕೆ ಹಿಂಗಾರ ಹಾಗೂ ಸಿರಿ ಒಣಗುತ್ತದೆ. ಕೊಳೆ ರೋಗ ಮತ್ತು ರೆಡ್‌ಮೈಟ್‌ಗೆ ಡೈಕೋಫಾಲ್‌, ಬೇರುಹುಳು ಸಮಸ್ಯೆ ಕಂಡುಬಂದಲ್ಲಿ ರೋಗ ನಿಯಂತ್ರಣಕ್ಕೆ ದುಂಬಿಗಳನ್ನು ಆಕರ್ಷಿಸುವ ಬಲೆಗಳು, ತೋಟದ ಮಧ್ಯೆ ಬೆಂಕಿ ಹಾಕಿ ಹುಳಗಳ ನಾಶ, ಬುಡಕ್ಕೆ ಸುಣ್ಣ ಸಿಂಪಡಣೆಯಿಂದ ನಿಯಂತ್ರಣ ಸಾಧ್ಯ.
– ಎಚ್‌.ಆರ್‌. ನಾಯಕ್‌, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ದ.ಕ.

ಹಳದಿ ರೋಗದಿಂದ ಸ್ವಲ್ಪಮಟ್ಟಿಗೆ ಸಮಸ್ಯೆ ನಿವಾರಣೆ ಕಂಡುಕೊಳ್ಳುವ ಸಮಯದಲ್ಲಿ ಬಿಸಿಲು ಹೆಚ್ಚಾದ ಪರಿಣಾಮ ಹಿಂಗಾರವೇ ಕರಟಿ ಬೀಳುತ್ತಿದೆ. ಇದಕ್ಕೆ ಯಾವುದೇ ಮದ್ದು ಇಲ್ಲ. ನೀರಿದ್ದರೂ ಬೆಳೆ ಉಳಿಸಿಕೊಳ್ಳಲಾಗದ ಪರಿಸ್ಥಿತಿ ಬಂದೊಗಿದೆ.
– ಸುಬ್ರಹ್ಮಣ್ಯ ಭಟ್‌, ಕೃಷಿಕ, ಸುಳ್ಯ

ಬಂಟ್ವಾಳ ವ್ಯಾಪ್ತಿಯಲ್ಲಿ ಬೇರುಹುಳು ಸಮಸ್ಯೆ ಹೆಚ್ಚಾಗಿದೆ. ಹಿಂಗಾರವೂ ಕರಟಿದ್ದು, ನಮ್ಮ ಎರಡು ಎಕರೆ ತೋಟದಲ್ಲಿ 100ಕ್ಕೂ ಹೆಚ್ಚು ಗಿಡಗಳಿಗೆ ಕೊಳೆ ರೋಗ, ಬೇರುಹುಳು ಆವರಿಸಿದೆ. ಇನ್ನೆರಡು ತಿಂಗಳಲ್ಲಿ ಮಳೆ ಆರಂಭವಾದಾಗ ಎಲ್ಲ ಮರ ನೆಲಕ್ಕುರುಳುವ ಆತಂಕದಲ್ಲಿದ್ದೇವೆ.
– ಈಶ್ವರ ಭಟ್‌, ಕೃಷಿಕ, ಪುಣಚ

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next