ಬೆಂಗಳೂರು: ವಿಶ್ವಾದ್ಯಂತ ಇಂದು (ಮೇ.8) ರೆಡ್‌ಕ್ರಾಸ್ ದಿನ ಆಚರಿಸಲಾಗುತ್ತಿದೆ. “ಜನರಿಂದ ಜನರಿಗೆ ನೆರವು’ ಎಂಬ ಕಲ್ಪನೆಯೊಂದಿಗೆ ಆರಂಭವಾದ ರೆಡ್‌ಕ್ರಾಸ್‌ನ ಈ ಬಾರಿಯ ಧ್ಯೇಯವಾಕ್ಯ “ರೆಡ್‌ಕ್ರಾಸ್ ಬಗ್ಗೆ ಒಲವು” ಎಂದಾಗಿದೆ.
ರಕ್ತದಾನದಿಂದಾಗುವ ಅನುಕೂಲತೆ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದ್ದು, ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ರಕ್ತ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ವರ್ಷಕ್ಕೆ 1.25 ಲಕ್ಷ ಯೂನಿಟ್ ರಕ್ತ ಕೊರತೆಯಿದೆ. ಆದ್ದರಿಂದ ರಕ್ತದಾನಿಗಳ ಸಂಖ್ಯೆ ಗಣನೀಯ ಪ್ರಮಾಣವಾಗಿ ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ರೆಡ್‌ಕ್ರಾಸ್ ದಿನ ಆಚರಿಸಿ ಜಾಗೃತಿ ಮೂಡಿಸಲಾಗುತ್ತಿದೆ.
ರಾಜ್ಯದಲ್ಲಿ ರಕ್ತದ ಬೇಡಿಕೆ ಏರಿಕೆಯಾಗುತ್ತಿದ್ದು, ವರ್ಷಕ್ಕೆ 6 ಲಕ್ಷ ಯೂನಿಟ್ ರಕ್ತದ ಅಗತ್ಯವಿದೆ. ಆದರೆ, 1.25 ಲಕ್ಷ ಯೂನಿಟ್ ರಕ್ತದ ಕೊರತೆ ಕಾಡುತ್ತಿದೆ. ನಿತ್ಯ 1,600 ಯೂನಿಟ್ ರಕ್ತಕ್ಕೆ ಬೇಡಿಕೆಯಿದ್ದು, ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ 35,758 ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದೆ.
ಪ್ರತಿ ತಿಂಗಳು 50 ಸಾವಿರ ಯೂನಿಟ್ ರಕ್ತದ ಬೇಡಿಕೆ ಇದ್ದು, ಅದರಲ್ಲಿ ಶೇ. 4ರಷ್ಟು (ಕಳೆದ ವರ್ಷ 22,500 ಯೂನಿಟ್) ರಕ್ತ ರೆಡ್ ಕ್ರಾಸ್, ಖಾಸಗಿ ರಕ್ತ ನಿಧಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ಸಂಗ್ರಹವಾಗಿದೆ ಎಂದು ಭಾರತೀಯ ರೆಡ್‌ಕ್ರಾಸ್‌ನ ಕರ್ನಾಟಕ ಶಾಖೆಯ ಅಧ್ಯಕ್ಷ ನಾಗಣ್ಣ ತಿಳಿಸಿದರು.
ರೆಡ್‌ಕ್ರಾಸ್ ವತಿಯಿಂದ 2015-20,454, 2016- 23,892, 2017- 32,554, 2018-35,758 2019(ಮೇ.6)- 12,166 ಯುನಿಟ್ ರಕ್ತ ಸಂಗ್ರಹಿಸಲಾಗಿದೆ ಬೆಂಗಳೂರು ಘಟಕದಲ್ಲಿ 35 ಸಾವಿರಕ್ಕೂ ಹೆಚ್ಚು ರಕ್ತವನ್ನು ಪೂರೈಕೆ ಮಾಡಲಾಗುತ್ತಿದೆ. ನೈಸರ್ಗಿಕ ವಿಪತ್ತುಗಳು ಸಂಭವಿಸುವ ಸಂದರ್ಭದಲ್ಲಿ ರೆಡ್‌ಕ್ರಾಸ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ರಾಜ್ಯದಲ್ಲಿ ರಕ್ತಕ್ಕೆ ಕೊರತೆ ಎದುರಾಗದಂತೆ ಸಾಕಷ್ಟು ರಕ್ತ ಸಂಗ್ರಹಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ರೆಡ್‌ಕ್ರಾಸ್ ವತಿಯಿಂದ ರಕ್ತ ನೀಡಲಾಗುತ್ತಿದೆ ಎಂದು ತಿಳಿಸಿದರು.