ಬೆಂಗಳೂರು: ಬೆಂಬಲ ಬೆಲೆಯಡಿ ಕುಚಲಕ್ಕಿ ಖರೀದಿಗೆ ರಾಜ್ಯ ಸರಕಾರ ತೀರ್ಮಾನಿಸಿದ್ದು, ಜನವರಿಯಿಂದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಡಿತರದಲ್ಲಿ ಲಭ್ಯವಾಗಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿಯ ಮೂರೂ ಜಿಲ್ಲೆಗಳ 6.20 ಲಕ್ಷ ಪಡಿತರ ಚೀಟಿದಾರರಿಗೆ ಜನವರಿಯಿಂದ ಕೆಂಪು ಕುಚಲಕ್ಕಿಯನ್ನು ವಿತರಿಸಲಾಗುವುದು. ಎರಡು ಕೆ.ಜಿ. ಸಾಮಾನ್ಯ ಅಕ್ಕಿ, ಮೂರು ಕೆ.ಜಿ. ಕುಚಲಕ್ಕಿ ನೀಡಲಾಗುತ್ತದೆ ಎಂದರು.
ಕುಚಲಕ್ಕಿಯನ್ನು ಪಡಿತರ ಮೂಲಕ ಪೂರೈಸಬೇಕೆಂದು ಮೂರೂ ಜಿಲ್ಲೆಗಳ ಜನರು ಆಗ್ರಹಿಸಿದ್ದು, ಇದಕ್ಕೆ ಈಗ ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದರು.
ಡಿಸೆಂಬರ್‌ನಲ್ಲಿ ಕುಚಲಕ್ಕಿ ಭತ್ತ (ಜಯ, ಎಂಒ4, ಅಭಿಲಾಷಾ, ಜ್ಯೋತಿ ತಳಿ) ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ. ಅದಕ್ಕೆ ಹೆಚ್ಚುವರಿ ಮೊತ್ತ ಕೊಡಲು ರಾಜ್ಯ ಸರಕಾರ ಸಮ್ಮತಿಸಿದೆ ಎಂದರು.
ಈಗ ಕೇಂದ್ರ ಸರಕಾರ ಭತ್ತಕ್ಕೆ ಬೆಂಬಲ ಬೆಲೆಗೆ ಪ್ರತಿ ಕ್ವಿಂಟಾಲ…ಗೆ 2,040 ರೂ. ಕೊಡುತ್ತಿದೆ. ನಾವು ಕುಚಲಕ್ಕಿ ಭತ್ತಕ್ಕೆ 500 ರೂ. ಹೆಚ್ಚುವರಿಯಾಗಿ ಸೇರಿಸಿ ಒಟ್ಟು 2,540 ರೂ. ಬೆಲೆಗೆ ಖರೀದಿಸುತ್ತೇವೆ. 13 ಲಕ್ಷ ಕ್ವಿಂಟಾಲ… ಭತ್ತ ಖರೀದಿಯ ಗುರಿ ಇದೆ. ಇದಕ್ಕೆ 132 ಕೋಟಿ ರೂ.ವೆಚ್ಚವಾಗಲಿದೆ. ಬೆಂಬಲ ಬೆಲೆ ನೀಡಿ ಖರೀದಿ ಮಾಡಿದ ಭತ್ತವನ್ನು ಸ್ಥಳೀಯವಾಗಿಯೇ ಸಂಸ್ಕರಿಸುವುದಾಗಿ ತಿಳಿಸಿದರು.
ಆತ್ಮರಕ್ಷಣೆ ಕಲೆ ಸಂಬಂಧ ಸಮವಸ್ತ್ರ ಖರೀದಿಗೆ ಹೆಚ್ಚುವರಿ ಹಣದ ಅಗತ್ಯ ಇದೆ. ಈಗಾಗಲೇ ಕರಾಟೆ ಕಲಿಯುವ ವಿದ್ಯಾರ್ಥಿನಿಯರಿಗೆ ಸಮವಸ್ತ್ರಕ್ಕಾಗಿ 176 ಕೋಟಿ ರೂ. ಬಾಕಿ ಇತ್ತು. ಅದನ್ನು ಪಾವತಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.