Advertisement
ಕೃಷ್ಣನ ಲೆಕ್ಕದ ವ್ಯಾಪಾರಸ್ಥರು ಮಾರುಕಟ್ಟೆಗಿಂತ ಎರಡ್ಮೂರು ಸಾವಿರ ಹೆಚ್ಚು ಕೊಟ್ಟು ಖರೀದಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳಿಂದ ಬರುತ್ತಿದ್ದ ಕಳಪೆ ಅಡಿಕೆ ಗಡಿ ಘರ್ಷಣೆ ಕಾರಣ ನಿಂತಿರುವುದರಿಂದ ಸ್ಥಳೀಯವಾಗಿ ಅಡಿಕೆಗೆ ಉತ್ತಮ ಬೆಲೆ ಸಿಕ್ಕಿದೆ. ಈಗಿರುವ ಬೆಲೆಯೇ ಉತ್ತಮ ಎಂದು ರೈತರು ಮಾರಿದರೆ ಉತ್ತಮ ಬೆಲೆ ಸಿಗಲಿದೆ. 43 ಸಾವಿರ ಇದ್ದ ಬೆಲೆ 60 ಸಾವಿರ ಸಿಕ್ಕರೂ ಲಾಭ, 50 ಸಾವಿರಕ್ಕೆ ಮಾರಿದರೂ ಲಾಭವೇ ಎನ್ನುತ್ತಾರೆ ವ್ಯಾಪಾರಸ್ಥರು.
Related Articles
Advertisement
ಚಿತ್ರದುರ್ಗ: ಕಳೆದೊಂದು ವರ್ಷದಿಂದ 35ರಿಂದ 42 ಸಾವಿರದೊಳಗಿದ್ದ ಬಯಲುಸೀಮೆಯ ರಾಶಿ ಅಡಿಕೆಗೆ ಈಗ ಬಂಪರ್ ಬೆಲೆ ಬಂದಿದೆ. ಕಳೆದ 15 ದಿನಗಳಿಂದ ನಿರಂತರ ಏರಿಕೆ ಯಾಗುತ್ತಿರುವ ಅಡಿಕೆ ಬೆಲೆ ಇನ್ನೂ ಏರುತ್ತಲೇ ಇದೆ.
ಅಡಿಕೆ ಬೆಲೆ ಏರಿಕೆಯಾಗಿರುವುದರಿಂದ ಬೆಳೆಗಾರರಿಗೆ ಲಾಭವಾಗಬಹುದು ಎನ್ನುವುದು ಎಲ್ಲರ ಲೆಕ್ಕಾಚಾರ. ಆದರೆ ಕಳೆದ ನಾಲ್ಕೈದು ವರ್ಷದಿಂದ 35 ರಿಂದ 40 ಸಾವಿರದೊಳಗಿದ್ದ ಅಡಿಕೆ ಬೆಲೆ ಏಕಾಏಕಿ 40 ಸಾವಿರದ ಗಡಿ ದಾಟಿ 50 ಸಾವಿರ ತಲುಪುವುದರೊಳಗೆ ಬಹುಪಾಲು ರೈತರು ಮತ್ತೆ ಇಳಿಕೆಯಾದರೆ ಎಂದು ಆತಂಕದಿಂದಲೇ ಮಾರಾಟ ಮಾಡಿದ್ದಾರೆ. ಈಗ 60 ಸಾವಿರದ ಆಸುಪಾಸಿಗೆ ಬರುತ್ತಲೇ ರೈತರ ಕೈಯಲ್ಲಿ ಅಡಿಕೆ ಇಲ್ಲದೆ ಚಡಪಡಿಕೆ ಶುರುವಾಗಿದೆ.
ವರ್ತಕರ ನಿದ್ದೆಗೆಡಿಸಿದ ಬೆಲೆ ಸಮರ: ರೈತರಿಂದ ಅಡಿಕೆ ಖರೀದಿ ಸಿರುವ ವರ್ತಕರು ತಮ್ಮ ಗೋಡೌನ್‌ಗಳಲ್ಲಿ ಅಡಿಕೆ ಸ್ಟಾಕ್ ಮಾಡಿಕೊಂಡಿದ್ದಾರೆ. ಕೆಲವರು ಖರೀದಿ ಮೇಲೆ ನಾಲ್ಕೈದು ಸಾವಿರ ಲಾಭಕ್ಕೆ ಮಾರಿ ಸಮಾಧಾನ ಪಟ್ಟು ಕೊಂಡರೆ, ಹಲವರು ಇನ್ನೂ ಏರಿಕೆಯಾಗಬಹುದು ಎನ್ನುವ ಆಶಾಭಾವನೆಯಿಂದ ಕಾಯುತ್ತಿದ್ದಾರೆ. ಇದರೊಟ್ಟಿಗೆ ಬೆಲೆ ಏಕಾಏಕಿ 35-40 ಸಾವಿರಕ್ಕೆ ಬಂದರೆ ಗತಿಯೇನು ಎಂಬ ದಿಗಿಲು ಕೂಡ ಕಾಡುತ್ತಿದೆ.
ಬೆಳೆಗಾರರಲ್ಲಿ ಸಂಭ್ರಮ :
ತುಮಕೂರು: ಜಿಲ್ಲೆಯಲ್ಲಿ 65,771 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಪ್ರಸ್ತುತ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 6,568, ಗುಬ್ಬಿ 20,724, ಕೊರಟಗೆರೆಯಲ್ಲಿ 2,458, ಕುಣಿಗಲ್ 3,148, ತುರುವೇಕೆರೆಯಲ್ಲಿ 5,326 ಮತ್ತು ತುಮಕೂರು ತಾಲೂಕಿನ 11,354 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಭೀಮಸಮುದ್ರ ಮತ್ತು ಶಿವಮೊಗ್ಗ ಮಾರುಕಟ್ಟೆಯ ಜತೆಗೆ ಸ್ಥಳೀಯವಾಗಿಯೂ ಕೆಲವು ವರ್ತಕರಿಗೆ ಬೆಳೆಗಾರರು ಮಾರಾಟ ಮಾಡುತ್ತಿದ್ದಾರೆ.
ರೈತರು ತೋಟಗಳನ್ನು ಚೇಣಿದಾರರಿಗೆ ನೀಡುವ ಪದ್ಧತಿ ಜಿಲ್ಲೆಯಲ್ಲಿದ್ದು, ಬಹುತೇಕ ರೈತರು ಚೇಣಿದಾರರಿಗೆ ಕ್ವಿಂಟಾಲ್ ಅಡಿಕೆಗೆ 6,000 ದಿಂದ 7,000 ರೂ.ಗೆ ಮಾರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಂದು ಕ್ವಿಂಟಾಲ್ ಅಡಿಕೆಗೆ 16 ರಿಂದ 18 ಕೆ.ಜಿ. ತೂಕದ ಅಡಿಕೆ ಉಂಡೆ ಬರುತ್ತಿದೆ.
ಇದೇ ಗರಿಷ್ಠ ಬೆಲೆ? :
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ 60,500 ರೂ. ಗರಿಷ್ಠ ಬೆಲೆ ಎನ್ನುತ್ತಾರೆ. ಬೆಲೆ ಯಾವಾಗ ಹಿಮ್ಮುಖವಾಗಲು ಶುರುವಾಗಲಿದೆಯೋ ಅಲ್ಲಿಗೆ ಓಟ ನಿಂತಿದೆ ಎಂದರ್ಥ. ಸೋಮವಾರ 60,500 ರೂ.ಗೆ ಹೋಗಿದ್ದ ರಾಶಿ ಕೆಂಪಡಿಕೆ ಬೆಲೆ ಮಂಗಳ ವಾರ 58,099 ರೂ. ಬಂದಿದೆ. 43 ಸಾವಿರಕ್ಕಿಂತ ಉತ್ತಮ ಬೆಲೆಗೆ ಸ್ಥಿರಗೊಳ್ಳಬಹುದು ಎಂಬುದು ವಿಶ್ಲೇಷಣೆ.
ಕೆಂಪಡಿಕೆ ಇಳಿಕೆ; ಚಾಲಿ ಏರಿಕೆ :
ಶಿರಸಿ: ಶಿರಸಿ ಅಡಿಕೆ ವ್ಯಾಪಾರಿ ಅಂಗಳದಲ್ಲಿ ಮಂಗಳವಾರ ಕೆಂಪಡಿಕೆ ಬೆಲೆಯಲ್ಲಿ ಇಳಿಮುಖ ವಾಗಿದ್ದರೆ, ಚಾಲಿ ಅಡಿಕೆ ಬೆಲೆ ಏರಿಕೆಯಾಗಿದೆ. ಇದರಿಂದ ಬೆಲೆಯ ಅನಿಶ್ಚಿತತೆ ಮತ್ತೆ ಆತಂಕ ಮೂಡಿಸಿದೆ.
ಶ್ರಾವಣ ಆರಂಭದಲ್ಲಿ ಕೆಂಪಡಿಕೆಗೆ 41 ಸಾವಿರದಿಂದ ನೂರು, ಇನ್ನೂರು ಏರಿಕೆ ಆಗುತ್ತ ಕಳೆದೊಂದು ವಾರದಿಂದ ಪ್ರತೀದಿನ ಒಂದು, ಒಂದೂವರೆ ಸಾವಿರ ರೂ. ಏರಿಕೆ ಮುಖದಲ್ಲಿ 53, 54 ಸಾವಿರ ರೂ. ತನಕ ಶಿರಸಿ, ಯಲ್ಲಾಪುರ, ಸಿದ್ದಾಪುರ ಮಾರು ಕಟ್ಟೆಯಲ್ಲಿ ವಹಿವಾಟು ಆಗಿತ್ತು. ಸರಾಸರಿ 52 ಸಾವಿರ ರೂ. ಪ್ರತೀ ಕ್ವಿಂಟಾಲ್ ಅಡಿಕೆಗೆ ಲಭ್ಯವಾಗುತ್ತಿತ್ತು. ಆದರೆ ಸೋಮ ವಾರ ಒಂದೇ ದಿನ ಕೆಂಪಡಿಕೆ ಬೆಲೆಯಲ್ಲಿ 2 ಸಾವಿರ ರೂ. ಕುಸಿತ ಆಗಿದೆ.
ಬೆಳೆಗಾರರಿಗಿಲ್ಲ ಬೆಲೆ ಏರಿಕೆ ಲಾಭ :
ದಾವಣಗೆರೆ: ಅಡಿಕೆ ದರ ಗಗನಮುಖೀಯಾಗುತ್ತಿರುವುದು ಬಯಲುಸೀಮೆಯ ಅಡಿಕೆ ಬೆಳೆಗಾರರಲ್ಲಿ ಖುಷಿ ಮೂಡಿಸಿದೆಯಾದರೂ ಮಾರಾಟ ಮಾಡಲು ರೈತರ ಬಳಿ ಸಾಕಷ್ಟು ಅಡಿಕೆಯೇ ಇಲ್ಲ. ಹೀಗಾಗಿ ಗಗನಮುಖೀ ಬೆಲೆ ಬಹುತೇಕ ರೈತರ ಪಾಲಿಗೆ ದೊರಕದಂತಾಗಿದೆ.
ಜಿಲ್ಲೆಯ 50,000 ಎಕರೆ ಇಳುವರಿ ಪ್ರದೇಶ ಸೇರಿ ಒಟ್ಟು 75,000 ಎಕರೆ ಅಡಿಕೆ ಬೆಳೆಯುವ ಪ್ರದೇಶವಿದೆ. ಪ್ರಸ್ತುತ ಹಂಗಾಮು ಇಲ್ಲದ ಸಮಯ ಇದಾಗಿದ್ದು, ಹಳೇ ಅಡಿಕೆ ದಾಸ್ಥಾನು ಎಲ್ಲ ರೈತರ ಬಳಿ ಇಲ್ಲ. ಕೆಲವೇ ಕೆಲವು ದೊಡ್ಡ ರೈತರ ಬಳಿ ಮಾತ್ರ ಒಂದಿಷ್ಟು ಹಳೇ ಅಡಿಕೆಯಿದ್ದು ಈ ಸಮ ಯದಲ್ಲಿ ಹಳೆ ರಾಶಿ ಅಡಿಕೆ ಕ್ವಿಂಟಾಲ್‌ಗೆ ಗರಿಷ್ಠ 60,500 ರೂ.ಗೆ ಮಾರಾಟವಾಗಿದೆ.
ಜಿಲ್ಲೆಯ ಬಹುತೇಕ ರೈತರು ಬೆಳೆದ ಅಡಿಕೆ ಇನ್ನೂ ತೋಟದಲ್ಲಿಯೇ ಇದೆ. ಮಳೆ-ತಂಪು ವಾತಾವರಣ ಮುಂದುವರಿದಿರುವುದರಿಂದ ಅಡಿಕೆ ಮಾರುಕಟ್ಟೆಗೆ ಬರಲು ಇನ್ನೂ ಒಂದರಿಂದ ಒಂದೂವರೆ ತಿಂಗಳಾದರೂ ಬೇಕು. ಇನ್ನು ಹೆಚ್ಚಿನ ಬೆಲೆಯ ಆಸೆಗೆ ಬಿದ್ದು ಹಸಿ ಬಿಸಿ ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಗುಣಮಟ್ಟ ಇಲ್ಲದ ಕಾರಣಕ್ಕೆ ತಿರಸ್ಕಾರಗೊಳ್ಳುವ ಭಯವೂ ರೈತರನ್ನು ಕಾಡುತ್ತಿದೆ.
ಬೆಳೆಗಾರರಿಗೆ ಚೌತಿ ಕೊಡುಗೆ :
ಪುತ್ತೂರು: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದ್ದು ಐನೂರರ ಸನಿಹಕ್ಕೆ ತಲುಪಿದೆ. ಒಟ್ಟಿನಲ್ಲಿ ಬೆಳೆಗಾರರಿಗೆ ಚೌತಿ ಕೊಡುಗೆ ಕಾದಿದೆ. ಕ್ಯಾಂಪ್ಕೋ ಹಾಗೂ ಹೊರ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯ ಪೈಪೋಟಿ ಮುಂದುವರಿದಿದ್ದು ಮಂಗಳವಾರ ಹೊರ ಮಾರುಕಟ್ಟೆಯಲ್ಲಿ ಧಾರಣೆಯ ಏರಿಕೆಯ ನಾಗಾಲೋಟ ಮುಂದುವರಿದಿತ್ತು.
ಸೆ.7 ರಂದು ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 476 ರಿಂದ 480 ರೂ.ತನಕ ಇತ್ತು. ಹಳೆ ಅಡಿಕೆ ಧಾರಣೆ 505 ರೂ.ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 470, ಹಳೆ ಅಡಿಕೆ ಧಾರಣೆ 505 ರೂ. ಗಳಷ್ಟಿತ್ತು. ಕಳೆದ ಒಂದು ವಾರದಲ್ಲಿ ಹೊಸ ಅಡಿಕೆ ಧಾರಣೆಯು 20 ರಿಂದ 30 ರೂ. ತನಕ ಏರಿಕೆ ಕಂಡಿತು.
ತಟ್ಟದ ಕೋವಿಡ್ ಬಿಸಿ: ಎಲ್ಲ ಕ್ಷೇತ್ರಗಳಲ್ಲಿ ಕೋವಿಡ್ ಬಿಸಿ ತಟ್ಟಿದರೂ ಅಡಿಕೆ ಕೃಷಿಕರಿಗೆ ಮಾತ್ರ ಲಾಭವೇ ಆಗಿದೆ. ಲಾಕ್ ಡೌನ್ ಬಳಿಕ ಅಡಿಕೆ ಆಧಾರಿತ ಉತ್ಪನ್ನಗಳ ವ್ಯವಹಾರ ನಡೆಸುವ ಉತ್ತರ ಭಾರತದಲ್ಲಿ ಅಡಿಕೆ ಕೊರತೆ ಉಂಟಾಗಿತ್ತು. ಲಾಕ್‌ಡೌನ್ ಸಡಿಲಿಕೆಗೊಂಡ ಅನಂತರ ಮಂಗ ಳೂರು ಚಾಲಿ ಅಡಿಕೆಗೆ ಭಾರೀ ಬೇಡಿಕೆ ವ್ಯಕ್ತವಾ ಗಿದೆ. ಆದರೆ ಫಸಲು ಕೊರತೆಯ ಕಾರಣದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗಿಲ್ಲ. ಪರಿಣಾಮ ಧಾರಣೆ ಗಗನಕ್ಕೇರಿದೆ.
ಹೊಸ ಕೆಂಪಡಿಕೆ ತಯಾರಿಗೆ ಮಳೆ ಅಡ್ಡಿಯಾಗಿದೆ. ವಿದೇಶಿ ಅಡಿಕೆ ಕೂಡ ನಿರ್ಬಂಧದ ಕಾರಣದಿಂದ ದರ ಸ್ಥಿರತೆಗೆ ಕಾರಣವಾಗಿದೆ. ಮಳೆ ಹಾಗೂ ಅಡಿಕೆ ಕೊರತೆಯಿಂದ ಕೆಂಪಡಿಕೆ ದರ ಏರಿದೆ. ಚಾಲಿ ಅಡಿಕೆಗೆ ಭವಿಷ್ಯ ಇದ್ದು, ನವರಾತ್ರಿ ಬಳಿಕ ಈಗಿನ ದರಕ್ಕಿಂತ ಹೆಚ್ಚು ಸಿಗಬಹುದು.-ರವೀಶ ಹೆಗಡೆ, ಟಿಎಸ್‌ಎಸ್ ವ್ಯವಸ್ಥಾಪಕ
ಅಕ್ರಮವಾಗಿ ಬರುತ್ತಿದ್ದ ಕಳಪೆ ಅಡಿಕೆಗೆ ತಡೆ ಹಾಗೂ ಆಮದಿಗೆ ಬಿಗಿ ಕ್ರಮ ಕೈಗೊಂಡಿದ್ದು, ಪ್ರಸ್ತುತ ಅಡಿಕೆ ಹಂಗಾಮು ಇಲ್ಲದೇ ಇರುವುದರಿಂದ ಉತ್ತಮ ಬೆಲೆ ಬಂದಿದೆ. ಆದರೆ ಮಾರು ಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾಗಿಲ್ಲ.-ರವಿ ಆರ್.ಎಂ., ಅಧ್ಯಕ್ಷರು, ತುಮ್ನೋಸ್, ಚನ್ನಗಿರಿ