ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧದ ನಡುವೆಯೂ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಇದೀಗ ನೇಮಕಾತಿ ಪ್ರಕ್ರಿಯೆ ಪ್ರಕಟಣೆಯಲ್ಲೂ ಪ್ರತ್ಯೇಕವಾಗಿ ವಿಜಯನಗರ ಜಿಲ್ಲೆ ಎಂದೇ ನಮೂದಿಸಿದ್ದು, ಬಳ್ಳಾರಿ ಇಬ್ಭಾಗ ಆಗುವುದು ಪಕ್ಕಾ ಎಂಬಂತಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ ವತಿಯಿಂದ ವಿವಿಧ ಯೋಜನೆಯಡಿ ವಿಜಯನಗರ ಜಿಲ್ಲೆಗೆ ಗುತ್ತಿಗೆ ಆಧಾರದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆ ವಿಭಜಿಸದೆ ಅಖಂಡವಾಗಿ ಮುಂದುವರಿಸಬೇಕೆಂದು ಕಳೆದ ಒಂದು ತಿಂಗಳಿಂದ ಬಳ್ಳಾರಿಯಲ್ಲಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಿವೆ. ಜತೆಗೆ ಡಿ.14ರಿಂದ ಡಿಸಿ ಕಚೇರಿ ಎದುರು ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದ್ದು, ಪ್ರತಿ ದಿನ ಒಂದೊಂದು ಸಂಘಟನೆಗಳು ಧರಣಿ ನಡೆಸುತ್ತಿದೆ.
ಅಲ್ಲದೇ, ಡಿ.23ರಂದು ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಅವರನ್ನೇ ನೇರವಾಗಿ ಭೇಟಿಯಾಗಿದ್ದ ಸಮಿತಿ ಸದಸ್ಯರು, ಜಿಲ್ಲೆ ವಿಭಜನೆ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸಚಿವರು ಸಹ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಹೋರಾಟಗಾರರ ಅಹವಾಲು ಆಲಿಸಿ, ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ.
ಇಷ್ಟೆಲ್ಲ ವಿರೋಧಗಳ ಮಧ್ಯೆಯೂ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸರ್ಕಾರದ ಹಂತದಲ್ಲಿ ಸದ್ದಿಲ್ಲದೇ ಕೆಲಸ ಕಾರ್ಯಗಳು ನಡೆಯುತ್ತಿವೆ. ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಡಿ.24ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ “ವೇಕೆಂಟ್ ಡಿಸ್ಟ್ರಿಕ್ಟ್; ವಿಜಯನಗರ’ ಎಂದೇ ನಮೂದಿಸಿರುವುದು ಕುತೂಹಲ ಮೂಡಿಸಿದೆ.
ಹುದ್ದೆಗಳು ಯಾವ್ಯಾವು?: ಜಿಪಂ ಕಚೇರಿಯ ಸ್ವತ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು (ಐಇಸಿ), ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು (ಎಸ್‌ಎಚ್‌ಪಿ), ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಸಮಾಲೋಚಕರು , ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಮಾಲೋಚಕರು (ಎಂಐಎಸ್/ಎಂ.ಇ), ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಹುದ್ದೆಗಳಿಗೆ ಅನುಭವವುಳ್ಳ ಸಂಪನ್ಮೂಲ ವ್ಯಕ್ತಿಗಳನ್ನು ಒಂದು ವರ್ಷದ ಅವಧಿ ಗೆ ಮಾಸಿಕ 22 ಸಾವಿರ ರೂ. ವೇತನಕ್ಕೆ ನೇಮಕಾತಿ ಮಾಡಿಕೊಳ್ಳಲು ಜಿಪಂ ಪ್ರಕಟಣೆ ಹೊರಡಿಸಿದೆ.
ಈ ಮಧ್ಯೆ ವಿಜಯನಗರ ಜಿಲ್ಲಾ ಕೇಂದ್ರ\ ಹೊಸಪೇಟೆಯ ಜೋಳದರಾಶಿ ಗುಡ್ಡದಲ್ಲಿ ಶ್ರೀಕೃಷ್ಣದೇವರಾಯರ ಬೃಹತ್ ಪುತ್ಥಳಿ ನಿರ್ಮಾಣ ಮತ್ತು ಮೂಲ ಸೌಲಭ್ಯ ಕಲ್ಪಿಸಲು ಡಿ.17ರಂದು ಸಚಿವ ಆನಂದ್ ಸಿಂಗ್ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಬೇಕಾದ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲೆ ಇಬ್ಭಾಗಕ್ಕೆ ಎಷ್ಟೇ ವಿರೋಧ ವ್ಯಕ್ತವಾದರೂ ಪ್ರತ್ಯೇಕ ವಿಜಯನಗರ ಜಿಲ್ಲಾ ರಚನೆ ಯಾರಿಂದಲೂ ತಡೆಯಲಾಗದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ವೆಂಕೋಬಿ ಸಂಗನಕಲ್ಲು