Advertisement

ರೆಡ್‌ ಅಲರ್ಟ್‌!

09:56 PM Aug 20, 2019 | mahesh |

ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ ಈ ನೀತಿ-ನಿಯಮಗಳು ಅನ್ವಯವಾಗಲ್ಲ. ಯಾಕಂದ್ರೆ, ಕೆಂಪು ಬಣ್ಣ ಈಗಿನ ಟ್ರೆಂಡ್‌. ಅದರಲ್ಲೂ ಕೆಂಬಣ್ಣದ ಪಾದರಕ್ಷೆಗಳು ಬೋಲ್ಡ್‌ ಹುಡುಗೀರ ಸ್ಟೈಲ್‌ ಸ್ಟೇಟ್‌ಮೆಂಟ್‌…

Advertisement

ಕೆಂಪು ಬಣ್ಣ ಪ್ರೀತಿಯ ಸಂಕೇತ ಎನ್ನುತ್ತಾರೆ. ಅದು ಅಪಾಯ ಮತ್ತು ಅಶುಭದ ಸಂಕೇತ ಅಂತ ನಂಬುವವರೂ ಇದ್ದಾರೆ. ಕುಂಕುಮದ ಈ ಬಣ್ಣಕ್ಕೆ ನಮ್ಮ ಸಂಪ್ರದಾಯದಲ್ಲಿ ಮರ್ಯಾದೆ ಮತ್ತು ಗೌರವವೂ ಇದೆ. ಅದರಲ್ಲೂ ಹೆಂಗಳೆಯರು, ಗಾಢ ಬಣ್ಣದ ಕೆಂಪು ಬಣ್ಣಕ್ಕೆ ಮಾರು ಹೋಗಿದ್ದಾರೆ. ಸೀರೆ, ಲೆಹೆಂಗ, ಸಲ್ವಾರ್‌, ಲಿಪ್‌ಸ್ಟಿಕ್‌, ನೇಲ್‌ಪಾಲಿಶ್‌ ಖರೀದಿಯಲ್ಲಿ, ಕೆಂಪು ಬಣ್ಣಕ್ಕೇ ಹೆಚ್ಚು ಆದ್ಯತೆ ಕೊಡುತ್ತಾರೆ. ಅಷ್ಟೇ ಅಲ್ಲ, ಕೆಂಪು ಬಣ್ಣದ ಪಾದರಕ್ಷೆಗಳೂ ಹುಡುಗೀರ ಮನಸ್ಸು ಕದ್ದಿವೆ.

ಕೆಂಪು ಬಣ್ಣ ಎಲ್ಲರ ಗಮನ ಸೆಳೆಯುತ್ತದೆ. ಅದಕ್ಕಾಗೇ, ಅಪಾಯದ ಸಂಕೇತವಾಗಿ ಕೆಂಪು ಬಣ್ಣದ ಚಿಹ್ನೆಯನ್ನು ಬಳಸುವುದು. ಫ್ಯಾಷನ್‌ ಲೋಕದಲ್ಲೂ ಅಷ್ಟೇ, ಎಲ್ಲರ ಕಣ್ಮನ ಸೆಳೆಯುವ ಬಣ್ಣ ಕೆಂಪು. ಸರಳ ಉಡುಗೆ ತೊಟ್ಟಾಗಲೂ, ಗಾಢ ಕೆಂಪು ಬಣ್ಣದ ಪಾದರಕ್ಷೆ ಧರಿಸಿದರೆ ಎಲ್ಲರ ಗಮನ ಸೆಳೆಯಬಹುದು. ಕೆಂಪುಬಣ್ಣದ ಹೈಹೀಲ್ಸ್‌, ಬೂಟ್ಸ್‌, ಶೂಸ್‌, ಸ್ಲಿಪ್‌ಆಸ್ಟ್, ಸ್ಯಾಂಡಲ್ಸ…, ಚಪ್ಪಲಿ… ಹೀಗೆ, ಧರಿಸುವ ಉಡುಪು ಟ್ರೆಡಿಷನಲ್‌ ಆಗಿದ್ದರೂ, ಪಾರ್ಟಿವೇರ್‌ ಆಗಿದ್ದರೂ ಅದಕ್ಕೆ ಸರಿಯಾದಂಥ ಕೆಂಪು ಪಾದರಕ್ಷೆಗಳನ್ನು ಮ್ಯಾಚ್‌ ಮಾಡಬಹುದು.

ಹಾಲಿವುಡ್‌ ಟಚ್‌
ನೀವು ವಿದೇಶಿ ಜಾನಪದ ಕಥೆ, ಕಿನ್ನರಿಯರ ಕಥೆ, ಸಿನಿಮಾ, ನಾಟಕ, ನೃತ್ಯ ಮತ್ತು ಫ್ಯಾಷನ್‌ ಶೋಗಳನ್ನು ನೋಡಿದ್ದರೆ, ಅಲ್ಲಿ ಕೆಂಪು ಬಣ್ಣದ ಪಾದರಕ್ಷೆಗೆ ಪ್ರಾಮುಖ್ಯ ನೀಡುವುದನ್ನು ಗಮನಿಸಿರಬಹುದು. ಅದೇ ರೀತಿ ಬ್ಯಾಲೆ ನೃತ್ಯಗಾತಿಯರು, ಪಾಪ್‌ ತಾರೆಯರು, ಹಾಲಿವುಡ್‌ ನಟಿಯರು, ರೂಪದರ್ಶಿಯರು ಹೆಚ್ಚಾಗಿ ಗಾಢ ಕೆಂಪು ಬಣ್ಣದ ಪಾದರಕ್ಷೆಗಳನ್ನು ಧರಿಸುತ್ತಾರೆ.

ಮಕ್ಕಳಿಗೂ ಇಷ್ಟ
ಮಿನಿಮೌಸ್‌, ಲಿಟಲ್‌ ರೆಡ್‌ ರೈಡಿಂಗ್‌ಹುಡ್‌, ಸಾಂಟಾಕ್ಲಾಸ್‌, ಸೂಪರ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌, ಪುಸ್‌ಇನ್‌ಬೂಟ್ಸ್‌ನಂಥ ಕಾಟೂìನ್‌ ಪಾತ್ರಗಳೂ ಕೆಂಪು ಬೂಟು ತೊಟ್ಟು ಮೆರೆದಿವೆ. ಹಾಗಾಗಿ, ಮಕ್ಕಳ ಪಾದರಕ್ಷೆಗಳಲ್ಲೂ ಕೆಂಪುಬಣ್ಣದ ವೈವಿಧ್ಯಮಯ ಆಯ್ಕೆಗಳಿವೆ.

Advertisement

ಬೋಲ್ಡ್‌ ಅಂಡ್‌ ಬಿಂದಾಸ್‌
ಫ್ಯಾಷನ್‌ ಸಮೀಕ್ಷೆಗಳ ಪ್ರಕಾರ ಕೆಂಪು ಬಣ್ಣ, ಹುಡುಗಿಯರ ಆತ್ಮವಿಶ್ವಾಸದ ಸಂಕೇತ ಎಂದು ಗುರುತಿಸಲಾಗುತ್ತದೆ. ಗಾಢ ಕೆಂಪುಬಣ್ಣದ ಪಾದರಕ್ಷೆ, ದಿರಿಸು, ಲಿಪ್‌ಸ್ಟಿಕ್‌, ನೇಲ್‌ಪಾಲಿಶ್‌ ಹಾಗೂ ಇತರೆ ಫ್ಯಾಷನ್‌ ಆ್ಯಕ್ಸೆಸರಿಸ್‌ಗಳನ್ನು ಧರಿಸುವವರು ಬೋಲ್ಡ್‌ ಅಂಡ್‌ ಬಿಂದಾಸ್‌ ಮನೋಭಾವದ ಹುಡುಗಿಯರು ಅನ್ನುತ್ತವೆ ಸಮೀಕ್ಷೆಗಳು. ನೀವೂ ಯಾಕೆ, ಕೆಂಪುಬಣ್ಣದ ಪಾದರಕ್ಷೆಗಳನ್ನು ಧರಿಸಿ ಟ್ರೆಂಡ್‌ ಸೆಟ್‌ ಮಾಡಬಾರದು?

ಪ್ರತಿಷ್ಠೆಯ ಸಂಕೇತ
ವಿದೇಶಗಳಲ್ಲಿ ಕೆಂಪುಬಣ್ಣದ ಪಾದರಕ್ಷೆ ಧರಿಸುವುದನ್ನು ಪ್ರತಿಷ್ಠೆಯ ಸಂಕೇತ (ಸ್ಟೇಟಸ್‌ ಸಿಂಬಲ…) ಎಂದು ಗುರುತಿಸಲಾಗುತ್ತಿತ್ತು. ಮಹಿಳೆ-ಪುರುಷ ಎಂಬ ಭೇದವಿಲ್ಲದೆ, ತಮ್ಮನ್ನು ತಾವು ಮೇಲ್ವರ್ಗದವರು ಎಂದು ಹೇಳಿಕೊಳ್ಳುತ್ತಿದ್ದ ರಾಜಕಾರಣಿಗಳು, ಮಂತ್ರಿಗಳು, ರಾಜಮನೆತನದವರು, ಜಮೀನ್ದಾರರು ಮಾತ್ರವೇ ಕೆಂಪು ಬಣ್ಣದ ಪಾದರಕ್ಷೆಗಳನ್ನು ಧರಿಸಬಹುದಾಗಿತ್ತಂತೆ. ಕೆಂಪು ಪಾದರಕ್ಷೆ ತೊಟ್ಟವರು, ಸಮಾಜದ ಗಣ್ಯ ವ್ಯಕ್ತಿ ಅಥವಾ ಮನೆತನಕ್ಕೆ ಸೇರಿದವನು ಅಂತ ಅರ್ಥವಿತ್ತಂತೆ. ಬೇರೆಯವರು ಅದನ್ನು ಧರಿಸಲು ಹಿಂಜರಿಯುತ್ತಿದ್ದರಂತೆ. ವಸ್ತು ಸಂಗ್ರಹಾಲಯದಲ್ಲಿ ಇಟ್ಟಿದ್ದ ಗಣ್ಯ ವ್ಯಕ್ತಿಯ, ಬೆಲೆ ಬಾಳುವ ಕೆಂಪುಬಣ್ಣದ ಜೋಡಿ ಪಾದರಕ್ಷೆಯಯನ್ನು ಯಾರೋ ಕದ್ದೊಯ್ದ ಘಟನೆಯೂ ವಿದೇಶದಲ್ಲಿ ನಡೆದಿತ್ತು!

ಎಲ್ಲವೂ ಕೆಂಪಾಗದಿರಲಿ
1. ನ್ಯೂಟ್ರಲ್‌ ಕಲರ್‌ ( ಬೂದು, ಕಂದು, ಕೆನೆ ಬಣ್ಣ, ಕಪ್ಪು, ಬಿಳಿ, ತಿಳಿನೀಲಿ) ಬಟ್ಟೆಯ ಜೊತೆಗೆ ಕೆಂಪು ಪಾದರಕ್ಷೆ ಧರಿಸಬಹುದು.
2. ಕೆಂಪು ಪಾದರಕ್ಷೆಗಳು ಎಲ್ಲರ ಗಮನ ಸೆಳೆಯುವುದರಿಂದ ಉಳಿದ ಎಲ್ಲವೂ (ಡ್ರೆಸ್‌, ಮೇಕಪ್‌, ಆ್ಯಕ್ಸೆಸರೀಸ್‌) ಸಿಂಪಲ್‌ ಆಗಿರಲಿ.
3. ಕೆಂಪು ಲಿಪ್‌ಸ್ಟಿಕ್‌, ಹ್ಯಾಂಡ್‌ಬ್ಯಾಗ್‌ ಓಕೆ. ಆದರೆ, ರೆಡ್‌ ಸ್ಕಾಫ್ì, ರೆಡ್‌ ಬೆಲ್ಟ್, ರೆಡ್‌ ಬ್ರೇಸ್‌ಲೆಟ್‌ ಅಂತ ಎಲ್ಲವೂ ಕೆಂಪಾಗುವುದು ಬೇಡ.
4. ರೆಡ್‌ ಹೈ ಹೀಲ್ಸ್‌ಗಳು ಪಾರ್ಟಿವೇರ್‌ ಉಡುಪಿನ ಜೊತೆಗೆ ಟ್ರೆಂಡಿಯಾಗಿ ಕಾಣುತ್ತೆ.
5. ಪ್ರೇಮಿಗಳ ದಿನ, ಆ್ಯನಿವರ್ಸರಿಯಂಥ ಸಂದರ್ಭಗಳಲ್ಲಿ ಪ್ರೀತಿಯ ಸಂಕೇತವಾಗಿ ಜೋಡಿಗಳು, ಕೆಂಪು ಬಣ್ಣದ ಪಾದರಕ್ಷೆಗಳನ್ನು ಧರಿಸಬಹುದು.
6. ಗಾಢ ಕೆಂಪು ಹಾಗೂ ಹಸಿರು ದಿರಿಸಿನ ಜೊತೆ ಕೆಂಪು ಪಾದರಕ್ಷೆ ಅಷ್ಟು ಚಂದ ಅನ್ನಿಸುವುದಿಲ್ಲ.

– ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next