Advertisement

ರೆಡ್‌ಕ್ರಾಸ್‌ ಶಿಬಿರದ ಅನುಭವ

12:30 AM Mar 15, 2019 | |

ಕಾಲೇಜು ಜೀವನದಲ್ಲಿ ಓದಿನೊಂದಿಗೆ ಹಲವಾರು ಇತರ ಚಟುವಟಿಕೆಗಳು ಬರುತ್ತದೆ. ಅದರಲ್ಲಿ ರೆಡ್‌ಕ್ರಾಸ್‌ ಕೂಡ ಒಂದು. ಕೇವಲ ಎನ್‌ಎಸ್‌ಎಸ್‌ ಕ್ಯಾಂಪ್‌ ಬಗ್ಗೆ ಅನುಭವ ಇದ್ದ ನನಗೆ ಒಮ್ಮೆಗೇ ರೆಡ್‌ಕ್ರಾಸ್‌ ಕ್ಯಾಂಪ್‌ಗೆ ಹೋಗು ಎಂದಾಗ ಸ್ವಲ್ಪ ಭಯವಾಯಿತಾದರೂ ಧೈರ್ಯ ಮಾಡಿ ನಾನು ಹೊರಟೇಬಿಟ್ಟೆ. 

Advertisement

ಕ್ಯಾಂಪ್‌ಗೆ ಕರ್ನಾಟಕದ ಬೇರೆ ಬೇರೆ ಕಡೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಅಂದಾಜು ಒಂದು ಹದಿನೈದರಿಂದ ಹದಿನೆಂಟು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಡುಪಿಗೆ ಕ್ಯಾಂಪ್‌ಗಾಗಿ ಆಗಮಿಸಿದ್ದರು. ನಾವು ಉಡುಪಿಯವರಾದರೂ ಕೂಡ ಒಂದೊಮ್ಮೆ ಹೊಸ ಮುಖಗಳನ್ನು ನೋಡಿದಾಗ ಬೇರೆ ಊರಿಗೆ ಬಂದ ಅನುಭವ ಆಗಿತ್ತು. ಅಂತೂ ಕೊನೆಗೆ ಹಾಗೋ ಹೀಗೋ ಅಳುಕಿನಿಂದಲೇ ಎಲ್ಲರೊಂದಿಗೆ ಪರಿಚಯ ಮಾಡಿಕೊಂಡಾಯಿತು. ರೆಡ್‌ಕ್ರಾಸ್‌ ಬಗ್ಗೆ ಸ್ವಲ್ಪ ತಿಳಿಯಿತಾದರೂ ಸಂಪೂರ್ಣ ವಿಷಯವನ್ನು  ತಿಳಿದುಕೊಳ್ಳುವ ಮನಸ್ಸಾಯಿತು. ಅದಕ್ಕೆ ಸರಿಯಾಗಿ ರೆಡ್‌ ಕ್ರಾಸ್‌ನಲ್ಲಿನ ಒಂದೊಂದು ವಿಷಯದ ಬಗ್ಗೆ ತರಗತಿಗಳೂ ಆರಂಭವಾದವು. ಎಲ್ಲಾ ವಿದ್ಯಾರ್ಥಿಗಳು ರೆಡ್‌ಕ್ರಾಸ್‌ನ ಚಿಹ್ನೆ  (+) ಇರುವಂಥ ಕೋಟ್‌ನ್ನು ಧರಿಸಿ, ರೆಡ್‌ಕ್ರಾಸ್‌ನ ಸ್ವಯಂಸೇವಕರು ಎಂಬಂಥ ಜವಾಬ್ದಾರಿಯನ್ನು ಹೊತ್ತೆವು.

ರೆಡ್‌ ಕ್ರಾಸ್‌ನ್ನು  ಹುಟ್ಟು ಹಾಕಿದವರು ಹೆನ್ರಿ ಡುನಂಟ್‌ ಎಂಬುವರು, ಈ ಜಗತ್ತಿನಲ್ಲಿರುವ ಜನರ ಪಾಲಿಗೆ ರೆಡ್‌ಕ್ರಾಸ್‌ ಎನ್ನುವುದು ಒಂದು ಸಂಜೀವಿನಿಯ ಹಾಗೆ. ರೆಡ್‌ಕ್ರಾಸ್‌ ಸಂಸ್ಥೆಯು ಅನಾರೋಗ್ಯ ಪೀಡಿತರಿಗೆ, ಗಾಯಾಳುಗಳಿಗೆ ಸಾವು-ಬದುಕಿನ ಮಧ್ಯ ಹೋರಾಡುತ್ತಿರುವವರಿಗೆ ಸಹಾಯಹಸ್ತವನ್ನು  ಚಾಚುತ್ತದೆ. ಅಷ್ಟೇ ಅಲ್ಲ, ನಮ್ಮ ಹಾಗೇ ಅದೆಷ್ಟೋ ಸ್ವಯಂಸೇವಕರು ಜಗತ್ತಿನಾದ್ಯಂತ ಇಂದು ರೆಡ್‌ಕ್ರಾಸ್‌ ಸಂಸ್ಥೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದಾರೆ. ಜಗತ್ತಿನಲ್ಲಿರುವ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯು ಇದಾಗಿದೆ ಎಂದು ಹೇಳಿದರೂ ತಪ್ಪಾಗಲಾರದು. ಅಲ್ಲದೆ ಪ್ರತಿವರ್ಷ ಮೇ 8 ರಂದು ಜಗತ್ತಿನಾದ್ಯಂತ ರೆಡ್‌ ಕ್ರಾಸ್‌ ದಿನವನ್ನು  ಕೂಡ ಆಚರಿಸಲು ನಿರ್ಧರಿಸಲಾಗಿದೆ. ರೆಡ್‌ಕ್ರಾಸ್‌ನಲ್ಲಿನ ಒಂದು ಪ್ರಮುಖ ವಿಶೇಷವೆಂದರೆ, ರೆಡ್‌ಕ್ರಾಸ್‌ನ ಸ್ವಯಂಸೇವಕರು ತಮ್ಮ ಪ್ರಾಣದ ಹಂಗು ತೊರೆದು ಜನರು, ಪ್ರಾಣಿಗಳನ್ನು ರಕ್ಷಿಸಲು ಮುಂದಾಗುತ್ತಾರೆ! ಇದರ ಬಗ್ಗೆ ಏನೂ ತಿಳಿಯದ ನಾವು ಇವೆಲ್ಲ ವಿಷಯವನ್ನು ಒಂದು ಐದು ನಿಮಿಷದ ವಿಡಿಯೋದ  ಮೂಲಕ ನಾವು ತಿಳಿದುಕೊಂಡೆವು. ಅದರಲ್ಲಿ ಒಂದೊಂದು ಸಿನಿಮೀಯ ರೀತಿಯ ದೃಶ್ಯಗಳಿದ್ದರೂ ಕೂಡ ಅವೆಲ್ಲ ನಿಜಸಂಗತಿ ಎಂದು ತಿಳಿದು ಒಮ್ಮೆಲೆ ಮೈಯ್‌ “ಜುಂ’ ಎಂದಿತು. 

ರೆಡ್‌ಕ್ರಾಸ್‌  ಕ್ಯಾಂಪಿನಲ್ಲಿ ಪ್ರವಾಹ, ಜ್ವಾಲಾಮುಖೀ, ಸುನಾಮಿ ಇಂಥ ಸಂದರ್ಭಗಳಲ್ಲಿಯೂ ಜನರನ್ನು ಹೇಗೆ ರಕ್ಷಿಸಬೇಕು, ಅದೇ ರೀತಿ ಆ ಸಮಯದಲ್ಲಿ ಯಾವ ಯಾವ ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕು ಎಂದೂ ತಿಳಿಸಿದರು. ನೆರೆಯಲ್ಲಿ ಸಿಲುಕಿರುವ ಜನರಿಗೆ ಆಹಾರದ ಪೂರೈಕೆ ಹೇಗೆ ಮಾಡಬೇಕು, ಯಾವೆಲ್ಲ ಆಹಾರ ನೀಡಿದರೆ ಸೂಕ್ತ ಎಂಬ ಎಲ್ಲ ವಿಷಯಗಳನ್ನು ತಿಳಿಸಿದರು. 

ಇದರೊಂದಿಗೆ  ರೆಡ್‌ಕ್ರಾಸ್‌ನ ಸ್ವಯಂ ಸೇವಕಿಯಾದ ಶ್ರುತಿ ಮೇಡಂ ಇವರು ರಕ್ತದಾನ, ನೇತ್ರದಾನದ ಮಹತ್ವದೊಂದಿಗೆ ಮನುಷ್ಯನ ಶರೀರದಲ್ಲಿರುವ ಅಂಗಾಗ ದಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು, ಅದರೊಂದಿಗೆ ಮಾನವ ದೇಹಕ್ಕೆ ಬೇಕಾಗುವ  ಉಪಯುಕ್ತ ಪದಾರ್ಥಗಳ ಬಗ್ಗೆ ಎಲ್ಲ ಸ್ವಯಂಸೇವಕರಿಗೂ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು. 

Advertisement

ಕೇವಲ ಇದಿಷ್ಟೇ ವಿಷಯವಲ್ಲ, ಇದರ ನಡುವೆ ಸ್ವಯಂಸೇವಕರಲ್ಲಿನ ಪ್ರತಿಭೆಯ ಅನಾವರಣಕ್ಕಾಗಿ ಹಲವಾರು ಅವಕಾಶಗಳನ್ನು  ನೀಡಲಾಯಿತು. ಸಮಯ ಪಾಲನೆ, ನಾಯಕತ್ವ ಗುಣ, ಶಿಸ್ತು , ಬದ್ಧತೆ, ಸ್ವತ್ಛತೆ  ಇವೆಲ್ಲ ವಿಷಯಗಳ ಬಗ್ಗೆ ನಮಗೆ ತಿಳಿದಿದ್ದರೂ ಕೂಡ ಶಿಬಿರದಲ್ಲಿ ಮತ್ತೆ ಅದನ್ನು ತಿಳಿ ಹೇಳಲಾಯಿತು. 

ಮನೋವೈದ್ಯರು ಮನಸ್ಸಿಗೆ ಸಂಬಂಧಿಸಿದ  ವಿಷಯದ ಬಗ್ಗೆ ತಿಳಿಸಿದರೆ, ಮಂಗಳೂರಿನ ರಾಮಕೃಷ್ಣ  ಮಿಷನ್‌ನವರು ಸ್ವತ್ಛ  ಸೋಚ್‌ ಎನ್ನುವ ಹೆಸರಿನಲ್ಲಿ ಸ್ವತ್ಛತೆಯ ಬಗ್ಗೆ ಅರಿವು, ಹಾಗೆಯೇ ಕಸವನ್ನು ವಿಲೇವಾರಿ ಮಾಡಬೇಕಾದ ಬಗೆ, ಸ್ವತ್ಛತೆಯಲ್ಲಿ ತಮ್ಮನ್ನು  ತಾವು ತೊಡಗಿಸಿಕೊಳ್ಳಬೇಕಾದ ರೀತಿ ಎಲ್ಲವನ್ನು ತಿಳಿಸಿಕೊಟ್ಟರು. ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಸಾಧ್ಯವಿಲ್ಲವಾದರೂ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕಡಿಮೆಯಾಗಿ ಹೇಗೆ ಬಳಸಬೇಕು ಎಂಬುದನ್ನು ಹೇಳಿದರು.  

ಹೃದಯಸ್ತಂಭನವಾದ ವ್ಯಕ್ತಿಗೆ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು ಅದಕ್ಕಾಗಿ ಯಾವೆಲ್ಲ ಕ್ರಮವನ್ನು ಅನುಸರಿಸಬೇಕು ಎಂಬುದನ್ನು ತಿಳಿಸಿದರು, ಕೊನೆಯ ದಿನದಲ್ಲಿ ಸಿಪಿಆರ್‌ (cardio pulmonary Resuscitation)  ನ ಬಗ್ಗೆ ಮತ್ತು ಅದರಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸಾ ಕ್ರಮದ ಬಗ್ಗೆ ಪ್ರತಿಯೊಬ್ಬ ಸ್ವಯಂಸೇವಕರಿಗೂ ತರಬೇತಿಯನ್ನು ನೀಡಲಾಯಿತು.

ಇದನ್ನೆಲ್ಲ ನಮಗೆ ಕಲಿಯಲು ಅವಕಾಶ ಮಾಡಿಕೊಟ್ಟ ರೆಡ್‌ಕ್ರಾಸ್‌ ಉಡುಪಿ ಘಟಕ ಹಾಗೂ ಶಿಬಿರಕ್ಕೆ ಹೋಗಲು ಅನುಮತಿಸಿದ ನಮ್ಮ ಕಾಲೇಜಿನ ಪ್ರಾಂಶುಪಾಲರು ಮತ್ತು ರೆಡ್‌ ಕ್ರಾಸ್‌ನ ಸಂಯೋಜನಾಧಿಕಾರಿಗಳಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ.

ದಿವ್ಯಾ ಡಿ. ಶೆಟ್ಟಿ
ಕಾನೂನು ವಿದ್ಯಾರ್ಥಿನಿ, ವೈಕುಂಠ ಬಾಳಾಗ ಲಾ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next