ಭಾರತದ ಮೊಬೈಲ್ ಮಾರುಕಟ್ಟೆಯ ಕಿಂಗ್ ಅನ್ನಿಸಿಕೊಂಡಿರು ಶಿಯೋಮಿ, ಇದೀಗ ರೆಡ್‌ಮಿ ನೋಟ್ 6 Pro ಹೆಸರಿನ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಕ್ರಮವಾಗಿ 14 ಹಾಗೂ 16 ಸಾವಿರ ರುಪಾಯಿ ಬೆಲೆಯ ಈ ಫೋನ್, ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಲಿದೆಯಾ ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ….
ಭಾರತದಲ್ಲಿ ಮೊಬೈಲ್ ಫೋನ್ ಮಾರಾಟದಲ್ಲಿ ನಂ. 1 ಸ್ಥಾನದಲ್ಲಿರುವ ಶಿಯೋಮಿ, ತನ್ನ ಇನ್ನೊಂದು ಹೊಸ ಫೋನನ್ನು ಕಳೆದ ಗುರುವಾರ ಬಿಡುಗಡೆ ಮಾಡಿದೆ. ಭಾರತದ ಮೊಬೈಲ್ ಮಾರುಕಟ್ಟೆ ಸೆಗ್‌ಮೆಂಟ್ ಅನ್ನು ಚೆನ್ನಾಗಿ ಅರಿತುಕೊಂಡಿರುವ ಶಿಯೋಮಿ ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ, ಸೇಫ್ ಝೋನ್‌ನಲ್ಲಿ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ತನ್ನ ಫ್ಲಾಗ್‌ಶಿಪ್ ಫೋನ್‌ಗಳನ್ನು ಬಿಡುಗಡೆ ಮಾಡದೇ, ಕೇವಲ, ಆರಂಭಿಕ ಹಾಗೂ ಮಧ್ಯಮ ದರ್ಜೆಯ ಫೋನ್‌ಗಳನ್ನಷ್ಟೇ ಬಿಡುತ್ತಿದೆ. ಮಧ್ಯಮ ದರ್ಜೆ ವಿಭಾಗದ ಫೋನ್‌ಗಳಲ್ಲೂ ಅಷ್ಟೇ, ಯಾವ ಹೊಸ ಆವಿಷ್ಕಾರ, ಹೊಸ ವಿನ್ಯಾಸಗಳಿಗೆ ಆದ್ಯತೆ ನೀಡದೇ ಹಳೆಯದನ್ನೇ ಸಣ್ಣಪುಟ್ಟ ಬದಲಾವಣೆ ಮಾಡಿ ಹೊಸದರಂತೆ ಬಿಡುಗಡೆ ಮಾಡುತ್ತಿದೆ.
ಈಗ ಬಿಡುಗಡೆ ಮಾಡಿರುವ ರೆಡ್ ಮಿ ನೋಟ್ 6 ಪ್ರೊ ಅಂಥದ್ದೇ ಫೋನ್. ಪ್ರಸ್ತುತ ಚೆನ್ನಾಗಿ ಮಾರಾಟವಾದ ರೆಡ್ ಮಿ ನೋಟ್ 5 ಪ್ರೊ ನ ಉತ್ತರಾಧಿಕಾರಿಯಾಗಿ 6 ಫೋನನ್ನು ಬಿಡುಗಡೆ ಮಾಡಲಾಗಿದೆ. ಹಿಂದಿನ 5 ಪ್ರೊಗೂ ಇದಕ್ಕೂ ಎರಡೇ ಎರಡು ವ್ಯತ್ಯಾಸ: ಇದಕ್ಕೆ ನಾಚ್ ಡಿಸ್‌ಪ್ಲೇ ನೀಡಲಾಗಿದೆ. ಸೆಲ್ಫಿà ಕ್ಯಾಮರಾಕ್ಕೆ 2 ಮೆಗಾಪಿಕ್ಸಲ್ ಹೆಚ್ಚುವರಿಯಾದ ಡುಯೆಲ್ ಲೆನ್ಸ್ ನೀಡಲಾಗಿದೆ. ಇವರೆರಡು ಫೀಚರ್ ಬಿಟ್ಟರೆ, ರೆಡ್ ಮಿ ನೋಟ್ 5 ಪ್ರೊ.ಗೂ, 6 ಪ್ರೊಗೂ ಇನ್ನೇನೂ ವ್ಯತ್ಯಾಸವಿಲ್ಲ. ಇದನ್ನು ರೆಡ್‌ಮಿ 6 ಪ್ರೊ ಎಂದು ಕರೆಯುವ ಬದಲು, ರೆಡ್‌ಮಿ 5 ಪ್ರೊ ಪ್ಲಸ್ ಎಂದು ಕರೆದಿದ್ದರೆ ಅರ್ಥಪೂರ್ಣವಾಗುತ್ತಿತ್ತು! ಇತ್ತೀಚೆಗೆ ರೆಡ್ ಮಿ ನೋಟ್ 5 ಪ್ರೊ ಕೊಂಡಿರುವವರಿದ್ದರೆ ನಿರಾಸೆ ಹೊಂದಬೇಕಾಗಿಲ್ಲ. ಹೊಸ ಫೋನ್‌ನಲ್ಲಿ ಇದಕ್ಕಿಂತ ಹೆಚ್ಚು ಅನುಕೂಲಗಳನ್ನು ನಿರೀಕ್ಷಿಸಿದ್ದ ಶಿಯೋಮಿ ಅಭಿಮಾನಿಗಳು, ಹೊಸ ಫೋನ್ ನೋಡಿ ಪುಳಕಗೊಂಡಿದ್ದಕ್ಕಿಂತ ನಿರಾಶೆ ಹೊಂದಿರುವುದೇ ಜಾಸ್ತಿ. ಅನೇಕರು ತಮ್ಮ ಸಿಟ್ಟನ್ನು ಎಂ ಐ ಇಂಡಿಯಾ ಫೇಸ್‌ಬುಕ್ ಪುಟದಲ್ಲಿ ವ್ಯಕ್ತಪಡಿಸಿದ್ದಾರೆ!
ಇರಲಿ, ಓವರಾಲ್ ರೆಡ್‌ಮಿ ನೋಟ್ 6 ಪ್ರೊ ಮೊಬೈಲ್‌ನಲ್ಲಿ ಏನೇನಿದೆ ನೋಡೋಣ. ಇದರಲ್ಲಿರುವ ಸ್ಪೆಸಿಫಿಕೇಷನ್‌ಗಳೆಲ್ಲಾ , ರೆಡ್ ಮಿ 5 ಪ್ರೊದಲ್ಲಿದ್ದದ್ದೇ, 8 ಕೋರ್‌ಗಳ ಕ್ವಾಲ್‌ಕ್ಯಾಂ ಸ್ನಾಪ್‌ಡ್ರಾಗನ್ 636 ಪ್ರೊಸೆಸರ್ (1.8 ಗಿಗಾ ಹಟ್ಜ್ì) ಹೊಂದಿದೆ. ಅಂಡ್ರಾಯ್ಡ ಓರಿಯೋ 8.1 ಆವೃತ್ತಿ ಹೊಂದಿದ್ದು, ಇದಕ್ಕೆ ಎಂಐ ಯೂಸರ್ ಇಂಟರ್‌ಫೇಸ್ ಸ್ಕಿನ್ ಇದೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸ್ಟೋರೇಜ್ ಮತ್ತು 6 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಇರುವ ಎರಡು ಆವೃತ್ತಿಗಳಿವೆ. ಡುಯೆಲ್ ಸಿಮ್ ಇದೆ. ಹೈಬ್ರಿಡ್ ಸ್ಲಿಂ ಸ್ಲಾಟ್ ಹೊಂದಿದೆ. (ಎರಡು ಸಿಮ್ ಅಥವಾ ಒಂದು ಸಿಮ್ ಮತ್ತು 256 ಜಿಬಿವರೆಗೂ ಮೆಮೊರಿ ಕಾರ್ಡ್ ಬಳಸಬಹುದು. ಎರಡು ಸಿಮ್ ಮತ್ತು ಮೆಮೊರಿ ಕಾರ್ಡ್ ಬಳಸಲಾಗದು)
ಈ ಮೊಬೈಲ್ ಗೆ ಕ್ವಿಕ್ ಚಾರ್ಜ್ ಸೌಲಭ್ಯ ಇದೆ. ವಿಚಿತ್ರವೆಂದರೆ, ಕಂಪೆನಿ ಇದಕ್ಕೆ ಫಾಸ್ಟ್ ಚಾರ್ಜರ್ ನೀಡಿಲ್ಲ. ಫಾಸ್ಟಾಗಿ ಬ್ಯಾಟರಿ ಚಾರ್ಜ್ ಮಾಡಬೇಕೆಂದರೆ ಗ್ರಾಹಕ ಪ್ರತ್ಯೇಕವಾಗಿ ಫಾಸ್ಟ್ ಚಾರ್ಜರ್ ಕೊಳ್ಳಬೇಕು!
6.26 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇದೆ. ಪರದೆಯ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಇರುವುದು ಬೋನಸ್. ಡಿಸ್‌ಪ್ಲೇ ನಾಚ್ ಇದೆ. ಆದರೆ ಅದು ತುಂಬಾ ಅಗಲವಾಗಿದೆ. 12 ಮೆಗಾಪಿಕ್ಸಲ್ ಪ್ಲಸ್ 5 ಮೆಗಾಪಿಕ್ಸಲ್ (ಡುಯಲ್ ಲೆನ್ಸ್) ಹಿಂಬದಿ ಕ್ಯಾಮರಾ, 20 ಮೆಗಾಪಿಕ್ಸಲ್ ಮತ್ತು 2 ಮೆಗಾಪಿಕ್ಸಲ್ (ಡುಯಲ್ ಲೆನ್ಸ್) ಸೆಲ್ಫಿà ಕ್ಯಾಮರಾ ಇದೆ. ಬ್ಯಾಟರಿ ವಿಭಾಗದಲ್ಲಿ ಶಿಯೋಮಿ ಭಾರತದ ಗ್ರಾಹಕರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದೆ. ಹಾಗಾಗಿ ಈ ಫೋನ್ ಸಹ 4000 ಎಂಎಎಚ್ ಬ್ಯಾಟರಿ ಹೊಂದಿದೆ. ಮೈಕ್ರೋ ಯುಎಸ್‌ಬಿ ಪೋರ್ಟ್ ಹೊಂದಿದ್ದು, ಆಡಿಯೋಗೆ 3.5 ಎಂಎಂ ಜಾಕ್ ಹಾಕಿಕೊಳ್ಳುವ ಸೌಲಭ್ಯ ಇದೆ. 4 + 64 ಜಿಬಿ ವರ್ಷನ್‌ಗೆ ದರ 14 ಸಾವಿರ ರೂ. 6+64 ಜಿಬಿ ವರ್ಷನ್‌ಗೆ 16 ಸಾವಿರ ರೂ. ಫ್ಲಿಪ್ ಕಾರ್ಟ್ ಮತ್ತು ಮಿ.ಕಾಮ್ ಸ್ಟೋರ್‌ನಲ್ಲಿ ಲಭ್ಯ. ಅಲ್ಲದೇ ಎಂಐನ ಆಫ್ಲೈನ್ ಸ್ಟೋರ್‌ಗಳಲ್ಲೂ ಶೀಘ್ರವೇ ಲಭ್ಯವಾಗಲಿದೆ.
– ಕೆ.ಎಸ್. ಬನಶಂಕರ ಆರಾಧ್ಯ