Advertisement

ರೆಡ್‌ಮಿ ಪವರ್‌ಫ‌ುಲ್‌ ಬ್ಯಾಂಕ್‌

10:22 AM Mar 17, 2020 | mahesh |

ಶಿಯೋಮಿ ಕಂಪೆನಿ ರೆಡ್‌ಮಿ ಬ್ರಾಂಡ್‌ನ‌ಡಿ ಹೊಸ ಪವರ್‌ ಬ್ಯಾಂಕನ್ನು ಕೆಲವೇ ದಿನಗಳ ಹಿಂದೆ ಬಿಡುಗಡೆ ಮಾಡಿದೆ. ಮೊಬೈಲ್‌ಫೋನ್‌ ಹೊಂದಿರುವವರಿಗೆ ಪವರ್‌ಬ್ಯಾಂಕ್‌ ಇಂದು ಅಗತ್ಯ ಹೆಚ್ಚುವರಿ ಉಪಕರಣ. ಈ ಹೊಸ ಪವರ್‌ಬ್ಯಾಂಕ್‌ ಪ್ರಾಯೋಗಿಕ ಬಳಕೆ ಹೇಗಿದೆ? ಎಂಬುದರ ಮಾಹಿತಿ ಇಲ್ಲಿದೆ.

Advertisement

ಹಿಂದೆ ಕೀಪ್ಯಾಡ್‌ ಮೊಬೈಲ್‌ ಇದ್ದಾಗ, ನೋಕಿಯಾ 3310, 3315ನಂಥ ಮಾಡೆಲ್‌ಗ‌ಳಲ್ಲಿ ಇರುತ್ತಿದ್ದುದು ಕೇವಲ 700- 800 ಎಂಎಎಚ್‌ ಬ್ಯಾಟರಿ. ಅದು ಬೇಸಿಕ್‌ ಮೊಬೈಲ್‌ ಆಗಿದ್ದರಿಂದ ಅದರ ಕಾರ್ಯಾಚರಣೆಗೆ ಆ ಬ್ಯಾಟರಿ ಸಾಮರ್ಥ್ಯ ಸಾಕಾಗುತ್ತಿತ್ತು. 2- 3 ದಿನ ಬ್ಯಾಟರಿ ಬಾಳಿಕೆ ಬರುತ್ತಿತ್ತು. ಆದರೆ ಈಗ ಬರುವ ಸ್ಮಾರ್ಟ್‌ಫೋನ್‌ಗಳಲ್ಲಿ 4 ಸಾವಿರ, 5 ಸಾವಿರ ಎಂಎಎಚ್‌ ಬ್ಯಾಟರಿ ಸಾಮರ್ಥ್ಯ ಇದ್ದರೂ ಒಂದು ದಿನ ಬ್ಯಾಟರಿ ಬಂದರೆ ಅದೇ ಹೆಚ್ಚು ಎನ್ನುವಂತಾಗಿದೆ. ಕರೆ, ಮೆಸೇಜು ಮಾತ್ರವಲ್ಲದೇ ಸಿನಿಮಾ, ಟೇಪ್‌ ರೆಕಾರ್ಡರ್‌, ಟಿ.ವಿ, ಬ್ಯಾಟರಿ, ವಾಚು, ಕ್ಯಾಮರಾ, ಲ್ಯಾಪ್‌ಟಾÂಪ್‌, ಮ್ಯಾಪು ಎಲ್ಲದರ ಕೆಲಸವನ್ನೂ ಈಗ ಒಂದು ಮೊಬೈಲ್‌ ಮಾಡುತ್ತಿದೆ. ಹಾಗಾಗಿ ಸಹಜವಾಗಿಯೇ ಈಗಿನ ಮೊಬೈಲುಗಳು ಬ್ಯಾಟರಿ ಹೆಚ್ಚು ತಿನ್ನುತ್ತವೆ.

ಎರಡು ಮಾದರಿಗಳಲ್ಲಿ ಲಭ್ಯ
ಇಂಥ ಮೊಬೈಲುಗಳ ಬ್ಯಾಟರಿ ದಿನದ ಯಾವ ವೇಳೆ ಖಾಲಿಯಾಗುತ್ತದೆ ಎನ್ನುವುದು ಗೊತ್ತೇ ಆಗುವುದಿಲ್ಲ. ಮನೆಯಿಂದ ಹೊರಗಿದ್ದಾಗ ಹೀಗೆ ಬ್ಯಾಟರಿ ಖಾಲಿಯಾದರೆ ಆಗುವ ಫ‌ಜೀತಿ ಬಹಳ. ಇಂಥ ಸಮಸ್ಯೆಗೆ ಪರಿಹಾರವಾಗಿ ಬಂದದ್ದು ಪವರ್‌ಬ್ಯಾಂಕ್‌ಗಳು. ಪವರ್‌ಬ್ಯಾಂಕ್‌ಗಳನ್ನು ಫ‌ುಲ್‌ಚಾರ್ಜ್‌ ಮಾಡಿಕೊಂಡು ಹೊರ ಹೋಗುವಾಗ ಬ್ಯಾಗಿನಲ್ಲಿಟ್ಟುಕೊಂಡರೆ, ಮೊಬೈಲ್‌ನ ಬ್ಯಾಟರಿ ಖಾಲಿಯಾದಾಗ, ಅಥವಾ ಕಡಿಮೆ ಬ್ಯಾಟರಿಯಿದ್ದಾಗ ಚಾರ್ಜ್‌ ಮಾಡಿಕೊಳ್ಳಬಹುದು.

ಹಲವು ಕಂಪೆನಿಗಳ ಪವರ್‌ಬ್ಯಾಂಕ್‌ಗಳ ಪೈಕಿ ತನ್ನ ಛಾಪು ಮೂಡಿಸಿದ್ದು ಶಿಯೋಮಿ ಕಂಪೆನಿ. ಇಂದು ಒಳ್ಳೆಯ ಪವರ್‌ಬ್ಯಾಂಕ್‌ ಯಾವುದಿದೆ ಎಂದರೆ ತಕ್ಷಣ ನೆನಪಿಗೆ ಬರುವುದು ಶಿಯೋಮಿಯೇ. ಆಗಾಗ ಹೊಸ ಪವರ್‌ಬ್ಯಾಂಕ್‌ಗಳನ್ನು ಈ ಕಂಪೆನಿ ಬಿಡುಗಡೆ ಮಾಡುತ್ತಿದೆ. ಈ ಮುಂಚೆ ಮಿ ಪವರ್‌ಬ್ಯಾಂಕ್‌ ಎಂಬ ಹೆಸರಿನಲ್ಲಿ ಬರುತ್ತಿತ್ತು. ಈಗ ಬಂದಿರುವ ಹೊಸ ಪವರ್‌ಬ್ಯಾಂಕ್‌ ರೆಡ್‌ಮಿ ಹೆಸರು ಹೊತ್ತಿದೆ. ಎರಡು ಆವೃತ್ತಿಯಲ್ಲಿ ಹೊಸ ಪವರ್‌ಬ್ಯಾಂಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರೆಡ್‌ಮಿ 10000 ಎಂಎಎಚ್‌ ಪವರ್‌ಬ್ಯಾಂಕ್‌ (ದರ: 800 ರೂ.) ಮತ್ತು ರೆಡ್‌ಮಿ 20000 ಎಂಎಎಚ್‌ ಪವರ್‌ಬ್ಯಾಂಕ್‌ (ದರ: 1500 ರೂ.)

600 ಗ್ರಾಂ ತೂಕ
ಈ ಹೊಸ ಪವರ್‌ಬ್ಯಾಂಕ್‌ ಹಿಂದೆ ಬರುತ್ತಿದ್ದ ಮಿ ಪವರ್‌ಬ್ಯಾಂಕ್‌ಗಳಿಗಿಂತ ಆಕಾರ, ಬಣ್ಣ, ತೂಕದಲ್ಲಿ ತೀರಾ ಭಿನ್ನವಾಗಿದೆ. ಹಳೆಯ ಮಿ ಪವರ್‌ಬ್ಯಾಂಕ್‌ಗಳು ತೂಕ ಹೊಂದಿದ್ದವು, ಅಲ್ಯುಮಿನಿಯಂ ಕೇಸ್‌ ಹೊಂದಿದ್ದವು, ಆದರೆ ಹೊಸ ರೆಡ್‌ಮಿ ಪವರ್‌ ಬ್ಯಾಂಕ್‌ ಕೇವಲ 600 ಗ್ರಾಂ ತೂಕವಿದ್ದು, ಪ್ಲಾಸ್ಟಿಕ್‌ ಕವಚ ಹೊಂದಿದೆ. ಪರದೆ, ಕೀಪ್ಯಾಡ್‌ ಇಲ್ಲದಿದ್ದರೆ ಒಂದು ಮೊಬೈಲ್‌ ಹೇಗಿರಬಹುದೋ ಹಾಗಿದೆ. ಹಳೆಯ ಪವರ್‌ಬ್ಯಾಂಕ್‌ ಜೇಬಿಗೆ ಹಾಕಿಕೊಳ್ಳಲಾಗುತ್ತಿರಲಿಲ್ಲ. ಇದನ್ನು ಪ್ಯಾಂಟಿನ ಜೇಬಿಗೆ ಹಾಕಿಕೊಳ್ಳಬಹುದು. ತೆಳುವಾಗಿರುವುದರಿಂದ ಕೈಯಲ್ಲಿ ಹಿಡಿದುಕೊಳ್ಳಲು ಸಹ ಅನುಕೂಲಕರ.

Advertisement

ಟೈಪ್‌ ಸಿ ಫಾಸ್ಟ್‌ ಚಾರ್ಜ್‌ ಪೋರ್ಟ್‌
ರೆಡ್‌ಮಿ ಪವರ್‌ಬ್ಯಾಂಕಿನ ಮುಖ್ಯ ಅನುಕೂಲವೆಂದರೆ ಪವರ್‌ಬ್ಯಾಂಕ್‌ನ ಬ್ಯಾಟರಿ ಖಾಲಿಯಾದಾಗ ನೀವು ಈಗ ಬರುತ್ತಿರುವ ಟೈಪ್‌ ಸಿ ಚಾರ್ಜರ್‌ನಿಂದಲೂ ಚಾರ್ಜ್‌ ಮಾಡಿಕೊಳ್ಳಬಹುದು. ಅಥವಾ ಹಿಂದಿನ ಮೈಕ್ರೋ ಯುಎಸ್‌ಬಿ ಚಾರ್ಜರ್‌ನಲ್ಲೂ ಚಾರ್ಜ್‌ ಮಾಡಿಕೊಳ್ಳಬಹುದು. ಹಾಗಾಗಿ ಎರಡು ಪೋರ್ಟ್‌ಗಳನ್ನು ಇದಕ್ಕೆ ಚಾರ್ಜ್‌ ಮಾಡುವುದಕ್ಕಾಗಿಯೇ ನೀಡಲಾಗಿದೆ. ಅಲ್ಲದೇ ಈ ಪವರ್‌ಬ್ಯಾಂಕಿನಿಂದ ಎರಡು ಮೊಬೈಲ್‌ಗ‌ಳನ್ನು ಒಟ್ಟಿಗೇ ಚಾರ್ಜ್‌ ಮಾಡಿಕೊಳ್ಳುವ ಅನುಕೂಲ ಸಹ ಮಾಡಲಾಗಿದೆ. ಹಿಂದಿನ ಚಾರ್ಜರ್‌ಗಳನ್ನು ಚಾರ್ಜ್‌ ಮಾಡುವಾಗ ನಿಧಾನವಾಗುತ್ತಿತ್ತು. ಈ ಪವರ್‌ಬ್ಯಾಂಕ್‌ನಲ್ಲಿ ಟೈಪ್‌ ಸಿ ವೇಗದ ಚಾರ್ಜರ್‌ನಲ್ಲಿ ಚಾರ್ಜ್‌ ಮಾಡಿದರೆ 6 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್‌ ತುಂಬಿಕೊಳ್ಳುತ್ತದೆ. ಅಲ್ಲದೇ 10 ವ್ಯಾಟ್ಸ್‌ ಫಾಸ್ಟ್‌ ಚಾರ್ಜ್‌ ಸೌಲಭ್ಯ ಇರುವುದರಿಂದ ಮೊಬೈಲ್‌ಗ‌ಳಿಗೂ ವೇಗವಾಗಿ ಚಾರ್ಜ್‌ ಆಗುತ್ತದೆ.

ಮೂರು ಬಾರಿ ಚಾರ್ಜ್‌
ಈ ಪವರ್‌ಬ್ಯಾಂಕ್‌ 10 ಸಾವಿರ ಎಂಎಎಚ್‌ ಸಾಮರ್ಥ್ಯ ಹೊಂದಿರುವುದರಿಂದ, ಇದನ್ನು ಒಮ್ಮೆ ಚಾರ್ಜ್‌ ಮಾಡಿ ಇಟ್ಟುಕೊಂಡರೆ ನಿಮ್ಮ ಬಳಿ ಇರುವ ಮಿಡಲ್‌ ರೇಂಜ್‌ ಮೊಬೈಲನ್ನು ಎರಡರಿಂದ ಮೂರು ಬಾರಿ ಚಾರ್ಜ್‌ ಮಾಡಬಹುದು. ಫ್ಲಾಗ್‌ಶಿಪ್‌ ಮೊಬೈಲುಗಳಾದರೆ ಎರಡು ಬಾರಿ ಚಾರ್ಜ್‌ ಮಾಡಿಕೊಳ್ಳಬಹುದು. ಶಿಯೋಮಿ ಕಂಪೆನಿ ಮೊಬೈಲ್‌ ಫೋನ್‌ಗಳಿಗಿಂತಲೂ ಹೆಚ್ಚಾಗಿ ಅನೇಕ ರೀತಿಯ ಉಪಕರಣಗಳನ್ನು ನೀಡುತ್ತಿದೆ. ಪವರ್‌ಬ್ಯಾಂಕ್‌, ವಾಟರ್‌ಪ್ಯೂರಿಫ‌ಯರ್‌, ಶೇವರ್‌, ಮಾಸ್ಕ್, ಪೆನ್‌, ತಂಪು ಕನ್ನಡಕ, ನೀರಿನ ಟಿಡಿಎಸ್‌ ಟೆಸ್ಟರ್‌ ಇತ್ಯಾದಿಗಳು. ಹೊಸ ರೆಡ್‌ಮಿ ಪವರ್‌ಬ್ಯಾಂಕ್‌ ಸಹ, ಅದರ ದರ ಮತ್ತು ಅದು ನೀಡುವ ಅನುಕೂಲಗಳನ್ನು ಪರಿಗಣಿಸಿದಾಗ, ಗ್ರಾಹಕನಿಗೆ ಅಗತ್ಯವಾದ ಒಂದು ಗುಣಮಟ್ಟದ ಉತ್ಪನ್ನ ಎನ್ನಲಡ್ಡಿಯಿಲ್ಲ.

ಲೋ ಪವರ್‌ ಚಾರ್ಜಿಂಗ್‌
ನಿಧಾನಮೊಬೈಲ್‌ ಫೋನ್‌ಗಳಿಗಾದರೆ ವೇಗವಾಗಿ ಚಾರ್ಜ್‌ ಮಾಡಬೇಕು. ಆದರೆ ನಿಮ್ಮ ಬಳಿ ಬ್ಲೂಟೂತ್‌ ಇಯರ್‌ಫೋನ್‌, ಸ್ಮಾರ್ಟ್‌ಬ್ಯಾಂಡ್‌ ಇದ್ದರೆ ಅದಕ್ಕೆ ವೇಗದ ಚಾರ್ಜರ್‌ ಮೂಲಕ ಚಾರ್ಜ್‌ ಮಾಡಬಾರದು. (ಇದುವರೆಗೆ ಹಾಗೆ ಮಾಡುತ್ತಿದ್ದರೆ ಅದನ್ನು ತಪ್ಪಿಸಿ. ಸ್ಮಾರ್ಟ್‌ಬ್ಯಾಂಡ್‌ ಅಥವಾ ಇಯರ್‌ಫೋನನ್ನು 1ಎ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಚಾರ್ಜರ್‌ನಲ್ಲಿ ಚಾರ್ಜ್‌ ಮಾಡಿ.) ಹಾಗಾಗಿ ಈ ಚಾರ್ಜರ್‌ನಲ್ಲಿ ಕಡಿಮೆ ಸಾಮರ್ಥ್ಯದ ಚಾರ್ಜಿಂಗ್‌ ಆಯ್ಕೆಯನ್ನೂ ನೀಡಲಾಗಿದೆ. ಪವರ್‌ಬ್ಯಾಂಕ್‌ನ ಪವರ್‌ ಬಟನ್‌ಅನ್ನು ಡಬಲ್‌ ಪ್ರಸ್‌ ಮಾಡಿದರೆ ಲೋ ಪವರ್‌ ಚಾರ್ಜ್‌ ಮೋಡ್‌ಗೆ ಪರಿವರ್ತಿತವಾಗುತ್ತದೆ. ಆನಂತರ, ನಿಮ್ಮ ಬ್ಲೂಟೂತ್‌ ಇಯರ್‌ಫೋನ್‌, ಸ್ಮಾರ್ಟ್‌ಬ್ಯಾಂಡನ್ನು ಚಾರ್ಜ್‌ ಮಾಡಿಕೊಳ್ಳಬಹುದು.

– ಕೆ.ಎಸ್‌.ಬಿ. ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next